ADVERTISEMENT

'ಒಡನಾಡಿ ಸಬಿಹಾ' ಅಭಿನಂದನಾ ಹೊತ್ತಗೆಯ ನುಡಿ ಬಾಗಿನ

ದು.ಸರಸ್ಪತಿ./ ಚಿತ್ರ: ಸವಿತಾ ಬಿ.ಆರ್‌.
Published 14 ನವೆಂಬರ್ 2021, 3:18 IST
Last Updated 14 ನವೆಂಬರ್ 2021, 3:18 IST
ಸಬಿಹಾ ಭೂಮಿಗೌಡ
ಸಬಿಹಾ ಭೂಮಿಗೌಡ   

ಮಹಿಳಾ ಚಳವಳಿ, ದಲಿತ ಚಳವಳಿ, ಬಂಡಾಯ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ... ಹೀಗೆ ಹಲವಾರು ಚಳವಳಿಗಳಿಗೆ 80ರ ದಶಕ ಸಾಕ್ಷಿಯಾಗಿದೆ. ಈ ಚಳವಳಿಗಳು ಕನ್ನಡ ನಾಡಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಲೋಕದ ಮಿತಿಗಳನ್ನು ಮೀರಿಸಿ ಅರಿವು, ದರ್ಶನವನ್ನು ವಿಸ್ತರಿಸಿವೆ. ಅಲ್ಲದೆ ಈ ಚಳವಳಿಗಳಲ್ಲಿ ದುಡಿದ, ಅವುಗಳ ಸಂಪರ್ಕಕ್ಕೆ ಬಂದ ಅಸಂಖ್ಯಾತ ಜನರು ನುಡಿದಂತೆ ನಡೆಯಲು, ಬದುಕಲು ಅವು ಪ್ರೇರೇಪಿಸಿವೆ. ತಾರತಮ್ಯ ಮಾಡದೆ ಸರಳವಾಗಿ ಬದುಕುವುದು, ಜಾತಿ, ಮತ, ಧರ್ಮ ಮೀರಿ ಕುವೆಂಪು ಅವರ ಮಂತ್ರಮಾಂಗಲ್ಯದನುಸಾರ ಸರಳವಾಗಿ ವಿವಾಹವಾಗುವುದು, ಮೌಢ್ಯಾಚರಣೆಗಳನ್ನು ಬಿಡುವುದು, ಲಂಚ ಕೊಡದೆ, ಪಡೆಯದೇ ದುಡಿಯುವುದು... ಇಂತಹ ನೀತಿ, ನಿಯಮಗಳು ಪರ್ಯಾಯ ಬದುಕಿಗೆ ದಾರಿಯಾಗಿವೆ.

ಆ ಚಳವಳಿಗಳಿಂದ ಪ್ರಭಾವಿತಳಾದ ನಾನೂ ಅಂತಹ ಹಲವು ಬದುಕುಗಳನ್ನು ನಿಕಟವಾಗಿ ಬಲ್ಲೆ. ನನ್ನ ಹಲವಾರು ಗೆಳತಿಯರು ಜಾತಿ, ಧರ್ಮ ಬಿಟ್ಟು ಸರಳವಾಗಿ ಮದುವೆಯಾದರು, ಖಾಸಗಿ ಬದುಕಿನಲ್ಲಿ ಜಾತಿ ಆಚರಣೆಗಳನ್ನು ಬಿಟ್ಟರು, ಮನೆಯವರಿಂದ ಚಿಕ್ಕಾಸೂ ಪಡೆಯದೇ ತಮ್ಮ ದುಡಿಮೆಯಿಂದಲೇ ತಮ್ಮ ಬದುಕುಗಳನ್ನು ಕಟ್ಟಿಕೊಂಡರು, ಸಂಪಾದನೆಗಾಗಿ ದುಡಿದು, ಸಂಸಾರವನ್ನು ನಿಭಾಯಿಸುವುದರ ಜೊತೆಗೆ ಸಂಘಟನೆಗಳ ಭಾಗವಾಗಿ ದುಡಿದರು. ಸ್ವಾಯತ್ತತೆ, ಸ್ವಾಭಿಮಾನವೇ ಉಸಿರಾದ ಹಲವು ಗೆಳತಿಯರು, ಪಟ್ಟುಹಿಡಿದು ನಂಬಿದ್ದನ್ನು ಸಾಧಿಸಿದರು. ಅಂತಹ ನಿಕಟ ಗೆಳತಿಯರಲ್ಲಿ ನಮ್ಮ ಡಾ. ಸಬಿಹಾ ಭೂಮಿಗೌಡ ಒಬ್ಬರು. ನಮ್ಮ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಗಾತಿಗಳಿಗೆಲ್ಲ ಅಕ್ಕನಾಗಿರುವ ಇವರು ಸದ್ದು ಮಾಡದೆ ದಿಟ್ಟವಾಗಿ ತಮ್ಮ ಸಮಾನತೆ, ಜಾತ್ಯತೀತ ಆಶಯಗಳನ್ನಿಟ್ಟುಕೊಂಡು ಬದುಕುತ್ತಿರುವವರು.

ಶಿಸ್ತು, ಗಾಂಭೀರ್ಯ ಮತ್ತು ಅಚ್ಚುಕಟ್ಟಾದ ಕೆಲಸ ಮೇಳೈಸಿದಂತಿರುವ ಸಬಿಹಾ ಉದ್ಯೋಗದಿಂದ ನಿವೃತ್ತರಾಗಿದ್ದಾರೆ. ಅಧ್ಯಾಪಕಿಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ, ಜನಪರ ಚಳವಳಿಗಳ ಒಡನಾಡಿಯಾಗಿ, ಹಾಸ್ಟೆಲ್ ವಾರ್ಡನ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ, ಸಾಹಿತ್ಯ ಅಕಾಡೆಮಿಯ ಸದಸ್ಯೆ, ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆ, ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಸೇರಿದಂತೆ ಅಧಿಕಾರದ ಹಲವು ಸ್ಥಾನಗಳನ್ನು ನಿಷ್ಪಕ್ಷಪಾತ ಪಾರದರ್ಶಕ ಆಡಳಿತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಮೂಲಕ ದಕ್ಷತೆಯಿಂದ ನಿಭಾಯಿಸಿದ್ದಾರೆ. ಸವಾಲುಗಳು ಎದುರಾದಾಗಲೂ ಧೃತಿಗೆಡದೆ, ಸೈದ್ಧಾಂತಿಕವಾಗಿ ರಾಜಿಯಾಗದೇ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ನಶೆಯಾಗಬಹುದಾದ ಅಧಿಕಾರವನ್ನು ಟಾನಿಕ್‍ನಂತೆ ಬಳಸಿ ಉದ್ದೇಶಿತ ಗುರಿ ಮುಟ್ಟಿರುವುದು ಅವರ ಹೆಗ್ಗಳಿಕೆ.

ADVERTISEMENT

ಕತೆ, ಕಾವ್ಯ, ಅಂಕಣ ಬರಹ, ವಿಮರ್ಶೆ, ಸಂಶೋಧನಾ ಲೇಖನ ಹೀಗೆ ಇವರ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳೆರಡರ ಬರವಣಿಗೆಗಳಲ್ಲೂ ಸ್ಪಷ್ಟ ಚಿಂತನೆ ಹಾಗೂ ಸ್ತ್ರೀವಾದಿ ನೋಟದ ಛಾಪನ್ನು ಕಾಣಬಹುದು. ನಿತ್ಯದ ಬದುಕಿನ ಮೊಸರನ್ನೇ ಕಡೆದು ಬೆಣ್ಣೆಯ ಕ್ಷಣಗಳನ್ನು ಹೆಣೆಯುವ ಕುಸುರಿಯನ್ನು ಇವರ ಕೃತಿಗಳಲ್ಲಿ ಕಾಣಬಹುದು.

ತಮ್ಮ ನಾಲ್ಕು ದಶಕಗಳ ಅಧ್ಯಾಪಕ ವೃತ್ತಿಯಲ್ಲಿ ನೂರಾರು ವಿದ್ಯಾರ್ಥಿಗಳ ಚಿಂತನೆ, ಬರಹ, ಬದುಕುಗಳನ್ನು ರೂಪಿಸಿದ್ದಾರೆ. ಬೋಧನೆ ಮತ್ತು ಆಡಳಿತ ಎರಡನ್ನೂ ಯಶಸ್ವಿಯಾಗಿ ನಿರ್ವಹಿಸಿ ಮುಂದಿನ ಪೀಳಿಗೆಗೆ ಮಹಿಳಾ ಮಾದರಿಯಾಗಿದ್ದಾರೆ. ಬಹಳ ಮುಖ್ಯವಾಗಿ ಜಾತ್ಯತೀತತೆ, ಘನತೆಯ ಬದುಕು, ಬೌದ್ಧಿಕ ಸ್ವಾಯತ್ತತೆ, ಬಹುತ್ವ, ಮಾನವ ಪ್ರೇಮದಂತಹ ಆದರ್ಶಗಳನ್ನು ಬದುಕುತ್ತಿರುವ ಸಾಹಸಿಯೂ ಹೌದು.

ಹೆಣ್ತನದ ಸಾಮರ್ಥ್ಯದ ಗಡಿಗಳನ್ನು ವಿಸ್ತರಿಸಿದ ಇಂತಹ ಹೆಣ್ಣು ಜೀವದ ಬದುಕು, ಸಾಧನೆಗಳ ದಾಖಲಿಸಬೇಕು ಮತ್ತು ಸಂಭ್ರಮಿಸಬೇಕೆಂದು ಸಬಿಹಾ ಸ್ನೇಹ ಬಳಗದವರು ‘ಒಡನಾಡಿ ಸಬಿಹಾ’ ಎಂಬ ಅಭಿನಂದನಾ ಹೊತ್ತಗೆಯನ್ನು ನುಡಿ ಬಾಗಿನವಾಗಿ ಸಿದ್ಧಪಡಿಸಿದ್ದಾರೆ. ಈ ಹೊತ್ತಗೆಯಲ್ಲಿ ಸಬಿಹಾರ ಬದುಕು-ಬರಹಗಳನ್ನು ಅರಿಯುವುದರ ಜೊತೆಗೆ ಅವರು ತಾತ್ತ್ವಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಕರ್ನಾಟಕದ ಚಳವಳಿ-ಕನ್ನಡ ಮಹಿಳಾ ಸಾಹಿತ್ಯಗಳ ಬಗೆಗಿನ ಅರಿವು ಹೆಚ್ಚಿಸುವ ಆಕರ ಗ್ರಂಥದಂತೆ ರೂಪಿಸಲು ಪ್ರಯತ್ನಿಸಲಾಗಿದೆ. ಕನ್ನಡ ನಾಡಿನ ಪ್ರಮುಖ ಚಳವಳಿಗಳ ಅವಲೋಕನ, ಕಳೆದೆರಡು ದಶಕಗಳ ಕನ್ನಡ ಸಾಹಿತ್ಯದ ಕುರಿತ ಬರಹ, ಸಬಿಹಾ ಅವರ ಸಾಹಿತ್ಯಾವಲೋಕನ, ಒಡನಾಡಿಗಳು ನೆನಪಿಸಿಕೊಂಡ ಸಬಿಹಾ ವ್ಯಕ್ತಿತ್ವದ ಚಿತ್ರಣ ಎಂಬ ನಾಲ್ಕು ಭಾಗಗಳನ್ನು ಅಭಿನಂದನಾ ಗ್ರಂಥವು ಒಳಗೊಂಡಿದೆ.

ಅಡುಗೆ-ಮನೆ-ಪರಿಕರಗಳ ಘಮ, ರುಚಿ, ಸತ್ವ ಮತ್ತು ಸಿಟ್ಟು, ಜುಗುಪ್ಸೆ ಎಂಬ ಎರಡು ತುದಿಗಳ ನಡುವೆ ಜೀಕುತ್ತ, ಜೀ..ಕು..ತ್ತಾ.. ಕಂಡುಕೊಂಡ ಹದದಂತೆ ಇವರ ಬರಹ ಮತ್ತು ಬದುಕು. ಅದನ್ನು ಸಂಭ್ರಮಿಸಲು ಸಬಿಹಾರ ಒಡನಾಡಿಗಳೆಲ್ಲ ಇದೇ 14ರಂದು ಮಂಗಳೂರಿನ ನಂತೂರಿನಲ್ಲಿರುವ ಶಾಂತಿಕಿರಣದಲ್ಲಿ ಬೆಳಿಗ್ಗೆ 10.30ಕ್ಕೆ ಸೇರುತ್ತಿದ್ದೇವೆ-ಮಾತು, ಹಾಡು, ನಾಟಕ, ಕಾವ್ಯ ಜೊತೆಗೆ ಶಾವಿಗೆ ಪಾಯಸ, ಕೋಳಿ ಗಸಿ, ಹುರಿದ ಮೀನಿನ ರುಚಿಕಟ್ಟಾದ ಊಟದೊಂದಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.