ADVERTISEMENT

ಪ್ರೊ. ಜಿ.ಕೆ. ಗೋವಿಂದರಾವ್ ಇನ್ನಿಲ್ಲ: ವಿಚಾರ ನಿಷ್ಠುರಿ, ಕೋಮಲ ಹೃದಯಿ

ಎಂ.ಎಸ್.ಆಶಾದೇವಿ
Published 15 ಅಕ್ಟೋಬರ್ 2021, 19:45 IST
Last Updated 15 ಅಕ್ಟೋಬರ್ 2021, 19:45 IST
ಕಲೆ: ಮನೋಹರ ಕೆ.ಆಚಾರ್ಯ
ಕಲೆ: ಮನೋಹರ ಕೆ.ಆಚಾರ್ಯ   

ರೈಲ್ವೆ ನಿಲ್ದಾಣ, ಬೆಳಗಿನ ಜಾವ, ಅದೇ ರೈಲಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯವರೂ ಪ್ರಯಾಣಿಸಿದ್ದರು. ಜಿಕೆಜಿ ಇಳಿದು ಸರ ಸರ ಮುಂದೆ ಬರುವಾಗ ಪೊಲೀಸರು ಅವರನ್ನು ತಡೆದು, ಉಪಮುಖ್ಯಮಂತ್ರಿಯವರು ಹೋಗುವ ತನಕ ಮಿಕ್ಕವರಾರೂ ಹೋಗುವಂತಿಲ್ಲ ಎಂದರು. ರೀ, ಅದೆಲ್ಲಾ ಸಾಧ್ಯವಿಲ್ಲ, ಅವರೂ ನಮ್ಮಂತೆಯೇ ಬರಲಿ ಬೇಕಾದರೆ, ರಕ್ಷಣೆಯ ವಿಷಯವಾದರೆ, ನಾವೆಲ್ಲ ಬಡಪ್ರಜೆಗಳು ಹೋದಮೇಲೆ ಆ ಮಹಾನುಭಾವರು ಹೋಗಲಿ, ನೀವೆಲ್ಲಾ ಇದೀರಲ್ಲಾ ಅವರಿಗೆ ರಕ್ಷಣೆ ಕೊಡೋದಿಕ್ಕೆ ಅಂತ ರೇಗಿ, ಅವರ ಪಾಡಿಗೆ
ಅವರು ನಿಲ್ದಾಣದಿಂದ ಹೊರಬಂದರು. ಅವತ್ತೇ ಅವರನ್ನು ನಾನು, ನಾನು ಕೆಲಸ ಮಾಡುತ್ತಿದ್ದ ಗ್ರಾಮೀಣ ಕಾಲೇಜಿಗೆ ಅತಿಥಿಯಾಗಿ ಕರೆದಿದ್ದೆ.

ಎಂದಿನಂತೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶಾಸಕರು ಎಷ್ಟು ಹೊತ್ತಾದರೂ ಬರಲಿಲ್ಲ. ಜಿಕೆಜಿ ಮುಖ ಕೆಂಪಗಾಗುತ್ತಾ ಹೋಯಿತು. ನನಗೆ ಇನ್ನು ಹತ್ತು ನಿಮಿಷ ಅಷ್ಟೆ. ಆಮೇಲೆ ಕಾರ್ಯಕ್ರಮ ಶುರು ಮಾಡೋಣ ಎಂದರು. ಶಾಸಕರ ಆಗಮನವಾಯಿತು. ಅವರ ಕೈ, ಕಾಲಿಗೆ ಬ್ಯಾಂಡೇಜಿನ ಅಲಂಕಾರವಿತ್ತು. ಅದನ್ನೇ ದಿಟ್ಟಿಸಿ ನೋಡುತ್ತಾ, ಕಲಾವಿದನ ನಾಟಕೀಯತೆಯಲ್ಲಿ ಜಿಕೆಜಿ, ‘ಪಾಪ, ತುಂಬಾ ನೋವಿದ್ಯಾ, ನೀವೇ ಬಿದ್ದು ಮುರಿದದ್ದಾ? ಯಾರಾದರೂ ಮುರಿದದ್ದಾ’ ಎಂದು ಕೇಳಿಯೇ ಬಿಟ್ಟರು. ಪ್ರಿನ್ಸಿಪಾಲರಿಗೂ ನನಗೂ ಜೀವ ಬಾಯಿಗೆ ಬಂದಿತ್ತು. ಶಾಸಕರು ಅಸ್ಪಷ್ಟ ಧ್ವನಿಯಲ್ಲಿ ಏನು ಹೇಳಿದರೋ ಯಾರಿಗೂ ತಿಳಿಯಲಿಲ್ಲ! ಈಗಲೂ ನನಗನ್ನಿಸುವುದು, ಶಾಸಕರಿಗೆ ಇವರ ಪ್ರಶ್ನೆ ಸರಿಯಾಗಿ ಕೇಳಿಸಿರಲಿಕ್ಕಿಲ್ಲ ಎಂದು! ಇಲ್ಲವಾದಲ್ಲಿ ಆವತ್ತು ಅಲ್ಲೊಂದು ಮಾರಾಮಾರಿಯಾಗುತ್ತಿತ್ತು.

ಜಿಕೆಜಿ ಅವರು ಉಳಿದುಕೊಂಡ ಹೋಟೆಲಿನ ಬಿಲ್ಲನ್ನು ನಾನು ಕೊಡಲು ಹೋದರೆ, ಏನು ಮಾಡಿದರೂ ಅವರು ಒಪ್ಪಲಿಲ್ಲ. ಸರ್ಕಾರಿ ಕಾಲೇಜಿನಲ್ಲಿ ಇದಕ್ಕೆಲ್ಲ ಎಷ್ಟು ದುಡ್ಡು ಇಟ್ಟಿರ್ತಾರೆ ಅಂತ ನನಗೆ ಗೊತ್ತಿದೆ,ನೀನು ಸುಮ್ಮನಿರು, ನಿನ್ನ ಮನೆಗೆಊಟಕ್ಕೆ ಬರ್ತೀನಿ ಸಾಕು, ಎಂದು ಅವರೇ ಅದರ ಬಿಲ್ಲು ಕೊಟ್ಟರು. ಅವರಿಗೆ ಇಷ್ಟ ಎಂದು ತಾಲಿಪಿಟ್ಟು ಮಾಡಿದ್ದೆ. ಇಷ್ಟಪಟ್ಟು ತಿಂದ ಅವರು ಹೇಳಿದ ಮಾತು ಈಗಲೂ ಕಿವಿಯಲ್ಲಿದೆ. ‘ಇಟ್ಸ್ ವಂಡರ್‌ಫುಲ್, ನನ್ನ ಹೆಂಡ್ತೀನೂ ತುಂಬಾ ಚೆನ್ನಾಗಿ ಮಾಡ್ತಾಳೆ. ಐ ಡೋಂಟ್ ವಾಂಟ್ ಟು ಕಂಪೇರ್‌, ಆದರೆ ನೀನು ಸಾಕು ಮಗಳು. ಆದ್ದರಿಂದ ಒಂದು ಮಾರ್ಕ್ಸ್ ಜಾಸ್ತಿ’.

ADVERTISEMENT

ಕೋಪ ಬಂದಾಗ, ತುಂಬಾ ಕಾಲ ನಾನು ಫೋನ್ ಮಾಡದೇ ಇದ್ದಾಗಲೆಲ್ಲ, ‘ಹೌ ಆರ್ ಯು ಬ್ಯಾಡ್ ಗರ್ಲ್ ಆಫ್ ದ ವರ್ಲ್ಡ್‌’ ಎಂದೇ ಮಾತು ಶುರುವಾಗುತ್ತಿತ್ತು. ಅವರು ಬರೆದದ್ದನ್ನೆಲ್ಲ ಕಳಿಸಿಯೇ ಕಳಿಸುತ್ತಿದ್ದರು. ಓದಿ ಪ್ರತಿಕ್ರಿಯಿಸದೇ ಇದ್ದರೆ ದೂರ್ವಾಸ ಮುನಿ. ಹೆಣ್ಣು ಮಕ್ಕಳನ್ನು ಕುರಿತು ಒಂದು ಮಹತ್ವದ ಕೃತಿ ಬರೆಯಬೇಕೆನ್ನುವುದು ಅವರ ಮಹದಾಸೆಯಾಗಿತ್ತು. ಅದಕ್ಕಾಗಿ ಅವರು ನೋಟ್ಸ್ ಕೂಡ ಮಾಡುತ್ತಾ ಇದ್ದರು. ಇದ್ದಕ್ಕಿದ್ದಂತೆ ಅವರಿಗೆ ಗಾಂಧಿಯ ಉಪವಾಸಗಳನ್ನು ಕುರಿತು ಬರೆಯಬೇಕು ಎನ್ನಿಸಿತು. ಅದನ್ನು ಬರೆದ ಮೇಲೆ, ಹಲವರಿಗೆ ಓದಲು ಕೊಟ್ಟು ಅವರ ಪ್ರತಿಕ್ರಿಯೆಗಳನ್ನು ಬರೆಯಿಸಿಕೊಂಡರು. ಹಿರಿಯ ಲೇಖಕರೊಬ್ಬರ ಚಿತಾವಣೆಯಿಂದ (!) ಜಿಕೆಜಿ ನನ್ನನ್ನೇ ಮುನ್ನುಡಿ ಬರೆಯಲು ಕೇಳಿದರು. ಸರ್, ದೊಡ್ಡವರೆಲ್ಲ ಬರೆಯಲಿ ನಾನು ಯಾಕೆ ಎಂದರೆ, ನನಗೆ/ನಮಗೆ ನೀನೂ ದೊಡ್ಡವಳು. ಬರಿಬೇಕು ಸುಮ್ಮನೆ, ಜಂಭ ಮಾಡದೆ ಅಪ್ಪನ ಮಾತು ಕೇಳು ಅಂದರು. ಆ ಪುಸ್ತಕದಲ್ಲಿ ಅವರನ್ನು ಮೆಚ್ಚಿಕೊಂಡದ್ದಕ್ಕಿಂತ ಅವರನ್ನು ಪ್ರಶ್ನಿಸುವ ಮಾತುಗಳೇ ಆಧಿಕ. ಆದರೆ ಜಿಕೆಜಿ ಹೇಳಿದರು, ನಮ್ಮ ಸಾರ್ವಜನಿಕ ಚರ್ಚೆಗಳು ಇರಬೇಕಾದ್ದೇ ಹೀಗೆ, ನನಗೆ ಏನೂ ಬೇಸರವಿಲ್ಲ ಎಂದು.

ಈ ಎಲ್ಲ ಪ್ರಸಂಗಗಳೂ ಜಿಕೆಜಿಯವರವ್ಯಕ್ತಿತ್ವವನ್ನು, ಅವರ ನೋಟ ನಿಲುಮೆಗಳನ್ನು ಚಿತ್ರಿಸುತ್ತವೆ. ಅವರೊಬ್ಬಆರ್ದ್ರಹೃದಯದ ಅಂತಃಕರುಣಿಯಾದಂತೆಯೇ ಜನಪರ ವಿಷಯಗಳ ಹೊತ್ತಿನಲ್ಲಿ ನಿಷ್ಠುರವಾದ ಸಾರ್ವಜನಿಕ ನಿಲುವುಗಳನ್ನು ಅಷ್ಟೇ ಉಗ್ರವಾಗಿ ಪ್ರತಿಪಾದಿಸಬಲ್ಲವರಾಗಿದ್ದರು. ಮೂಲಭೂತವಾದಿಗಳನ್ನು ಎದುರು ಹಾಕಿಕೊಳ್ಳಬಲ್ಲವರಾಗಿದ್ದರು. ವಾಚಕರವಾಣಿಗೆ ತಮ್ಮ ವಸ್ತುನಿಷ್ಠ ಆಲೋಚನೆಗಳನ್ನು ಏಕಾಂಗಿಯಾಗಿಯಾದರೂ ಬರೆಯಬಲ್ಲವರಾಗಿದ್ದರು. ನೈತಿಕತೆಯ ಪ್ರಶ್ನೆಯು ಕೊನೆಯವರೆಗೂ ಅವರಿಗೆ ಮೂಲಧಾತುವಾಗಿತ್ತು. ಬಹುತ್ವದ ಭಾರತವು ಅವರಿಗೆ ಬೌದ್ಧಿಕ ನಿಲುವು ಮಾತ್ರವಾಗಿರಲಿಲ್ಲ, ಪೊಲಿಟಿಕಲಿ ಕರೆಕ್ಟ್ ಧೋರಣೆಯೂ ಆಗಿರಲಿಲ್ಲ. ಅವರು ಅದನ್ನು ಮನವಾರೆ ನಂಬಿ ನೆಚ್ಚಿದವರಾಗಿದ್ದರು.

ರಂಗಭೂಮಿ, ಸಿನೆಮಾಗಳಲ್ಲಿ ತೊಡಗಿಸಿಕೊಂಡಿದ್ದ ಜಿಕೆಜಿ, ಅದರಲ್ಲಿ ಕೆಲವು ಪಾತ್ರಗಳನ್ನು ತಮ್ಮ ವ್ಯಕ್ತಿತ್ವದ ಅನಾವರಣ ಎಂದೇ ತಿಳಿಯುತ್ತಿದ್ದರು. ನನ್ನ ನೆನಪು ಸರಿಯಾಗಿದ್ದರೆ, ರಂಗಶಂಕರದಲ್ಲಿ ಅವರು ಕಿಂಗ್ ಲಿಯರ್ ಮಾಡಿದ್ದೇ ಕಡೆ ಇರಬೇಕು. ಆ ನಾಟಕದ ತಾಲೀಮು ನಡೆಯುತ್ತಿರುವಾಗ ಪದೇ ಪದೇ ಫೋನ್ ಮಾಡುತ್ತಿದ್ದರು. ‘ಅಲ್ಲಾ ಆಶಾ, ಅಪ್ಪನ ಪಾತ್ರ ಅಮ್ಮನಷ್ಟೇ ಮುಖ್ಯ ಅಲ್ವೇನಮ್ಮಾ, ಆದರೂ ಅಮ್ಮನಿಗೆ ಪ್ರಥಮ ಪ್ರಾಶಸ್ತ್ಯ, ಇರಲಿ, ಅದನ್ನ ನಾನು ಅಲ್ಲಗಳೆಯೋದಿಲ್ಲ, ಆದರೆ ಅಪ್ಪನ ಪಾತ್ರ, ವ್ಯಕ್ತಿತ್ವ ಇನ್ನೂ ಹೆಚ್ಚಿನದಕ್ಕೆ ಅರ್ಹ ಅಲ್ವೇನಮ್ಮಾ’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ನಾನು ಲಘುವಾಗಿ, ‘ನಮ್ಮ ಇಂಡಿಯಾದಲ್ಲಿ ಅಪ್ಪಂದಿರಿಗೆ ಸಿಕ್ಕಾಪಟ್ಟೆ ಸ್ಕೋಪ್ ಕೊಟ್ಟೂ ಕೊಟ್ಟೂ ಅವರು ಅಲ್ಲಿ ಹೋಗಿ ಕೂತಿರ್ತಾರೆ, ಅವರಿಗೆ ಸಹಜವಾಗಿ ಇರೋಕೇ ಬರೋಲ್ಲ, ತುಂಬಾ ಬಡಿವಾರ ಮಾಡ್ತಾರೆ’ ಅಂದುಬಿಟ್ಟಿದ್ದೆ. ಮಾರನೇ ದಿನ ಅವರು ಮತ್ತೆ ಫೋನ್ ಮಾಡಿದಾಗಲೇ ಅವರಿಗೆ ಅದು ತುಂಬಾ ಕಾಡಿದೆ ಅನ್ನುವುದು ಗೊತ್ತಾಗಿದ್ದು. ಆ ನಾಟಕಕ್ಕೆ ಹೋಗಿದ್ದೆ. ಅವರು ಕಿಂಗ್ ಲಿಯರ್‌ನ ಪಾತ್ರದಲ್ಲಿ ನಿಜಕ್ಕೂ ಮುಳುಗಿಹೋಗಿದ್ದರು.

ಈಗ ಅನ್ನಿಸುತ್ತಿದೆ, ಯಾವುದೊಂದನ್ನೂ ಅವರುಪ್ರಾಮಾಣಿಕತೆಯಲ್ಲಿಯೇ ನಿಭಾಯಿಸಲು ನೋಡಿದರು. ಅಪ್ರಾಮಾಣಿಕವಾಗಿ ಅವರು ಏನನ್ನೂ ಮಾತನಾಡಲಿಲ್ಲ, ಬರೆಯಲಿಲ್ಲ, ಬದುಕಲಿಲ್ಲ. ತಮ್ಮ ಇರಾದೆಗೆ ಅನುಗುಣವಾಗಿಯೇ ಅವರು ಬದುಕಿದರು. ಅವರ ಅಭಿಪ್ರಾಯಗಳನ್ನು ನಾವು ಒಪ್ಪದೇ ಇರಬಹುದು, ಆದರೆ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. 84ರ ವಯಸ್ಸಿನಲ್ಲಿಯೂ ಅವರ ವೈಚಾರಿಕ ಪ್ರಖರತೆಗೆ ಯಾವ ಭಂಗವೂ ಬಂದಿರಲಿಲ್ಲ. ಅವರ ಅಧ್ಯಯನಶೀಲತೆ ಇನಿತೂ ಕಡಿಮೆಯಾಗಿರಲಿಲ್ಲ. ಇದೇ ಮೇಷ್ಟ್ರಿಂದ ನಾವು ಕಲಿಯಬೇಕಾದ ನಿಜ ಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.