ADVERTISEMENT

ನಭ ಸೇರಿದ ಉರ್ದು ಕಾವ್ಯಲೋಕದ ತಾರೆ ರಾಹತ್‌ ಇಂದೋರಿ

ರಾಹತ್‌ ಇಂದೋರಿ ಹೃದಯಾಘಾತದಿಂದ ನಿಧನ

ಎಸ್.ರಶ್ಮಿ
Published 11 ಆಗಸ್ಟ್ 2020, 20:11 IST
Last Updated 11 ಆಗಸ್ಟ್ 2020, 20:11 IST
ಉರ್ದು ಕವಿ ರಾಹತ್ ಇಂದೋರಿ
ಉರ್ದು ಕವಿ ರಾಹತ್ ಇಂದೋರಿ   

‘ಆಂಖ್‌ ಮೆ ಪಾನಿ ರಖೊ, ಹೋಂಟೊಪೆ ಚಿಂಗಾರಿ ರಖೋ, ಜಿಂದಾ ರೆಹನಾಹೈ ತೊ ತರ್ಕೀಬೆ ಬಹೊತ್‌ ಸಾರಿ ರಖೋ’ (ಕಂಗಳಲ್ಲಿ ಕಂಬನಿ ಇಟ್ಕೊಂಡಿರಿ, ತುಟಿಮೇಲೆ ಕಿಡಿಗಳನ್ನಿಟ್ಕೊ.. ಬದುಕಬೇಕೆಂದರೆ ಸಾಕಷ್ಟು ಉಪಾಯಗಳನ್ನೂ ಇಟ್ಕೊ) ಅಂತ ಹೇಳುತ್ತಿದ್ದ ರಾಹತ್‌ ಇಂದೋರಿ ಅವರ ಹೃದಯ 70ರ ಹರೆಯದಲ್ಲಿ ಮಿಡಿಯುವುದು ನಿಲ್ಲಿಸಿತು. 1950ರಲ್ಲಿ ಜನಿಸಿದ ರಾಹತ್‌ ಇಂದೋರಿ ಕೋವಿಡ್‌19 ದೃಢಪಟ್ಟ ನಂತರ ಹೃದಯಾಘಾತದಿಂದಾಗಿ ಚಿರನಿದ್ರೆಗಿಳಿದರು.

ತಾವು ಆಸ್ಪತ್ರೆಗೆ ಸೇರುವ ಮುನ್ನ ಟ್ವೀಟ್‌ ಮಾಡಿದ ಅವರು, ‘ಕೋವಿಡ್‌ ದೃಢಪಟ್ಟಿದೆ. ನನ್ನ ಆರೋಗ್ಯಕ್ಕಾಗಿ ಹರಸಿ. ನನಗೆ, ಕುಟುಂಬದವರಿಗೆ ಕರೆ ಮಾಡಬೇಡಿ. ನನ್ನ ಆರೋಗ್ಯದ ಕುರಿತು ಆಗಾಗ ನಾನೇ ಅಪ್‌ಡೇಟ್‌ ಮಾಡುವೆ’ ಎಂದಿದ್ದರು. ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಇಂದೋರ್‌ನ ಆಸ್ಪತ್ರೆಯಲ್ಲಿ ಎರಡು ಹೃದಯಾಘಾತಗಳಿಂದಾಗಿ ಕೊನೆಯುಸಿರೆಳೆದರು.

‘ಪ್ರತಿಯೊಬ್ಬರ ರಕ್ತದ ಕಣವೂ ಈ ಭೂಮಿಗಿದೆ.. ಭಾರತ ದೇಶ ಯಾರಪ್ಪನದ್ದೂ ಅಲ್ಲ’ ಎಂಬರ್ಥದ ಸಾಲುಗಳಿಂದಲೇ ಅವರು ಪರಿಚಿತರಾದವರು.

ADVERTISEMENT

ಕರೀಬ್‌, ಮುನ್ನಾಭಾಯಿ, ಬೇಗಂ ಜಾನ್‌, ಖುದ್ದಾರ್‌, ನಾರಾಜ್‌, ಹೀರೊ ಹಿಂದುಸ್ತಾನಿ, ಮೈ ತೇರಾ ಆಶಿಕ್‌, ಮರ್ಡರ್‌ ಮುಂತಾದ ಚಿತ್ರಗಳಿಗೆ ಜನಪ್ರಿಯಗೀತೆಗಳನ್ನು ಬರೆದಿದ್ದರು.

ಇಂದೋರ್‌ನ ರಾಹತ್‌ ಖುರೇಶಿ ತಮ್ಮ ಜೀವನದ ಪ್ರತಿಮಿಡಿತವೂ ಉರ್ದು ಕಾವ್ಯಕ್ಕಾಗಿ ಎಂಬಂತೆ ಬದುಕಿದ್ದರು. ‘ಮೈ ಜಬ್‌ ಮರ್‌ ಜಾವೂಂ ತೊ ಮೇರಿ ಅಲಗ್‌ ಪೆಹಚಾನ್‌ ಲಿಖ್‌ದೇನಾ, ಅಲಗ್‌ ಹೂಂ.. ಲಹೂ ಸೆ ಪಿಶಾನೆ ಪೆ ನಾಮ್‌ ಹಿಂದೂಸ್ತಾನ್‌ ಲಿಖ್‌ ದೇನಾ’ ಎಂದು ಆಗಾಗ ಹೇಳುತ್ತಲೇ ಇದ್ದರು.

ವ್ಯವಸ್ಥೆಯ ವಿರುದ್ಧ, ಡಾಂಭಿಕತನದ ವಿರುದ್ಧ ರಾಹತ್‌ ತಮ್ಮ ಕಾವ್ಯದ ಖಡ್ಗ ಝಳಪಿಸುತ್ತಲೇ ಇದ್ದರು. ಈ ಕಾರಣಕ್ಕಾಗಿಯೇ ಅವರಿಗೆ ಜೆಹಾದಿ ಕವಿ ಎಂಬ ಪಟ್ಟವೂ ಸಿಕ್ಕಿತ್ತು. ಅದಕ್ಕೆ ಉತ್ತರವಾಗಿ ‘ನಾನು ನಿಧನನಾದಾಗ, ನನ್ನ ವಿಭಿನ್ನ ಪರಿಚಯವನ್ನೇ ಬರೆದುಬಿಡಿ.. ನಾನು ಭಿನ್ನನಾಗಿರುವೆ... ನನ್ನ ಹಣೆಯ ಮೇಲೆ ರಕ್ತದಿಂದ ಹಿಂದೂಸ್ತಾನ್‌ ಎಂದು ಬರೆದುಬಿಡಿ’ ಎಂದುತ್ತರಿಸಿದ್ದರು. ಜೋರು ಧ್ವನಿಯಲ್ಲಿ ತಮ್ಮ ಕವಿತೆಗಳನ್ನು ವಾಚಿಸುತ್ತಿದ್ದ ಅವರು, ತಮ್ಮ ಭಾವನೆಗಳನ್ನು ಪ್ರತಿಷ್ಠಾಪಿಸುವಂತೆ ಹೇಳುತ್ತಿದ್ದರು.

ಅದಕ್ಕಾಗಿಯೇ ಅವರ ಹಲವಾರು ಸಾಲುಗಳು ಅವರ ಅಭಿಮಾನಿಗಳ ನಾಲಗೆಯ ಮೇಲೆ ನಲಿದಾಡುತ್ತಿವೆ.ಏಕ್‌ ಹಿ ನದಿ ಕೆ ಹೈ ದೊ ಕಿನಾರೆ ದೋಸ್ತೋಂ/ದೋಸ್ತಾನಾ ಜಿಂದಗಿ ಸೆ, ಮೌತ್‌ ಸೆ ಯಾರಿ ರಖೋ... (ಒಂದೇ ನದಿಯ ಎರಡು ತೀರಗಳಿವು ಸ್ನೇಹಿತರೆ, ಬದುಕಿನೊಂದಿಗೆ ದೋಸ್ತಿ ಇದ್ದರೆ, ಸಾವಿನೊಂದಿಗೆ ಸ್ನೇಹವಿರಲಿ) ಎಂದೆನ್ನುತ್ತಲೇ ತಮ್ಮ ಯಾರಿ ನಿಭಾಯಿಸಿದರು ರಾಹತ್‌ ಅವರು.

ರಾಹತ್‌ ಇಂದೋರಿ ನಿಧನ
ಇಂದೋರ್:
ಕೋವಿಡ್‌–19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಉರ್ದು ಕವಿ ರಾಹತ್‌ ಇಂದೋರಿ(70), ಮಂಗಳವಾರ ಹೃದಯಾಘಾತದಿಂದ ಅರವಿಂದೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಪುತ್ರ ಸಟ್ಲಾಜ್‌ ಇಂದೋರಿ ತಿಳಿಸಿದರು.

ಮಂಗಳವಾರ ಬೆಳಿಗ್ಗೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಬರೆದಇಷ್ಕ್‌ ಸಿನಿಮಾದ ‘ನೀಂದ್‌ ಚುರಾಯಿ ಮೇರಿ’ ಹಾಗೂ ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾದ ‘ಎಂ ಬೊಲೆ ತೊ’ ಹಾಡು ಇಂದಿಗೂ ಜನಪ್ರಿಯ
ವಾಗಿದೆ. ವರ್ಷದ ಆರಂಭದಲ್ಲಿ ಇವರು ಬರೆದ ‘ಬುಲಾತಿ ಹೆ ಮಗರ್ ಜಾನೆ ಕಾ ನಹಿ’ ಶಾಯರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.