ADVERTISEMENT

ಪಾರ್ಶ್ವವಾಯು: ಕಾಲಿನ ಸ್ವಾಧೀನ ಕಳೆದುಕೊಂಡ ಕಿವೀಸ್ ಕ್ರಿಕೆಟಿಗ ಕ್ರಿಸ್ ಕೇರ್ನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2021, 5:29 IST
Last Updated 20 ಸೆಪ್ಟೆಂಬರ್ 2021, 5:29 IST
   

ನವದೆಹಲಿ: ನ್ಯೂಜಿಲೆಂಡ್‌ ಕ್ರಿಕೆಟ್‌ನ ಶ್ರೇಷ್ಠರಲ್ಲಿ ಒಬ್ಬರಾದ ಕ್ರಿಸ್ ಕೇರ್ನ್ಸ್ ಹೃದಯದ ಶಸ್ತ್ರಚಿಕಿತ್ಸೆ ವೇಳೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ತಮ್ಮ ಜೀವನದ ಬಹುದೊಡ್ಡ ಸವಾಲನ್ನು ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

2000ರ ದಶಕದ ಆರಂಭದಲ್ಲಿ ವಿಶ್ವದ ಅಗ್ರಗಣ್ಯ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ 51 ವರ್ಷದ ಕ್ರಿಸ್ ಕೇರ್ನ್ಸ್, ಕಳೆದ ತಿಂಗಳು ಸಿಡ್ನಿಯಲ್ಲಿ ಹೃದಯದ ಪ್ರಮುಖ ಅಪಧಮನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ವೇಳೆಯೇ, ಅವರಿಗೆ ಪಾರ್ಶ್ವವಾಯು ಆಗಿದ್ದು, ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಕ್ರಿಸ್ ಕೇರ್ನ್ಸ್, ನನ್ನ ಜೀವ ಉಳಿಸಿದ ಶಸ್ತ್ರಚಿಕಿತ್ಸಕರು, ವೈದ್ಯರು, ದಾದಿಯರಿಗೆ ಧನ್ಯವಾದ ಎಂದು ಹೇಳಿದ್ದಾರೆ. ‘ಮುಂದೆ ಬಹಳ ದಾರಿ ಇವೆ’ಎಂದು ಹೇಳಿದ್ದಾರೆ.

‘ನಾನು ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಈ ಬಾರಿ ಉದ್ಭವಿಸಿದ ಒಂದು ತೊಡಕು ಎಂದರೆ ಬೆನ್ನುಮೂಳೆಯ ಪಾರ್ಶ್ವವಾಯು. ಇದು ನನ್ನ ಜೀವನದಲ್ಲಿ ಬಹುದೊಡ್ಡ ಸವಾಲಾಗಿದೆ’ಎಂದು ಹೇಳಿದ್ದಾರೆ.

ADVERTISEMENT

1989 ಮತ್ತು 2004ರ ನಡುವೆ 62 ಟೆಸ್ಟ್‌ಗಳನ್ನು ಆಡಿರುವ ಕೈರ್ನ್ಸ್, ಬೌಲಿಂಗ್‌ನಲ್ಲಿ 29.4 ಮತ್ತು ಬ್ಯಾಟಿಂಗ್‌ನಲ್ಲಿ 33.53 ಸರಾಸರಿ ಜೊತೆಗೆ 87 ಸಿಕ್ಸರ್‌ ಸಿಡಿಸಿದ್ದರು. ಆ ಸಮಯದಲ್ಲಿ ಇದು ವಿಶ್ವ ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.