ADVERTISEMENT

ಉಪ ಚುನಾವಣೆ ಫಲಿತಾಂಶ: ಜನ ಏನಂತಾರೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 1:52 IST
Last Updated 10 ಡಿಸೆಂಬರ್ 2019, 1:52 IST
ಜಿಮ್ಮಿ ಜೋಸೆಫ್‌
ಜಿಮ್ಮಿ ಜೋಸೆಫ್‌   

ಬೆಂಗಳೂರು: ಸುಭದ್ರ ಸರ್ಕಾರ ಇರಲಿ ಎಂಬ ಉದ್ದೇಶದಿಂದ ಬಿಜೆಪಿಗೆ ಮತ ಹಾಕಲಾಗಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಉಳಿದ ಅವಧಿಯಲ್ಲಿ ಅಭಿವೃದ್ಧಿ ಕಡೆಗೆ ರಾಜ್ಯ ಸರ್ಕಾರ ಗಮನ ನೀಡಲಿ ಎಂಬ ಸಲಹೆಯನ್ನೂ ನೀಡಿದ್ದಾರೆ.

ತೀರ್ಪು ಆಶ್ಚರ್ಯ ತಂದಿದೆ

ಜನ ಯಾವ ಆಧಾರದ ಮೇಲೆ ಬಿಜೆಪಿಗೆ ಮತ ನೀಡಿದ್ದಾರೆ ಎಂಬುದೇ ಅಚ್ಚರಿ. ಡಿ.ಕೆ. ಶಿವಕುಮಾರ್‌ ಪ್ರಭಾವ ಕಾಂಗ್ರೆಸ್‌ ಕೈ ಹಿಡಿದಿಲ್ಲ. ಕಳಪೆ ಪ್ರದರ್ಶನದ ನಡುವೆಯೂ ಬಿಜೆಪಿ ಸರ್ಕಾರ ಜನಾದೇಶ ಪಡೆದಿರುವುದು ಅಚ್ಚರಿ ತಂದಿದೆ. ಎಲ್ಲ ಪಕ್ಷಗಳು ‘ನಾಟಕ’ ಮಾಡಿದವು. ಕೇಂದ್ರದ ಬೆಂಬಲವಿದ್ದರೆ ಏನು ಬೇಕಾದರೂ ಸಾಧ್ಯ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ.

ADVERTISEMENT

ಜಿಮ್ಮಿ ಜೋಸೆಫ್‌, ಖಾಸಗಿ ಕಂಪನಿ ಉದ್ಯೋಗಿ

ಗೆಲ್ಲಿಸಿದ ಮಾತ್ರಕ್ಕೆ ಅರ್ಹರು ಎಂದಲ್ಲ !

ಬಿಜೆಪಿ ಹೊರತು ಪಡಿಸಿ ಉಳಿದ ಎರಡು ಪಕ್ಷಗಳು ಜಯ ಸಾಧಿಸಿದರೆ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಜನ ಅನರ್ಹ ಶಾಸಕರಿಗೆ ಮತ ಹಾಕಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಅರ್ಹರು ಎಂದಲ್ಲ. ಸರ್ಕಾರ ಇನ್ನು ಮುಂದೆಯಾದರೂ ಅಭಿವೃದ್ಧಿಗೆ ಗಮನ ಕೊಡಲಿ.

ಜಿ.ಕೆ. ಸಹನಾ, ಖಾಸಗಿ ಉದ್ಯೋಗಿ

ಸ್ಥಿರ ಸರ್ಕಾರಕ್ಕೆ ಜನ ನೀಡಿದ ತೀರ್ಪು

ಅಭಿವೃದ್ಧಿ ದೃಷ್ಟಿಯಿಂದ ಸ್ಥಿರ ಸರ್ಕಾರವಿರಲಿ ಎಂದು ಜನ ಈ ತೀರ್ಪು ನೀಡಿದ್ದಾರೆ. ಅತಂತ್ರ ಸೃಷ್ಟಿಯಾದರೆ ಮತ್ತೆ ರಾಜಕೀಯ ಮೇಲಾಟ ನಡೆಯುತ್ತದೆ ಎಂಬ ಕಾರಣಕ್ಕೆ ಬಿಜೆಪಿಗೆ ಮತ ಹಾಕಿದ್ದಾರೆ. ಉಳಿದ ಅವಧಿಯಲ್ಲಿ ಸರ್ಕಾರ ಅಭಿವೃದ್ಧಿ ಕಡೆಗೆ ಗಮನ ಹರಿಸಲಿ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಿ

ರಮೇಶ್‌ಕುಮಾರ್, ಎಂಜಿನಿಯರ್

ಮಧ್ಯಂತರ ಚುನಾವಣೆ ಬೇಕಿರಲಿಲ್ಲ

ಜನರಿಗೆ ಮಧ್ಯಂತರ ಚುನಾವಣೆ ಇಷ್ಟ ಇರಲಿಲ್ಲ. ಬೇರೆ ಪಕ್ಷಕ್ಕೆ ಮತ ಹಾಕಿದ್ದರೆ ಮೂರುವರೆ ವರ್ಷದೊಳಗೆ ಮತ್ತೆ ಚುನಾವಣೆ ಬರುತ್ತಿತ್ತು. ಚುನಾವಣೆ ಖರ್ಚು ಏಕೆ ಎಂಬ ಕಾರಣಕ್ಕೆ ಜನ ಈ ತೀರ್ಪು ನೀಡಿದ್ದಾರೆ. ಯಾವ ಪಕ್ಷದ ಅಭ್ಯರ್ಥಿ ಗೆದ್ದರೂ ಅದೇ ಹಣೆಬರಹ. ಉಳಿದ ಅವಧಿಗಾದರೂ ರಾಜಕೀಯ ಕಿರಿಕಿರಿ ತಪ್ಪಲಿ.

ಸುಜಾತಾ ಕೆ. ಪೂಜಾರ್, ಖಾಸಗಿ ಶಾಲೆ ಶಿಕ್ಷಕಿ

ಅಚ್ಚರಿ ಮೂಡಿಸಿದ ಫಲಿತಾಂಶ

ರಾಜ್ಯದಲ್ಲಿ ಪ್ರವಾಹ ಇದ್ದಾಗ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ. ಎಷ್ಟೋ ಜನರಿಗೆ ಈಗಲೂ ಸರಿಯಾದ ನೆಲೆ ಇಲ್ಲ. ಆದರೂ ಜನ ಬಿಜೆಪಿಗೆ ಮತ ನೀಡಿದ್ದಾರೆ ಎಂದರೆ ಅವರಿಗೆ ಮತ್ತೆ ಚುನಾವಣೆ ಬೇಕಿಲ್ಲ ಎಂದೇ ಅರ್ಥ. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಆ ಪಕ್ಷಗಳಲ್ಲಿನ ಒಳಜಗಳವೇ ಮುಳುವಾಯಿತು.

ನಿಖಿತಾ, ಖಾಸಗಿ ಕಂಪನಿ ಉದ್ಯೋಗಿ

ಬಿಜೆಪಿ ಗೆದ್ದದ್ದು ಸಂತಸ ತಂದಿದೆ

ಸಮ್ಮಿಶ್ರ ಸರ್ಕಾರದಿಂದ ಆಗಬಹುದಾದ ಅನಾಹುತ ತಪ್ಪಿತು. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿರುವುದರಿಂದ ಯಾವುದೇ ನಿರ್ಣಯವನ್ನು ಬೇಗ ತೆಗೆದುಕೊಳ್ಳಬಹುದು. ಬಿಜೆಪಿ ಜಯ ಸಾಧಿಸಿರುವುದು ಸಂತಸ ತಂದಿದೆ.

ಪ್ರೀತಿ ಪಾಟೀಲ, ಜೈನ್‌ ಕಾಲೇಜು ವಿದ್ಯಾರ್ಥಿನಿ

ವಿಪಕ್ಷಗಳಲ್ಲಿ ಸ್ಪಷ್ಟ ನಿಲುವಿನ ಕೊರತೆ

ಮೈತ್ರಿ ಮಾಡಿಕೊಳ್ಳುವ ಅಥವಾ ಮೈತ್ರಿಯಿಂದ ದೂರವಿರುವ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಪಷ್ಟ ನಿಲುವು ತೆಗೆದುಕೊಳ್ಳಲಿಲ್ಲ. ಬೇರು ಮಟ್ಟದಲ್ಲಿ ಸಂಘಟನೆ ಕಡೆಗೆ ಗಮನ ಕೊಡಲಿಲ್ಲ. ಆಪರೇಷನ್‌ ಕಮಲ ಮುಂದುವರಿಯುವುದು ಬೇಡ ಎಂದು ಅನರ್ಹ ಶಾಸಕರಿಗೆ ಜನ ಮತ ಹಾಕಿದ್ದಾರೆ.

ಕೆ. ವಿಜಯ್‌ಕುಮಾರ್, ಖಾಸಗಿ ಶಾಲೆ ಶಿಕ್ಷಕ

ಮತ್ತೆ ಮತ್ತೆ ಮೋದಿ ಖಚಿತ

ಮತ್ತೊಮ್ಮೆ ನರೇಂದ್ರ ಮೋದಿ ಮಾತ್ರವಲ್ಲ, ಮತ್ತೆ ಮತ್ತೆ ಮೋದಿ ಎನ್ನುವುದು ಈ ಫಲಿತಾಂಶದಿಂದ ಖಚಿತವಾಯಿತು. ಸುಭದ್ರ ಸರ್ಕಾರಕ್ಕಾಗಿ ಜನ ಮತ ಹಾಕಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಈಗ ಸುಭದ್ರ ಸರ್ಕಾರವಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

ಮಹಾಲಕ್ಷ್ಮಿ ಬೂದಿಹಾಳಮಠ, ಖಾಸಗಿ ಕಂಪನಿ ಉದ್ಯೋಗಿ

ಜನರ ನೈಜ ತೀರ್ಪು

ಜನ ನೀಡಿರುವ ನಿಜವಾದ ತೀರ್ಪು ಇದು. ಸರ್ಕಾರದ ಭವಿಷ್ಯ ನಿರ್ಧರಿಸುವ ಈ ಚುನಾವಣೆಯಲ್ಲಿ ಜನ ವಿವೇಚನೆಯಿಂದ ಮತ ಚಲಾಯಿಸಿದ್ದಾರೆ. ಜನಾದೇಶವನ್ನು ಎಲ್ಲರೂ ಗೌರವಿಸಬೇಕು. ಈಗ ಗೆದ್ದಿರುವ ಶಾಸಕರು ಕೂಡ ಉತ್ತಮವಾಗಿ ಕೆಲಸ ಮಾಡುವ ಮೂಲಕ ಜನ ನೀಡಿದ ತೀರ್ಪು ಸರಿ ಎಂದು ಸಾಬೀತು ಮಾಡಬೇಕು.

ಎಂ. ಶಿವಶಂಕರ್, ತೆರಿಗೆ ಸಲಹೆಗಾರ

ವಲಸಿಗರಿಗೆ ಜಯ ಮಾಲೆ

ಬಿಜೆಪಿಯು ಮೂಲ ಕಾರ್ಯಕರ್ತರಿಗೆ ಬಿಟ್ಟು, ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಟಿಕೆಟ್‌ ನೀಡಿ ಗೆದ್ದಿದೆ. ಪಕ್ಷಕ್ಕಿಂತ ಕೆಲವರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿದೆ. ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೂ ಬಿಜೆಪಿ ಗೆದ್ದಿರುವುದು ಅಚ್ಚರಿ ತಂದಿದೆ.

ಮಂಜುನಾಥ್, ಖಾಸಗಿ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.