ADVERTISEMENT

Explainer: ಟೀಂ ಇಂಡಿಯಾ ಮಾರ್ಗದರ್ಶಕರಾಗಿ ಧೋನಿ ಏನು ಮಾಡಲಿದ್ದಾರೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2021, 15:15 IST
Last Updated 9 ಸೆಪ್ಟೆಂಬರ್ 2021, 15:15 IST
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ಬೆಂಗಳೂರು: ಮುಂಬರುವ ಬಹುನಿರೀಕ್ಷಿತ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗಾಗಿ 15 ಸದಸ್ಯ ಬಲದ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ಆದರೆ ಅಚ್ಚರಿಯ ನಡೆಯೊಂದರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಮಾಜಿ ದಿಗ್ಗಜ ಹಾಗೂ ಎರಡು ಬಾರಿಯ ವಿಶ್ವಕಪ್ ವಿಜೇತ ಭಾರತದ ಅತ್ಯಂತ ಯಶಸ್ವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಕಗೊಳಿಸಿದೆ.

ಧೋನಿ ಮಾರ್ಗದರ್ಶಕರಾಗಿ ಆಯ್ಕೆಯಾಗಿರುವುದು ಅಭಿಮಾನಿಗಳ ಪಾಲಿಗಂತು ಸಂಭ್ರಮದ ವಿಚಾರ. ಆದರೆ ಇದರಿಂದ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿದೆಯೇ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ.

ತಮ್ಮ ಆಡುವ ಕಾಲಘಟ್ಟದಲ್ಲಿ ಓರ್ವ ಆಟಗಾರ ಹಾಗೂ ನಾಯಕರಾಗಿ ಧೋನಿ ಅಪಾರ ಯಶಸ್ಸು ಸಾಧಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ವಿಕೆಟ್ ಹಿಂದುಗಡೆ ನಿಂತು ಅವರು ತೆಗೆದುಕೊಳ್ಳುವ ನಿರ್ಧಾರಗಳು ತರ್ಕಕ್ಕೆ ನಿಲುಕದ್ದು. 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಂತಿಮ ಓವರ್ ಜೋಗಿಂದರ್ ಶರ್ಮಾ ಅವರಿಗೆ ನೀಡಿರುವುದು, ಬಳಿಕ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ರಚಿಸಿರುವುದು ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಆದರೆ ಓರ್ವ ಮಾರ್ಗದರ್ಶಕರಾಗಿ ತಂಡದ ಜೊತೆಗಿನ ಹೊಂದಾಣಿಕೆ ಹಾಗೂ ರಣತಂತ್ರ ರೂಪಿಸುವಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಧೋನಿ ಹೇಗೆ ನೆರವಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಧೋನಿ ಯೋಜನೆಗಳಿಗೆ ಮುಖ್ಯ ತರಬೇತುದಾರ ರವಿಶಾಸ್ತ್ರಿ ನೇತೃತ್ವದ ಕೋಚಿಂಗ್ ಪ್ಯಾನೆಲ್‌ನ ರಿಯಾಕ್ಷನ್ ಹೇಗಿರುತ್ತೆ ಎಂಬುದು ಕೂಡಾ ಮುಖ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ಹಾಗೂ ರವಿಶಾಸ್ತ್ರಿ ಜೊತೆಗೆ ಧೋನಿ ಉತ್ತಮ ಒಡನಾಟವನ್ನು ಕಾಯ್ದುಕೊಂಡಿರುವುದು ನೆರವಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಅಷ್ಟಕ್ಕೂ ಮಹೇಂದ್ರ ಸಿಂಗ್ ಧೋನಿ ಅವರ ಮೇಲಿರುವ ಜವಾಬ್ದಾರಿ ಏನು? ಎಂಬುದು ಗಮನಾರ್ಹವೆನಿಸುತ್ತದೆ. ತರಬೇತುದಾರರು ಇದಕ್ಕೆ ಸಮಾನವಾದ ಜವಾಬ್ದಾರಿಯನ್ನು ಹೊಂದಿದ್ದರೂ ಹೆಚ್ಚಾಗಿ ತರಬೇತಿ ಹಾಗೂ ತಂತ್ರಗಾರಿಕೆಯನ್ನು ಅವಲಂಬಿಸಿರುತ್ತದೆ. ಇನ್ನೊಂದೆಡೆ ತಂತ್ರಗಾರಿಕೆಯನ್ನು ಮೈದಾನದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಲು ಮತ್ತು ಒತ್ತಡದ ಸನ್ನಿವೇಶಗಳನ್ನು ಹೇಗೆ ನಿಭಾಯಿಸುವುದು ಮತ್ತು ಆಟಗಾರರ ಮನೋಬಲವನ್ನು ವೃದ್ಧಿಸಿಕೊಳ್ಳಲು ಮಾರ್ಗದರ್ಶಕರು ನೆರವಾಗುತ್ತಾರೆ.

ಯುವ ಹಾಗೂ ಅನುಭವಿ ಆಟಗಾರರಿಂದ ತುಂಬಿಕೊಂಡಿರುವ ಭಾರತ ತಂಡದ ಆಟಗಾರರಿಂದ ಶ್ರೇಷ್ಠ ಪ್ರದರ್ಶನ ಹೊರತರಲು ಓರ್ವ ಮಾರ್ಗದರ್ಶಕರಾಗಿ ಧೋನಿ ಅವರಿಗೆ ಸಾಧ್ಯವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಿಂದೊಮ್ಮೆ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್, ತಂಡದಲ್ಲಿ 'ಮೆಂಟರ್' ಮಹತ್ವದ ಬಗ್ಗೆ ಮಾತನಾಡಿದ್ದರು. 'ಯುವ ನಾಯಕ ಹಾಗೂ ತಂಡದಿಂದ ಶ್ರೇಷ್ಠ ಪ್ರದರ್ಶನ ಹೊರತರಲು ಅನುಭವಿ ನಾಯಕ ಮಾರ್ಗದರ್ಶನವನ್ನು ನೀಡಬೇಕು' ಎಂದು ಅಭಿಪ್ರಾಯಪಟ್ಟಿದ್ದರು.

ಪಂದ್ಯದ ಪರಿಸ್ಥಿತಿಯನ್ನು ಗ್ರಹಿಸಲು ಧೋನಿ ವಿಶಿಷ್ಟ ಕೌಶಲ್ಯವನ್ನು ಹೊಂದಿದ್ದಾರೆ. ತಮ್ಮ ಅನುಭವ ಸಂಪತ್ತನ್ನು ಸಂಪೂರ್ಣವಾಗಿ ಧಾರೆಯೆಳೆಯಲಿದ್ದಾರೆ. ಯುಎಇ ಪರಿಸ್ಥಿತಿಯಲ್ಲಿ ರಣತಂತ್ರ ರೂಪಿಸಲು ಹಾಗೂ ನಿರ್ಣಾಯಕ ಸನ್ನಿವೇಶಗಳಲ್ಲಿ ವಿರಾಟ್ ಕೊಹ್ಲಿ ಅವರಿಗೆ ನಿರ್ಣಯ ಕೈಗೊಳ್ಳಲು ನೆರವಾಗಲಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಐಸಿಸಿ ಪ್ರಮುಖ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಕಟು ಸತ್ಯವಾಗಿದೆ. ಟೂರ್ನಿಯುದ್ಧಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರೂ ಅಂತಿಮ ಹಂತದಲ್ಲಿ ಎಡವಿ ಬೀಳುವುದನ್ನು ರೂಢಿ ಮಾಡಿದಂತಿದೆ.

ಅಂಕಿಅಂಶಗಳು ಸಹ ಇದನ್ನೇ ಸಾರುತ್ತಿವೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿ ಪ್ರಶಸ್ತಿ ಕನಸು ಭಗ್ನಗೊಂಡಿತ್ತು. 2019ರ ಏಕದಿನ ವಿಶ್ವಕಪ್‌ನಲ್ಲೂ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿತ್ತು.

ಇವೆಲ್ಲದರ ಹೊರತಾಗಿ ಟಿ20 ವಿಶ್ವಕಪ್ ಬಳಿಕ ಮುಖ್ಯ ಕೋಚ್ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಕೋಚ್‌ಗಳ ಅವಧಿ ಕೊನೆಗೊಳ್ಳಲಿದೆ. ವಿಶ್ವಕಪ್ ಬಳಿಕವೂ ರವಿಶಾಸ್ತ್ರಿ ಮುಂದುವರಿಯಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಹಾಗೊಂದು ವೇಳೆ ಭಾರತದ ಕೋಚಿಂಗ್ ಪ್ಯಾನೆಲ್ ಬದಲಾದರೆ ಈ ಪರಿವರ್ತನೆ ಸುಗಮವಾಗಲು ಮತ್ತು ಇದರಿಂದ ತಂಡದ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಮಾರ್ಗದರ್ಶಕರಾಗಿ ಧೋನಿಅವರಿಗೆ ಸಾಧ್ಯವಾಗಲಿದೆ.

ಎಲ್ಲ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ದಾಖಲೆಯನ್ನು ಧೋನಿ ಹೊಂದಿದ್ದಾರೆ. 2007ರಲ್ಲಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು. ಈ ಪೈಕಿ 2011ರಲ್ಲಿ 28 ವರ್ಷಗಳ ಬಳಿಕ ಧೋನಿ ನಾಯಕತ್ವದಲ್ಲಿ ಭಾರತಏಕದಿನ ವಿಶ್ವಕಪ್ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.