ADVERTISEMENT

ಕೊನೆವರೆಗೂ ರಿಜ್ವಾನ್‌ಗೆ ಮುನ್ನಡೆ

ಶಿವಾಜಿನಗರ ವಿಧಾನಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:45 IST
Last Updated 9 ಡಿಸೆಂಬರ್ 2019, 20:45 IST
ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ರಿಜ್ವಾನ್‌ ಅರ್ಷದ್‌ ಜಯ ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಹೊತ್ತುಕೊಂಡು ವಿಜಯೋತ್ಸವ ಆಚರಿಸಿದರು. ಪ್ರಜಾವಾಣಿ ಚಿತ್ರ
ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ರಿಜ್ವಾನ್‌ ಅರ್ಷದ್‌ ಜಯ ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಹೊತ್ತುಕೊಂಡು ವಿಜಯೋತ್ಸವ ಆಚರಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು:‌ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿದ ಮತದಾರರು, ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರನ್ನು 13,521 ಮತಗಳ ಅಂತರದಿಂದ ಗೆಲ್ಲಿಸಿದರು. ಅವರು ಆರಂಭಿಕ ಸುತ್ತಿನಿಂದ ಹಿಡಿದು ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡರು.

ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಆರಂಭದಿಂದಲೂ ಉಸಿರು ಬಿಗಿಹಿಡಿದುಕೊಳ್ಳುವಂತಹ ಕುತೂಹಲದ ವಾತಾವರಣ ಇರಲಿಲ್ಲ. ಮೊದಲ ಸುತ್ತಿನ ಎಣಿಕೆ ಮುಗಿದಾಗ ಎದುರಾಳಿ ಬಿಜೆಪಿಯ ಎಂ.ಶರವಣ ಅವರಿಗಿಂತ 500 ಮತಗಳಿಂದ ಮುಂದಿದ್ದ ರಿಜ್ವಾನ್‌ ಕೊನೆಯ (14ನೇ) ಸುತ್ತಿನವರೆಗೂ ಒಮ್ಮೆಯೂ ಹಿಂದೆ ಬೀಳಲಿಲ್ಲ.

ಎರಡನೇ ಸುತ್ತಿನಲ್ಲಿ 3,800 ಮತಗಳ ಅಂತರ ಕಾಯ್ದುಕೊಂಡ ರಿಜ್ವಾನ್‌, 3ನೇ ಸುತ್ತಿನ ಅಂತ್ಯದ ವೇಳೆಗೆ ಈ ಅಂತರವನ್ನು4,500ಕ್ಕೆ, 6ನೇ ಸುತ್ತಿನ ವೇಳೆಗೆ 10,261ಕ್ಕೆಹೆಚ್ಚಿಸಿಕೊಂಡಿದ್ದರು. ಅದುವರೆಗೂ ಎಣಿಕೆ ಕೇಂದ್ರದಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಂ.ಶರವಣ ನಂತರ ನಿರ್ಗಮಿಸಿದರು. ಕಾಂಗ್ರೆಸ್‌ಗೆ ಕ್ಷೇತ್ರದ ಮತದಾರರು ಒಲಿದಿರುವುದು ಆಗಲೇ ಖಚಿತವಾಗಿತ್ತು.

ADVERTISEMENT

9ನೇ ಸುತ್ತಿನಲ್ಲಿ ರಿಜ್ವಾನ್‌ಗೆ 17,976 ಮತಗಳ ಮುನ್ನಡೆ ದೊರೆತಿತ್ತು. ಆದರೆ ಬಳಿಕ ಅವರ ಗೆಲುವಿನ ಅಂತರ ಕಡಿಮೆಯಾಗುತ್ತಾ ಬಂತು. 12ನೇ ಸುತ್ತಿನ ಮತ ಎಣಿಕೆ ವೇಳೆಗೆ ರಿಜ್ವಾನ್‌ ಎಣಿಕೆ ಕೇಂದ್ರಕ್ಕೆ ಬಂದರು. ಆಗಲೇ ಹೊರಗಡೆ ಕಾಂಗ್ರೆಸ್‌ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಫಲಿಸದ ತಂತ್ರ: ಮುಸ್ಲಿಂ ಮತದಾರರೇ ನಿರ್ಣಾಯಕರಾಗಿರುವ ಶಿವಾಜಿನಗರ ಕ್ಷೇತ್ರದಲ್ಲಿ ಆ ಮತಗಳನ್ನು ಒಡೆಯುವ ಸಲುವಾಗಿ ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ‘ತಂತ್ರ’ವನ್ನು ಬಿಜೆಪಿ ಅನುಸರಿಸಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಓಟಕ್ಕೆ ಅದು ತಡೆ ಒಡ್ಡಲಿಲ್ಲ. ವಿಶೇಷವೆಂದರೆ ಜೆಡಿಎಸ್‌ ಅಭ್ಯರ್ಥಿಗಿಂತ (1,098) ಎಸ್‌ಡಿಪಿಐ ಅಭ್ಯರ್ಥಿಯೇ (3,141) ಅಧಿಕ ಮತ ಗಳಿಸಿದರು. ಒಟ್ಟು 986 ಮಂದಿ ‘ನೋಟಾ’ ಚಲಾಯಿಸಿದ್ದಾರೆ.

ಎಸ್‌ಡಿಪಿಐ ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ತಂತ್ರ ಮಾಡಿತ್ತು. ಆದರೆ ಫಲಿತಾಂಶದಲ್ಲಿ ಅದು ಹೆಚ್ಚು ಫಲ ನೀಡಲಿಲ್ಲ.

ಬಿಗಿ ಭದ್ರತೆ

ಶಿವಾಜಿನಗರ ಕ್ಷೇತ್ರವನ್ನು ಅತಿ ಸೂಕ್ಷ್ಮವೆಂದು ಪರಿಗಣಿಸಿದ್ದರಿಂದ ಮತ ಎಣಿಕೆ ಕೇಂದ್ರ ಸುತ್ತ ಭಾರಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಮತ ಎಣಿಕೆ ಕೊಠಡಿಯ ಭದ್ರತೆಯ ಹೊಣೆಯನ್ನು ಮಹಿಳಾ ಸಿಬ್ಬಂದಿ ವಹಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.