ADVERTISEMENT

IND vs ENG: ಅಂತಿಮ ಟೆಸ್ಟ್ ಪಂದ್ಯ ಮರುನಿಗದಿಗೊಳಿಸಲು ಬಿಸಿಸಿಐ ಇಂಗಿತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 10:44 IST
Last Updated 10 ಸೆಪ್ಟೆಂಬರ್ 2021, 10:44 IST
   

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ಕೋವಿಡ್ ಭೀತಿಯಿಂದಾಗಿ ರದ್ದುಗೊಂಡಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉತ್ಸುಕತೆ ತೋರಿದೆ.

ಈ ಕುರಿತು ಬಿಸಿಸಿಐ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ಆಯೋಜಿಸಲು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಯಿತು. ಆದರೆ ಭಾರತೀಯ ಪಾಳಯದಲ್ಲಿ ಏಕಾಏಕಿ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದರಿಂದ ಮ್ಯಾಂಚೆಸ್ಟರ್ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು ಎಂದು ಹೇಳಿದೆ.

ಆದ್ಯಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಜೊತೆ ಸದೃಢ ಬಾಂಧವ್ಯ ಕಾಪಾಡಿಕೊಂಡಿರುವ ಬಿಸಿಸಿಐ, ಅಂತಿಮ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸಲು ಇಂಗಿತ ವ್ಯಕ್ತಪಡಿಸಿದೆ. ಇದಕ್ಕಾಗಿ ಎರಡೂ ಮಂಡಳಿಗಳು ಸಮಾಲೋಚನೆ ಮಾಡಿ ಸೂಕ್ತ ವೇಳಾಪಟ್ಟಿಯನ್ನು ರೂಪಿಸುವತ್ತ ಕೆಲಸ ಮಾಡಲಿದೆ.

ಬಿಸಿಸಿಐ ಯಾವತ್ತೂ ಆಟಗಾರರ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕಾಗಿ ಹೆಚ್ಚಿನ ಆದ್ಯತೆ ನೀಡಿದ್ದು, ಈ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಿಲ್ಲ ಎಂಬುದನ್ನು ತಿಳಿಸಿದೆ.

ಈ ಕಷ್ಟದ ಸಮಯದಲ್ಲಿ ಸಂಪೂರ್ಣ ಸಹಕಾರ ನೀಡಿರುವ ಇಸಿಬಿಗೆ ಬಿಸಿಸಿಐ ಧ್ಯನವಾದ ಸಲ್ಲಿಸಿದೆ. ಅಲ್ಲದೆ ರೋಚಕ ಸರಣಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದಕ್ಕೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದೆ.

ಈ ಮುನ್ನ ಕೋವಿಡ್‌ನಿಂದಾಗಿ ಭಾರತದಿಂದ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆಎಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿತ್ತು.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1ರ ಅಂತರದ ಮುನ್ನಡೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.