ADVERTISEMENT

ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಸೀಮಿತ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ

ಪಿಟಿಐ
Published 15 ಸೆಪ್ಟೆಂಬರ್ 2021, 13:44 IST
Last Updated 15 ಸೆಪ್ಟೆಂಬರ್ 2021, 13:44 IST
ಐಪಿಎಲ್: ರಾಯಿಟರ್ಸ್ ಚಿತ್ರ
ಐಪಿಎಲ್: ರಾಯಿಟರ್ಸ್ ಚಿತ್ರ   

ನವದೆಹಲಿ: ಯುಎಇಯಲ್ಲಿ ಈ ವಾರಾಂತ್ಯ ಪುನರಾರಂಭವಾಗಲಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಕ್ರೀಡಾಂಗಣಗಳಿಗೆ ಸೀಮಿತ ಪ್ರಮಾಣದ ಪ್ರೇಕ್ಷಕರನ್ನು ಅನುಮತಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಘೋಷಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಬಯೋ ಬಬಲ್‌ನಲ್ಲಿದ್ದ ಆಟಗಾರರಲ್ಲಿ ಕೆಲವರಿಗೆ ಕೋವಿಡ್ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಐಪಿಎಲ್‌ 2021ರ ಆವೃತ್ತಿಯ ಪಂದ್ಯಾವಳಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.

ಇದೀಗ, ಇದೇ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಕ್ರೀಡಾಕೂಟಕ್ಕೆ ಮತ್ತೆ ಚಾಲನೆ ಸಿಗಲಿದೆ.

ADVERTISEMENT

‘ಇದು ಒಂದು ಮಹತ್ವದ ಪಂದ್ಯವಾಗಿದ್ದು, ಕೋವಿಡ್ -19 ಪರಿಸ್ಥಿತಿಯಿಂದಾಗಿ ದೂರವಿದ್ದ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಮತ್ತೆ ಸ್ವಾಗತಿಸುತ್ತದೆ’ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಕೋವಿಡ್ ಪ್ರೋಟೊಕಾಲ್ ಮತ್ತು ಯುಎಇ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರೀಡಾಂಗಣಗಳಲ್ಲಿ ಸೀಮಿತ ಪ್ರೇಕ್ಷಕರಿಗೆ ಅವಕಾಶ ನೀಡುವ ಮೂಲಕ ಪಂದ್ಯಗಳನ್ನು ನಡೆಸಲಾಗುವುದು’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮೂಲಕ, 2019ರ ನಂತರ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿದೆ.

ಕಳೆದ ವರ್ಷ, ಯುಎಇಯಲ್ಲಿ ಯಾವುದೇ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆದಿದ್ದವು. 2021ರ ಆವೃತ್ತಿಯ ಮೊದಲಾರ್ಧವೂ ಅದೇ ರೀತಿ ಆಗಿತ್ತು.

ಎಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಅನುಮತಿಸಲಾಗುತ್ತದೆ ಎಂಬ ಬಗ್ಗೆ ಸಂಘಟಕರು ನಿರ್ದಿಷ್ಟವಾಗಿ ಹೇಳದಿದ್ದರೂ ಸಹ ಕ್ರೀಡಾಂಗಣದ ಸಾಮರ್ಥ್ಯದ ಶೇ. 50 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಸೆಪ್ಟೆಂಬರ್ 16 ರಿಂದ ಐಪಿಎಲ್‌ನ ಅಧಿಕೃತ ವೆಬ್‌ಸೈಟ್ www.iplt20.com ಮತ್ತು PlatinumList.net ನಲ್ಲಿಯೂ ಟಿಕೆಟ್ ಖರೀದಿಸಬಹುದು’ ಎಂದು ಲೀಗ್ ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.