ADVERTISEMENT

ಶುಕ್ರವಾರ, 22–3–1968

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST

ಕೃಷ್ಣಾ ಜಲ ವಿವಾದ ಇತ್ಯರ್ಥಕ್ಕೆ ಕಾನೂನು ಕ್ರಮ ಮೈಸೂರಿನ ದಿಟ್ಟ ಹೆಜ್ಜೆ: ಶಾಸಕರಿಂದ ಸ್ವಾಗತ

ಬೆಂಗಳೂರು, ಮಾ. 21– ಕೃಷ್ಣಾ ಜಲ ವಿವಾದ ಇತ್ಯರ್ಥಕ್ಕಾಗಿ ಕಾನೂನಿನ ಪ್ರಕಾರ ಮುಂದುವರಿಯಲು ರಾಜ್ಯದ ಅಡ್ವೊಕೇಟ್ ಜನರಲ್‌ರವರಿಗೆ ಸಂಪೂರ್ಣ ಅಧಿಕಾರ ನೀಡಿ, ವಿವಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರಿಗೆ ಒಪ್ಪಿಸಲಾಗಿದೆ.

ಈ ವಿವಾದ ಕುರಿತ ಅಂತರರಾಜ್ಯ ಮಾತುಕತೆ ಮುರಿದುಬಿದ್ದಿದೆ.

ADVERTISEMENT

ಜಲನ್ಯಾಯ ಒದಗಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗುವ ಮುನ್ನ ಕೇಂದ್ರ ಸರ್ಕಾರಕ್ಕೆ ನೀಡಬೇಕಾಗಿರುವ ನೋಟೀಸಿನ ಬಗ್ಗೆ ಅಡ್ವೊಕೇಟ್ ಜನರಲ್ ಅವರು ಶೀಘ್ರದಲ್ಲೇ ಕ್ರಮ ಕೈಗೊಳ್ಳುವರು.

ಜೋರ್ಡಾನ್ ವಿರುದ್ಧ ಇಸ್ರೇಲ್ ಉಗ್ರ ದಾಳಿ

ಟೈಲ್ ಅವೀವ್, ಮಾ. 21– ಜೋರ್ಡಾನಿನ ಕದನವಿರಾಮ ರೇಖೆಯಾಚೆ ಇರುವ ವಿಧ್ವಂಸಕ ಕೃತ್ಯಗಳ ಹಾಗೂ ಭಯೋತ್ಪಾದಕರ ನೆಲೆಗಳ ವಿರುದ್ಧ ಇಸ್ರೇಲಿ ಪಡೆಗಳು ಇಂದು ಕಾರ್ಯಾಚಾರಣೆ ಪ್ರಾರಂಭಿಸಿದವೆಂದು ಸೈನಿಕ ವಕ್ತಾರರು ಇಂದು ಇಲ್ಲಿ ಹೇಳಿದರು.

ಅಂಚೆ ಕಾರ್ಡ್ ದರ ಇಳಿಯದು

ನವದೆಹಲಿ, ಮಾ. 21– ಅಂಚೆ ದರ ಏರಿಕೆಯಲ್ಲಿ ಸ್ವಲ್ಪ ರಿಯಾಯಿತಿ ಕೊಡಬೇಕೆಂಬ ಸಲಹೆಯನ್ನು ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಪಾರ್ಲಿಮೆಂಟ್‌ನಲ್ಲಿ ತಳ್ಳಿಹಾಕಿದರು.

ಅಂಚೆ ಕಾರ್ಡ್ ದರ ಹೆಚ್ಚಿಸಿರುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುವುದೆಂಬ ವಾದವನ್ನು ಅವರು ನಿರಾಕರಿಸಿದರಲ್ಲದೆ ಈ ಬಗ್ಗೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಕಾವೇರಿ ನೀರು: ರಾಜ್ಯದ ಹಿತರಕ್ಷಣೆ ಭರವಸೆ

ಬೆಂಗಳೂರು, ಮಾ. 21– 1924ರ ಕಾವೇರಿ ಒಪ್ಪಂದದ ಕೊರತೆಗಳು 1974ರಲ್ಲಿ ಮಾತುಕತೆ ನಡೆಯುವಾಗ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ರಾಜ್ಯದ ತಜ್ಞರು ತಯಾರಿಸಿರುವ ವರದಿಯ ಕಾನೂನಿನ ಅಂಶಗಳನ್ನು ಕಾನೂನು ಇಲಾಖೆಯು ಪರಿಶೀಲಿಸುತ್ತಿದೆ.

ಕಾವೇರಿ ಜಲದ ನ್ಯಾಯ ದೊರಕಿಸಿಕೊಳ್ಳಲು ಸರ್ವ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಲೋಕೋಪಯೋಗಿ ಇಲಾಖೆ ಸಚಿವರು ಇಂದು ವಿಧಾನಸಭೆಗೆ ನೀಡಿದರು.

ಪಕ್ಷಾಂತರ ಪಿಡುಗಿಗೆ ಪರಿಹಾರ ಸೂಚಿಸಲು ಗಣ್ಯರ ಸಮಿತಿ ನೇಮಕ

ನವದೆಹಲಿ, ಮಾ. 21– ರಾಜಕೀಯ ಪಕ್ಷಾಂತರ ಪಿಡುಗನ್ನು ನಿಲ್ಲಿಸಲು ಅಗತ್ಯವಾದ ಕ್ರಮಗಳನ್ನು ಪರಿಶೀಲಿಸುವುದಕ್ಕಾಗಿ ವಿವಿಧ ಪಕ್ಷಗಳ ನಾಯಕರು ಮತ್ತು ಪ್ರತಿಷ್ಠಿತ ವ್ಯಕ್ತಿಗಳನ್ನೊಳಗೊಂಡ ಇಪ್ಪತ್ತು ಜನ ಸದಸ್ಯರಿರುವ ಸಮಿತಿಯೊಂದನ್ನು ಕೇಂದ್ರ ಗೃಹಸಚಿವ ಶ್ರೀ ವೈ.ಬಿ. ಚವಾಣ್ ನೇಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.