ADVERTISEMENT

ಸೂರ್ಯಕುಮಾರ್ ಹ್ಯಾಟ್ರಿಕ್ 'ಗೋಲ್ಡನ್ ಡಕ್': ರೋಹಿತ್, ರಾಹುಲ್‌ಗೆ ಅಜಯ್ ಜಡೇಜ ಚಾಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2023, 13:40 IST
Last Updated 23 ಮಾರ್ಚ್ 2023, 13:40 IST
ರಾಹುಲ್‌ ದ್ರಾವಿಡ್‌ ಸೂರ್ಯಕುಮಾರ್‌ ಯಾದವ್‌ ಹಾಗೂ ರೋಹಿತ್‌ ಶರ್ಮಾ (ಪಿಟಿಐ ಚಿತ್ರಗಳು)
ರಾಹುಲ್‌ ದ್ರಾವಿಡ್‌ ಸೂರ್ಯಕುಮಾರ್‌ ಯಾದವ್‌ ಹಾಗೂ ರೋಹಿತ್‌ ಶರ್ಮಾ (ಪಿಟಿಐ ಚಿತ್ರಗಳು)   

ನವದೆಹಲಿ: ಸ್ಫೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ಸಂಬಂಧ ಮಾಜಿ ಕ್ರಿಕೆಟಿಗ ಅಜಯ್ ಜಡೇಜ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1–2 ಅಂತರದ ಮುಖಭಂಗ ಅನುಭವಿಸಿದೆ. ಮುಂಬೈನಲ್ಲಿ ನಡೆದ ಮೊದಲ ಪಂದ್ಯವನ್ನು 5 ವಿಕೆಟ್‌ ಅಂತರದಿಂದ ಗೆದ್ದಿದ್ದ ಭಾರತ, ನಂತರ ವಿಶಾಖಪಟ್ಟಣ ಹಾಗೂ ಚೆನ್ನೈನಲ್ಲಿ ನಡೆದ ಉಳಿದೆರಡು ಪಂದ್ಯಗಳಲ್ಲಿ ಮುಗ್ಗರಿಸಿತ್ತು.

ಸೂರ್ಯಕುಮಾರ್‌ ಯಾದವ್‌ ಅವರು ಮೂರೂ ಪಂದ್ಯಗಳಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ಸತತ ಮೂರು ಬಾರಿ 'ಗೋಲ್ಡನ್‌ ಡಕ್‌' (ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್‌) ಆದ ಭಾರತದ ಮೊದಲ ಬ್ಯಾಟರ್‌ ಎಂಬ ಅಪಖ್ಯಾತಿಗೆ ಗುರಿಯಾಗಿದರು.

ADVERTISEMENT

ಸೂರ್ಯ ಬ್ಯಾಟಿಂಗ್‌ ವೈಫಲ್ಯವನ್ನು ಉಲ್ಲೇಖಿಸಿ 'ಕ್ರಿಕ್‌ಬಜ್‌' ವೆಬ್‌ಸೈಟ್‌ ಜೊತೆ ಮಾತನಾಡಿರುವ ಅಜಯ್ ಜಡೇಜ, ನಾಯಕ ಹಾಗೂ ಕೋಚ್‌ ವಿರುದ್ಧ ಕಿಡಿಕಾರಿದ್ದಾರೆ.

'ಆತನನ್ನು (ಸೂರ್ಯಕುಮಾರ್‌ ಯಾದವ್‌) ಆಡಿಸಬಾರದು ಎಂದು ಕೆಲವರು ಬಯಸಿದ್ದರು. ನೀವು ಆಡಿಸಿದಿರಿ. ಆದರೆ, ವಾಸ್ತವದಲ್ಲಿ ಸೂರ್ಯ ಬ್ಯಾಟಿಂಗ್‌ ಬಗ್ಗೆ ನಿಮ್ಮಲ್ಲೂ ಅನುಮಾನಗಳಿದ್ದವು ಎಂಬುದನ್ನು ನಿಮ್ಮ ನಿರ್ಧಾರಗಳೇ ಹೇಳುತ್ತವೆ' ಎಂದಿದ್ದಾರೆ.

ಮೊದಲೆರಡು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಸೂರ್ಯ, ಆಸಿಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಿದ್ದರು. ಹೀಗಾಗಿ ಅಂತಿಮ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಆದಾಗ್ಯೂ ಅವರು ಸ್ಪಿನ್ನರ್‌ ಆಸ್ಟನ್‌ ಅಗರ್‌ಗೆ ಕ್ಲೀನ್‌ ಬೌಲ್ಡ್‌ ಆಗಿದ್ದರು.

ಈ ಕುರಿತು ಮಾತನಾಡಿರುವ ಜಡೇಜ, 'ಆತ ಫಾರ್ಮ್‌ನಲ್ಲಿ ಇಲ್ಲ. ಸ್ವಿಂಗ್‌ ಬೌಲಿಂಗ್‌ ಎದುರು ವೈಫಲ್ಯ ಅನುಭವಿಸುತ್ತಿರುವುದರಿಂದ ಈ (ವಿಕೆಟ್‌ ಬೀಳುತ್ತಿದ್ದ) ಸಮಯದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಗದು ಎಂದು ನೀವು ಭಾವಿಸಿರಬಹುದು. ಆದರೆ, ಆತ ಅಂತಿಮ ಹಂತದಲ್ಲಿ ಕ್ರೀಸ್‌ಗೆ ಇಳಿದರೆ, ಪರಿಸ್ಥಿತಿ ಇನ್ನೂ ಕಠಿಣವಾಗಿರುತ್ತದೆ' ಎಂದಿದ್ದಾರೆ.

'ಟೈಂ ಚೆನ್ನಾಗಿದ್ದಾಗ, ಬ್ಯಾಟರ್‌ ಅನ್ನು ಕಾಯುವಂತೆ ಮಾಡುವುದು ದೊಡ್ಡ ವಿಚಾರವಾಗುವುದಿಲ್ಲ. ಆದರೆ, ಫಾರ್ಮ್‌ನಲ್ಲಿಲ್ಲದ ಸಮಯದಲ್ಲಿ ಹಾಗೆ ಮಾಡುವುದು, ಆತನ ಮನಸ್ಸಿನಲ್ಲಿ ಸಾಕಷ್ಟು ಆಲೋಚನೆಗಳನ್ನು ಸೃಷ್ಟಿಸುತ್ತದೆ. ಆತ ಕೂಡ ಮನುಷ್ಯ ಅಲ್ಲವೇ' ಎಂದು ಕೇಳಿದ್ದಾರೆ.

'ಈಗಲೂ ಅಲ್ಲಿರುವುದು, ಜಗತ್ತಿನಾದ್ಯಂತ 360 ಡಿಗ್ರಿ ಶೈಲಿಯಲ್ಲಿ ಬ್ಯಾಟ್‌ ಬೀಸುವ ಅದೇ ಸೂರ್ಯಕುಮಾರ್‌ ಯಾದವ್‌. ಅವರಿಗೆ ಬ್ಯಾಟ್‌ ಮಾಡುವುದು ಗೊತ್ತಿಲ್ಲ ಎಂದೇನೂ ಅಲ್ಲ. ಅದು ಮನಸ್ಥಿತಿಯ ವಿಚಾರವಷ್ಟೇ. ವಿರಾಟ್‌ ಕೊಹ್ಲಿಯಂತಹ ಆಟಗಾರರೇ ಹಲವು ತಿಂಗಳು ಫಾರ್ಮ್‌ ಸಮಸ್ಯೆ ಎದುರಿಸಿದ್ದರು ಎಂದರೆ, ಅವರ ಮನಸ್ಸಿನಲ್ಲಿ ಬೇರೇನೋ ಇದೆ. ಅದು ಆಟದ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದರ್ಥ. ನೀವು ತುಂಬಾ ಯೋಚಿಸುತ್ತಿದ್ದರೆ ಹಾಗೂ ಬ್ಯಾಟರ್‌ ಕಾಯುವಂತೆ ಮಾಡುತ್ತಿದ್ದರೆ, ಅದು ಗೊಂದಲಗಳನ್ನು ಹೆಚ್ಚಿಸುತ್ತದೆ ಅಷ್ಟೇ' ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.