ADVERTISEMENT

IND vs NZ Test: ಮೊದಲ ಟೆಸ್ಟ್ ಡ್ರಾ, ಟೀಮ್ ಇಂಡಿಯಾಗೆ ನಿರಾಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2021, 11:29 IST
Last Updated 29 ನವೆಂಬರ್ 2021, 11:29 IST
ಭಾರತ–ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ಅಂತಿಮ ಓವರ್ ಸಂದರ್ಭದ ಚಿತ್ರ (ಕೃಪೆ – ಬಿಸಿಸಿಐ ಟ್ವಿಟರ್ ಖಾತೆ)
ಭಾರತ–ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ಅಂತಿಮ ಓವರ್ ಸಂದರ್ಭದ ಚಿತ್ರ (ಕೃಪೆ – ಬಿಸಿಸಿಐ ಟ್ವಿಟರ್ ಖಾತೆ)   

ಕಾನ್ಪುರ: ಕೊನೆಯ ಓವರ್‌ನವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಭಾರತ–ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಸೋಮವಾರ ಡ್ರಾದಲ್ಲಿ ಕೊನೆಗೊಂಡಿದೆ.

ಇಲ್ಲಿನ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದ ಕೊನೇ ಕ್ಷಣದಲ್ಲಿ ಭಾರತದ ಗೆಲುವಿಗೆ ಒಂದು ವಿಕೆಟ್ ಮಾತ್ರ ಬೇಕಿತ್ತು. ಆದರೆ ನ್ಯೂಜಿಲೆಂಡ್‌ ಬ್ಯಾಟರ್‌ಗಳು ಬಹಳ ಎಚ್ಚರಿಕೆಯಿಂದ ಕೊನೆಯ ವಿಕೆಟ್ ಪತನವಾಗದಂತೆ ನೋಡಿಕೊಂಡರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು ಶ್ರೇಯಸ್ ಅಯ್ಯರ್ ಶತಕ ಹಾಗೂ ಶುಭಮನ್ ಗಿಲ್, ರವೀಂದ್ರ ಜಡೇಜಾ ಅರ್ಧಶತಕಗಳ ನೆರವಿನಿಂದ 10 ವಿಕೆಟ್ ಕಳೆದುಕೊಂಡು 345 ರನ್ ಗಳಿಸಿತ್ತು. ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ಭಾರತ ಪರ ಅಕ್ಷರ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದ್ದರು.

ADVERTISEMENT

ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿದ್ದ ಟೀಮ್ ಇಂಡಿಯಾ, ನಾಲ್ಕನೇ ದಿನದಾಟದ ಕೊನೇ ಹಂತದಲ್ಲಿ ಡಿಕ್ಲೇರ್ ಮಾಡಿಕೊಂಡಿತ್ತು. ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಆಡುತ್ತಿರುವ ಶ್ರೇಯಸ್ ಅಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಗಳಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು. ಶ್ರೇಯಸ್ ಅಯ್ಯರ್ 65 ರನ್ ಗಳಿಸಿ ಔಟಾದರೆ, ವೃದ್ಧಿಮಾನ್ ಸಹಾ ಔಟಾಗದೆ 61 ರನ್ ಗಳಿಸಿದರು. ಆರ್.ಅಶ್ವಿನ್ (32) ಹಾಗೂ ಅಕ್ಷರ್ ಪಟೇಲ್ (28) ತಾಳ್ಮೆಯ ಆಟವಾಡಿ ತಂಡಕ್ಕೆ ನೆರವಾಗಿದ್ದರು.

ಪರಿಣಾಮವಾಗಿ ನ್ಯೂಜಿಲೆಂಡ್‌ಗೆ ಗೆಲ್ಲಲು ಟೀಮ್ ಇಂಡಿಯಾ 284 ರನ್ ಗುರಿ ನೀಡಿತು.

ಮೊದಲ ಇನ್ನಿಂಗ್ಸ್‌ನಂತೆಯೇ ಎರಡನೇ ಇನ್ನಿಂಗ್ಸ್ ಆರಂಭದಲ್ಲಿಯೂ ಭಾರತೀಯ ಬೌಲರ್‌ಗಳನ್ನು ಕಾಡಿದ ನ್ಯೂಜಿಲೆಂಡ್ ಬ್ಯಾಟರ್‌ಗಳು ಒಂದು ಹಂತದಲ್ಲಿ ಪಂದ್ಯವನ್ನು ಭಾರತದಿಂದ ಕೈಜಾರುವಂತೆ ಮಾಡುವ ಸುಳಿವು ನೀಡಿದ್ದರು. ಆದರೆ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸಂಘಟಿತ ದಾಳಿಯ ಪರಿಣಾಮ ಟೀಮ್ ಇಂಡಿಯಾ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿತು. ಆದರೆ, ಅಂತಿಮ ಕ್ಷಣದಲ್ಲಿ ಕೊನೆಯ ಒಂದು ವಿಕೆಟ್ ಪಡೆಯಲಾರದೆ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು.

ನ್ಯೂಜಿಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲಥಾಮ್ 95, ವಿಲ್ ಯಂಗ್ 89 ರನ್‌ ಗಳಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಟಾಮ್ ಲಥಾಮ್ 52 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳಿಂದಲೂ ಗಮನಾರ್ಹ ರನ್ ಗಳಿಕೆ ಸಾಧ್ಯವಾಗಿಲ್ಲ.

ಭಾರತ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಲ್ 5, ಅಶ್ವಿನ್ 3, ಉಮೇಶ್ 1 ಹಾಗೂ ಜಡೇಜಾ 1 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 3, ಜಡೇಜಾ 4, ಅಕ್ಷರ್ 1, ಉಮೇಶ್ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಪರ ಮೊದಲನೇ ಇನ್ನಿಂಗ್ಸ್‌ನಲ್ಲಿ ಸೌಥೀ 5, ಜೆಮಿಸನ್ 3, ಅಜಾಜ್ ಪಟೇಲ್ 2 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಸೌಥೀ, ಜೆಮಿಸನ್ ತಲಾ 3 ಮತ್ತು ಅಜಾಜ್ ಪಟೇಲ್ 1 ವಿಕೆಟ್ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.