ADVERTISEMENT

ind vs eng 5th test: ಮುಂದೂಡಿದ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯ; ಮುಂದೇನು?

ಮ್ಯಾಂಚೆಸ್ಟರ್‌ನಲ್ಲಿ ನಿಗದಿಯಾಗಿದ್ದ ಭಾರತ–ಇಂಗ್ಲೆಂಡ್‌ ಐದನೇ ಟೆಸ್ಟ್‌; ನಿಯಮ ಸಡಿಲಿಕೆ ಮುಳುವಾದ ಆರೋಪ

ಏಜೆನ್ಸೀಸ್
Published 11 ಸೆಪ್ಟೆಂಬರ್ 2021, 12:07 IST
Last Updated 11 ಸೆಪ್ಟೆಂಬರ್ 2021, 12:07 IST
ಶುಕ್ರವಾರ ಪಂದ್ಯ ಮುಂದೂಡಿದ ನಂತರ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದ ನೋಟ –ರಾಯಿಟರ್ಸ್‌ ಚಿತ್ರ
ಶುಕ್ರವಾರ ಪಂದ್ಯ ಮುಂದೂಡಿದ ನಂತರ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದ ನೋಟ –ರಾಯಿಟರ್ಸ್‌ ಚಿತ್ರ   

ಮ್ಯಾಂಚೆಸ್ಟರ್‌: ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರ ಆರಂಭವಾಗಬೇಕಾಗಿದ್ದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನು ಕೋವಿಡ್‌ ಆತಂಕದಿಂದಾಗಿ ರದ್ದು ಮಾಡಲಾಗಿತ್ತು. ನಂತರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಆದರೆ ಮುಂದೇನು ಎಂಬ ಪ್ರಶ್ನೆ ಕ್ರಿಕೆಟ್‌ ಪ್ರಿಯರನ್ನು ಕಾಡತೊಡಗಿದೆ.

ಕೋಚ್ ರವಿಶಾಸ್ತ್ರಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ವಾರದ ಆರಂಭದಲ್ಲಿ ಖಚಿತವಾಗಿತ್ತು. ನಂತರ ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್‌ ರಾಮಕೃಷ್ಣನ್ ಶ್ರೀಧರ್‌ ಅವರಲ್ಲೂ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಅವರು ಮೂವರನ್ನು ಮ್ಯಾಂಚೆಸ್ಟರ್‌ಗೆ ಕಳುಹಿಸದೇ ಇರಲು ನಿರ್ಧರಿಸಲಾಗಿತ್ತು. ಅವರ ಸಂಪರ್ಕದಲ್ಲಿದ್ದ ಫಿಸಿಯೊ ನಿತಿನ್ ಪಟೇಲ್‌ ಅವರನ್ನು ಪ್ರತ್ಯೇಕವಾಸದಲ್ಲಿರಿಸಲಾಗಿತ್ತು.

ಸಹಾಯಕ ಫಿಸಿಯೊಗೆ ಕೋವಿಡ್‌ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಪಂದ್ಯ ನಡೆಯುವುದು ಸಂದೇಹ ಎಂಬ ವದಂತಿ ಗುರುವಾರ ಹಬ್ಬಿತ್ತು. ಆದರೆ ಆಟಗಾರರ ಆರ್‌ಟಿ–ಪಿಸಿಆರ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಪಂದ್ಯ ನಡೆಸಲು ನಿರ್ಧರಿಸಲಾಗಿತ್ತು. ಶುಕ್ರವಾರ ಟೆಸ್ಟ್ ಆರಂಭವಾಗಲು ಎರಡು ತಾಸುಗಳಿದ್ದಾಗ ದಿಢೀರ್ ಆಗಿ ಮುಂದೂಡಲು ತೀರ್ಮಾನಿಸಲಾಗಿತ್ತು.

ADVERTISEMENT

ನಿಯಮ ಸಡಿಲಿಕೆಯಿಂದ ಮೈಮರೆತರೇ?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಂಗ್ಲೆಂಡ್‌ನಲ್ಲಿ ಕೋವಿಡ್ ನಿಯಮಗಳಲ್ಲಿ ಸಡಿಲಿಕೆ ಮಾಡಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕಟ್ಟುನಿಟ್ಟಿನ ಕ್ವಾರಂಟೈನ್‌ನಿಂದ ಆಟಗಾರರ ಮನೋಸ್ಥೈರ್ಯ ಕುಗ್ಗುತ್ತದೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ ಈ ಅವಕಾಶವನ್ನು ಆಟಗಾರರು ಮತ್ತು ತಂಡದ ಆಡಳಿತದವರು ಮೈಮರೆತು ಬಳಸಿಕೊಂಡರೇ ಎಂಬ ಪ್ರಶ್ನೆ ಈಗ ಎದ್ದಿದೆ.

ಓವಲ್ ಟೆಸ್ಟ್‌ಗೆ ಎರಡು ದಿನಗಳು ಇದ್ದಾಗ ರವಿಶಾಸ್ತ್ರಿ ಅವರು ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಬಹಳಷ್ಟು ಮಂದಿ ಪಾಲ್ಗೊಂಡಿದ್ದರು. ಅಲ್ಲಿ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪಂದ್ಯ ಮುಂದೂಡಿದ ಕಾರಣ ಸರಣಿಯ ಫಲಿತಾಂಶಕ್ಕೂ ತಡೆಯಾಗಿದೆ. ನಾಲ್ಕು ಪಂದ್ಯಗಳಲ್ಲಿ ಭಾರತ ಎರಡನ್ನು ಗೆದ್ದುಕೊಂಡಿದ್ದು ಒಂದರಲ್ಲಿ ಆತಿಥೇಯರು ಜಯ ಸಾಧಿಸಿದ್ದಾರೆ. ಮೊದಲ ಪಂದ್ಯ ಡ್ರಾ ಆಗಿತ್ತು. ಕೊನೆಯ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ಸರಣಿಯ ಪ್ರಶಸ್ತಿ ಭಾರತದ ಪಾಲಾಗಲಿದೆ. ಟೆಸ್ಟ್ ಚಾಂಪಿಯನ್‌ಷಿಪ್‌ನ ಪಾಯಿಂಟ್‌ಗಳ ಮೇಲೆಯೂ ಪಂದ್ಯ ಮತ್ತು ಸರಣಿಯ ಫಲಿತಾಂಶ ಪರಿಣಾಮ ಬೀರಲಿದೆ.

ಬಿಸಿಸಿಐ ನಿರ್ಧಾರಕ್ಕೆ ಗಾವಸ್ಕರ್ ಸಂತಸ

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಮುಂದೂಡಲು ಒಪ್ಪಿಕೊಂಡಿದ್ದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಅಭಿನಂದಿಸಿದ್ದಾರೆ. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಇಸಿಬಿ ಕೂಡ ಇದೇ ರೀತಿಯಲ್ಲಿ ದೊಡ್ಡ ಮನಸ್ಸು ಮಾಡಿಕೊಂಡಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

'2008ರಲ್ಲಿ ದಾಳಿ ನಡೆದಾಗ ಇಂಗ್ಲೆಂಡ್ ತಂಡ ಭಾರತ ಪ್ರವಾಸದಲ್ಲಿತ್ತು. ತವರಿಗೆ ತೆರಳಿದ್ದ ಇಂಗ್ಲೆಂಡ್ ಆಟಗಾರರು ನಂತರ ವಾಪಸ್ ಬಂದು ಸರಣಿಯನ್ನು ಪೂರ್ತಿಗೊಳಿಸಿದ್ದರು. ನಮಗಿಲ್ಲಿ ಆತಂಕ ಕಾಡುತ್ತಿದೆ, ಆದ್ದರಿಂದ ವಾಪಸ್ ಬರುವುದಿಲ್ಲ’ ಎಂದು ಅವರು ಅಂದು ಹೇಳಬಹುದಿತ್ತು. ಆದರೆ ಹಾಗೆ ಮಾಡದೆ ದಿಟ್ಟತನದಿಂದ ಪರಿಸ್ಥಿತಿ ಎದುರಿಸಿದ್ದರು. ಅದರಲ್ಲಿ ಅಂದಿನ ನಾಯಕ ಕೆವಿನ್ ಪೀಟರ್ಸನ್ ಅವರ ಪಾಲು ದೊಡ್ಡದು’ ಎಂದು ಗಾವಸ್ಕರ್ ಹೇಳಿದ್ದಾರೆ.

‘ಈಗ ಪಂದ್ಯ ಮರುನಿಗದಿಗೆ ಬಿಸಿಸಿಐಯವರು ಒಪ್ಪಿಕೊಂಡಿರುವುದು ಬಹುದೊಡ್ಡ ಸಂತೋಷದ ಸುದ್ದಿ’ ಎಂದು ಭಾರತ–ಇಂಗ್ಲೆಂಡ್‌ ಟೆಸ್ಟ್ ಸರಣಿಯ ವೀಕ್ಷಕ ವಿವರಣೆಗಾರ ಆಗಿರುವ ಗಾವಸ್ಕರ್ ಪಂದ್ಯಗಳ ನೇರ ಪ್ರಸಾರ ಮಾಡುತ್ತಿರುವ ಸೋನಿ ಸ್ಪೋರ್ಟ್ಸ್‌ ವಾಹಿನಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.