ADVERTISEMENT

ಉಸ್ತಾದ್‌ ಗುಲಾಮ್‌ ಮುಸ್ತಫಾ ಖಾನ್‌: ಸಂಗೀತದ ವಿನಾ ಮತ್ತೇನೂ ನೆನಪಿಲ್ಲ...

ಉಸ್ತಾದೋಂಕೆ ಉಸ್ತಾದ್‌ ಗುಲಾಮ್‌ ಮುಸ್ತಫಾ ಖಾನ್‌

ಎಸ್.ರಶ್ಮಿ
Published 17 ಜನವರಿ 2021, 19:27 IST
Last Updated 17 ಜನವರಿ 2021, 19:27 IST
ಮುಸ್ತಫಾ ಖಾನ್
ಮುಸ್ತಫಾ ಖಾನ್   

ಹುಬ್ಬಳ್ಳಿ:ಸಂಗೀತಕ್ಷೇತ್ರದ ಮಹಾಗುರು ಉಸ್ತಾದ್‌ ಗುಲಾಮ್‌ ಮುಸ್ತಫಾಖಾನ್‌ ನಾದಲೋಕದಲ್ಲಿ ಮೌನವಾದರು. ಲತಾ ಮಂಗೇಷ್ಕರ್‌, ಆಶಾ ಭೋಸ್ಲೆ, ಮನ್ನಾ ಡೆ, ಗೀತಾ ದತ್ತ, ಹರಿಹರನ್‌, ಸೋನು ನಿಗಮ್‌, ಶಾನ್‌, ಎ.ಆರ್‌. ರೆಹಮಾನ್‌, ರಾಷಿದ್‌ ಖಾನ್‌ – ಹೀಗೆ ಶಿಷ್ಯಕೋಟಿಯನ್ನು ಬೆಳೆಸಿದ ಅವರು ತಮ್ಮ ಗಾನಯಾತ್ರೆಯನ್ನು ಭಾನುವಾರ ಮುಕ್ತಾಯಗೊಳಿಸಿದರು.

ಸಂಗೀತ ವಾತಾವರಣದಲ್ಲಿಯೇ ಜನಿಸಿದ ಮುಸ್ತಫಾಖಾನ್‌, ‘ನಾನು ಪದಗಳನ್ನು ಉಚ್ಚರಿಸುವ ಮೊದಲು ರಾಗಗಳನ್ನು ಕಲಿತೆ‘ ಎಂದು ಒಂದೆಡೆ ಹೇಳಿಕೊಳ್ಳುತ್ತಾರೆ. ‘ಹಣ ಎಲ್ಲದಕ್ಕೂ ಬೇಕು. ಆದರೆ ಎಲ್ಲವೂ ಹಣವೇ ಅಲ್ಲ. ದುಡಿಮೆ ಅನ್ನ ಗಳಿಸಿಕೊಡುತ್ತದೆ. ಆನಂದಕ್ಕಾಗಿ ಸಂಗೀತವನ್ನು ಆಶ್ರಯಿಸಿ’ ಅಂತಲೇ ಎಲ್ಲರಿಗೂ ಹೇಳುತ್ತಿದ್ದರು.

‘ಅ ಡ್ರೀಮ್‌ ಐ ಲಿವ್ಡ್‌ ಅಲೋನ್’‌ ಅವರ ಆತ್ಮಚರಿತ್ರೆ. ಅದನ್ನು ಸೊಸೆ ನಮ್ರತಾ ಗುಪ್ತಾ ಖಾನ್‌ ಬರಹಕ್ಕಿಳಿಸಿದ್ದಾರೆ. ಈ ಪುಸ್ತಕದಲ್ಲಿ ಉಸ್ತಾದ್ ಜಾಕಿರ್‌ ಹುಸೇನ್‌ ಒಂದೆಡೆ ಹೇಳುತ್ತಾರೆ, ‘ಉಸ್ತಾದ್ ಮುಸ್ತಫಾಖಾನ್‌ ಬಳಿ ನಾನು ಸ್ಕೂಲ್‌ ಯುನಿಫಾರ್ಮ್‌ನಲ್ಲಿ ತಬಲಾ ಹಿಡಿದುಕೊಂಡು ಹೋಗುವುದು ನೆನಪಿದೆ. ಅವರ ಬಳಿ ಕಲಿತರವರೆಲ್ಲ ಹೆಸರುವಾಸಿಯಾಗಿದ್ದಾರೆ. ಆದರೆ ಯಾರೂ ರಿಯಾಝ್‌ ಬಿಟ್ಟಿಲ್ಲ. ಇದೇ ಅವರು ಹೇಳಿಕೊಟ್ಟಿದ್ದು’

ADVERTISEMENT

ಸಂಗೀತ ಕಛೇರಿ ನೀಡಬೇಕೆಂದರೆ ಕಲಾವಿದರು ಕೃಷ್ಣ ಜನ್ಮಾಷ್ಟಮಿವರೆಗೂ ಕಾಯಬೇಕಿತ್ತು. ಪ್ರತಿ ಜನ್ಮಾಷ್ಟಮಿಯಂದು ಬಹುತೇಕ ಕಲಾವಿದರು ತಮ್ಮ ಮೊದಲ ವೇದಿಕೆ ಕಾರ್ಯಕ್ರಮವನ್ನು ನೀಡುತ್ತಿದ್ದರು. ಗುಲಾಮ್‌ ಮುಸ್ತಫಾಖಾನ್‌ ತಮ್ಮ 8ನೆಯ ವಯಸ್ಸಿಗೆ ಕಛೇರಿ ನೀಡಿದ್ದರು. ನಂತರದ್ದೆಲ್ಲವೂ ಇತಿಹಾಸ. ಸಂಗೀತಲೋಕದ ತಾರೆಗಳಿಗೆ ಉಸ್ತಾದ್ ಆದರು. ಉಸ್ತಾದೋಂಕೆ ಉಸ್ತಾದ್‌ ಎನಿಸಿಕೊಂಡರು.

ಹಿಂದೂಸ್ತಾನಿ ಸಂಗೀತದ ಸಾಂಪ್ರದಾಯಿಕ ಘರಾನಾಗಳಾದ ರಾಂಪುರ, ಗ್ವಾಲಿಯರ್‌ ಹಾಗೂ ಸಹಸ್ವಾನ್‌ ಘರಾನಾ ಶೈಲಿಯಲ್ಲಿ ಇವರು ಪಳಗಿದ್ದರು. ಸಭೆಯಲ್ಲಿ ಸಂಗೀತ ಪ್ರಸ್ತುತ ಪಡಿಸುತ್ತಿದ್ದರೆ ಅವರೇ ರಾಗವಾಗುತ್ತಿದ್ದರು.

ಸಂದರ್ಶನವೊಂದರಲ್ಲಿ ಪ್ರಶಸ್ತಿಗಳ ಬಗ್ಗೆ ನೆನಪುಗಳನ್ನು ಹಂಚಿಕೊಳ್ಳಲು ಹೇಳಿದಾಗ ‘ಸಂಗೀತದ ವಿನಾ ಮತ್ತೇನೂ ನೆನಪಿಲ್ಲ. ನೆನಪಿರಕೂಡದು. ಇಂಥ ಪ್ರಶಸ್ತಿಗಳ ಮಾಯೆಯಲ್ಲಿ ಬಿದ್ದರೆ ಸಂಗೀತ ಮರೆತುಹೋಗುತ್ತದೆ. ಸಂಗೀತವೊಂದೇ ನನಗೆ ನೆನಪಿರುವುದು’ ಎಂದಿದ್ದರು.

ತಮ್ಮ 88ನೆಯ ವಯಸ್ಸಿನಲ್ಲಿ ಸಂಗೀತ ಕಛೇರಿ ರೆಕಾರ್ಡಿಂಗ್‌ ಆಗಬೇಕಿತ್ತು. ಹಾಡಲು ಆರಂಭಿಸಿದೊಡನೆ ತಮ್ಮ ಹಿಯರಿಂಗ್‌ ಏಯ್ಡ್‌ ತೆಗೆದಿರಿಸುತ್ತಿದ್ದರು. ಆದರೆ ಕ್ಯಾಮರಾಮನ್‌ ಹೇಳುವ ನಿರ್ದೇಶನಗಳನ್ನು ಕೇಳಲು ಸಾಧ್ಯವಿರಲಿಲ್ಲ. ಕೊನೆಗೆ ಹರಿಹರನ್‌ ಬಂದು, ಕ್ಯಾಮರಾಮನ್‌ ಯಾವ ನಿರ್ದೇಶನಗಳನ್ನೂ ನೀಡುವ ಅಗತ್ಯವಿಲ್ಲ. ಹಾಡುಗಾರಿಕೆಯನ್ನು ಹಾಗೆಯೇ ದಾಖಲಿಸಬೇಕು ಎಂದಾಯಿತು. ಆಗ ಸುರ್‌ಬಹಾರ್‌ ರಾಗ ಎತ್ತಿಕೊಂಡ ಮುಸ್ತಫಾ ಖಾನ್‌ ಇಡೀ ಸ್ಟುಡಿಯೋದಲ್ಲಿ ಚೈತ್ರ ಬಂದಂತಹ ವಾತಾವರಣ ಸೃಷ್ಟಿಸಿದರು.

ಅವರ ಹಾಡುಗಾರಿಕೆ ಮುಗಿದಾಗ ಎಲ್ಲೆಡೆ ಒಂದು ಬಗೆಯ ಮೌನ. ಅದೇ ರಾಗಗಳಲ್ಲಿಯೇ ಎಲ್ಲರೂ ಕಳೆದುಹೋದಂತೆ. ಇಡೀ ವಾತಾವರಣದಲ್ಲಿ ಸುರ್‌ ಬಹಾರ್‌ ಅನುರಣನವಾದಂತೆ, ಒಂದು ಕರತಾಡನದ ಮೊದಲಿನ ಆ ಮೌನ. ಅಕ್ಷರಶಃ ನಾದಬ್ರಹ್ಮನನ್ನು ಅಲ್ಲಿ ಆವಾಹಿಸಿದಂತಾಗಿತ್ತು.

ಈಗ ಗುಲಾಮ್‌ ಮುಸ್ತಫಾಖಾನ್‌ ಹಾಡದೆಯೇ ಒಂದು ಮೌನ ಸೃಷ್ಟಿಸಿ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.