ADVERTISEMENT

ದೇಶಿ ಕ್ರಿಕೆಟಿಗರಿಗೆ ಸಂಭಾವನೆಯ ಪರಿಹಾರ

ಎಲ್ಲ ವಿಭಾಗದಲ್ಲೂ ಆಟಗಾರರು ಪಡೆಯುವ ಮೊತ್ತ ಹೆಚ್ಚಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ

ಪಿಟಿಐ
Published 20 ಸೆಪ್ಟೆಂಬರ್ 2021, 16:17 IST
Last Updated 20 ಸೆಪ್ಟೆಂಬರ್ 2021, 16:17 IST
ರಣಜಿ ಪಂದ್ಯವೊಂದರಲ್ಲಿ ಕರ್ನಾಟಕದ ಆಟಗಾರರು
ರಣಜಿ ಪಂದ್ಯವೊಂದರಲ್ಲಿ ಕರ್ನಾಟಕದ ಆಟಗಾರರು   

ನವದೆಹಲಿ: ಕಳೆದ ಋತುವಿನಲ್ಲಿ ಕೋವಿಡ್‌–19ರಿಂದಾಗಿ ತೊಂದರೆಗೆ ಒಳಗಾಗಿದ್ದ ದೇಶಿ ಕ್ರಿಕೆಟ್ ಆಟಗಾರರಿಗೆ ಪರಿಹಾರದ ರೂಪದಲ್ಲಿ ಪಂದ್ಯದ ಸಂಭಾವನೆಯ 50 ಶೇಕಡಾ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ತಿಳಿಸಿದೆ. ಮುಂದಿನ ಋತುವಿನಲ್ಲಿ ಸಂಭಾವನೆಯನ್ನು ಹೆಚ್ಚಿಸುವುದಕ್ಕೂ ನಿರ್ಧರಿಸಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿ, ಕಳೆದ ವರ್ಷ ರಣಜಿ ಟೂರ್ನಿ ನಡೆಯದೇ ಇದ್ದುದರಿಂದ ಅನೇಕ ಕ್ರಿಕೆಟಿಗರು ತೊಂದರೆಗೆ ಒಳಗಾಗಿದ್ದರು. ಅವರು ಬಿಸಿಸಿಐ ನೀಡಬೇಕಾಗಿದ್ದ ಸಂಭಾವನೆಗಾಗಿ ಕಾಯುತ್ತಿದ್ದರು.

‘2019–20ರ ಋತುವಿನಲ್ಲಿ ರಣಜಿ ಪಂದ್ಯಗಳನ್ನು ಆಡಿದವರಿಗೆ 2020-21ನೇ ಸಾಲಿನ ಸಂಭಾವನೆಯಾಗಿ ಹೆಚ್ಚುವರಿ ಹಣ ನೀಡಲು ನಿರ್ಧರಿಸಲಾಗಿದೆ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ. ಸೋಮವಾರ ನಡೆದ ಮಂಡಳಿಯ ಅಪೆಕ್ಸ್ ಸಮಿತಿ ಸಭೆಯಲ್ಲಿ, ‍ಪರಿಹಾರ ನೀಡಲು ಮತ್ತು ಪಂದ್ಯದ ಸಂಭಾವನೆ ಹೆಚ್ಚಿಸಲು ನಿರ್ಧರಿಸಲಾಯಿತು.

ADVERTISEMENT

40ಕ್ಕೂ ಹೆಚ್ಚು ರಣಜಿ ಪಂದ್ಯಗಳನ್ನು ಆಡಿರುವವರು ಇನ್ನು ಮುಂದೆ ಪ್ರತಿ ಪ್ರಥಮ ದರ್ಜೆ ಪಂದ್ಯಕ್ಕೆ ₹ 2.40 ಲಕ್ಷದಷ್ಟು ಗಳಿಸಲಿದ್ದಾರೆ. 21ರಿಂದ 40 ಪಂದ್ಯಗಳನ್ನು ಆಡಿರುವವರಿಗೆ ದಿನವೊಂದಕ್ಕೆ ₹ 50 ಸಾವಿರದಷ್ಟು ಸಿಗಲಿದ್ದು ಉಳಿದ ಆಟಗಾರರಿಗೆ ದಿನವೊಂದಕ್ಕೆ ₹ 40 ಸಾವಿರ ಸಿಗಲಿದೆ. 16 ವರ್ಷದೊಳಗಿನವರ ವಿಭಾಗದಿಂದ ಸೀನಿಯರ್ ವರೆಗಿನ ಸುಮಾರು ಎರಡು ಸಾವಿರ ಆಟಗಾರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಪ್ರಥಮ ದರ್ಜೆ, ಏಕದಿನ ಮತ್ತು ಟಿ20 ಪಂದ್ಯಗಳನ್ನು ಒಳಗೊಂಡ ಋತುವಿನ ಎಲ್ಲ ಪಂದ್ಯಗಳನ್ನು ಆಡಿದರೆ ಪ್ರತಿ ಆಟಗಾರ ₹ 20 ಲಕ್ಷದಷ್ಟು ಗಳಿಸಲಿದ್ದಾರೆ.

23 ಮತ್ತು 19 ವರ್ಷದೊಳಗಿನ ವಿಭಾಗದ ಆಟಗಾರರು ಪಂದ್ಯವೊಂದರ ಪ್ರತಿ ದಿನ ಕ್ರಮವಾಗಿ ₹ 25 ಸಾವಿರ ಮತ್ತು ₹ 20 ಸಾವಿರ ಗಳಿಸಲಿದ್ದಾರೆ. 16 ವರ್ಷದೊಳಗಿನವರು ₹ 3500ರ ಬದಲು ₹ 7 ಸಾವಿರ ಗಳಿಸಲಿದ್ದಾರೆ.

ಮಹಿಳಾ ಕ್ರಿಕೆಟಿಗರ ಸಂಭಾವನೆಯನ್ನು ಪಂದ್ಯವೊಂದಕ್ಕೆ ₹ 12 ಸಾವಿರದಿಂದ ₹ 20 ಸಾವಿರಕ್ಕೆ ಏರಿಸಲಾಗಿದೆ. 23 ಮತ್ತು 19 ವರ್ಷದೊಳಗಿನ ಬಾಲಕಿಯರು ₹ 10 ಸಾವಿರ ಗಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.