ADVERTISEMENT

IPL 2021 | CSK vs MI: ಗಾಯಕವಾಡ್ ಅಬ್ಬರ; ಮರಳುನಾಡಿನಲ್ಲಿ ಮುಂಬೈ ಮಣಿಸಿದ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳು ಯುಎಇನಲ್ಲಿ ಆರಂಭವಾಗಿದೆ. ದುಬೈನಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್ ಅಂತರದ ಗೆಲುವು ದಾಖಲಿಸಿದೆ. ಅಜೇಯ 88 ರನ್ ಗಳಿಸಿದ ಋತುರಾಜ್ ಗಾಯಕವಾಡ್ ಚೆನ್ನೈ ತಂಡದ ಪರ ಗೆಲುವಿನ ರೂವಾರಿಯೆನಿಸಿದರು.

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 18:20 IST
Last Updated 19 ಸೆಪ್ಟೆಂಬರ್ 2021, 18:20 IST

ಮರಳುನಾಡಿನಲ್ಲಿ ಚೆನ್ನೈ ವಿಜಯೋತ್ಸವ

ದುಬೈ: ಋತುರಾಜ್ ಗಾಯಕವಾಡ್ (88*) ಅಮೋಘ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದುಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 20 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಭಾರತದಲ್ಲಿ ನಡೆದ ಮೊದಲಾರ್ಧದ ಪಂದ್ಯದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. 

157 ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈ ಎಂಟು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಗಾಯಕವಾಡ್ ಪಂದ್ಯದ ಹೀರೊ ಎನಿಸಿದರು. 

ADVERTISEMENT

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಿದರು. ಆದರೆ ಅದೃಷ್ಟ ಅವರ ಪರವಾಗಿರಲಿಲ್ಲ. 

ಗುರಿ ಬೆನ್ನಟ್ಟಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. 37 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ಕ್ವಿಂಟನ್ ಡಿ ಕಾಕ್ (17) ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅನ್ಮೋಲ್‌ಪ್ರೀತ್ ಸಿಂಗ್ (16) ಉತ್ತಮ ಆರಂಭ ಪಡೆದರೂ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಇವರಿಬ್ಬರನ್ನು ದೀಪಕ್ ಚಾಹರ್ ಹೊರದಬ್ಬಿದರು. 

ಬಳಿಕ ಶಾರ್ದೂಲ್ ಠಾಕೂರ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್ (3) ನಿರಾಸೆ ಮೂಡಿಸಿದರು. ಇದಾದ ಬೆನ್ನಲ್ಲೇ ಇಶಾನ್ ಕಿಶನ್‌ರನ್ನು (11) ಡ್ವೇನ್ ಬ್ರಾವೋ ಹೊರದಬ್ಬಿದರು. 10 ಓವರ್‌ಗಳ ಅಂತ್ಯಕ್ಕೆ ಮುಂಬೈ ನಾಲ್ಕು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. ಅಂದರೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 95 ರನ್‌ಗಳ ಅವಶ್ಯಕತೆಯಿತ್ತು. 

ಅಂತಿಮ ಹಂತದಲ್ಲಿ ಸೌರಭ್ ತಿವಾರಿ ಅರ್ಧಶತಕದ ದಿಟ್ಟ ಹೋರಾಟ ತೋರಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಚೆನ್ನೈ ಬೌಲರ್‌ಗಳು ನಿಖರ ದಾಳಿ ಸಂಘಟಿಸುವ ಮೂಲಕ ಗಮನ ಸೆಳೆದರು. 

ಪರಿಣಾಮ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. 40 ಎಸೆತಗಳನ್ನು ಎದುರಿಸಿದ ತಿವಾರಿ ಐದು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದರು. ಚೆನ್ನೈ ಪರ ಡ್ವೇನ್ ಬ್ರಾವೋ ಮೂರು, ದೀಪಕ್ ಚಾಹರ್ ಎರಡು ಮತ್ತು ಜೋಶ್ ಹೇಜಲ್‌ವುಡ್ ಹಾಗೂ ಶಾರ್ದೂಲ್ ಠಾಕೂರ್  ತಲಾ ಒಂದು ವಿಕೆಟನ್ನು ಹಂಚಿದರು. 

ಮುಂಬೈ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು

ಋತುರಾಜ್ ಗಾಯಕವಾಡ್ (88*) ಅಮೋಘ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದುಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 20 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಐಪಿಎಲ್ ಬಳಿಕ ಆರ್‌ಸಿಬಿ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ಘೋಷಣೆ

ಕೃಣಾಲ್ ಪಾಂಡ್ಯ ರನೌಟ್...

ನಂತರ ಕ್ರೀಸಿಗಿಳಿದ ಕೃಣಾಲ್ ಪಾಂಡ್ಯ (4) ರನೌಟ್ ಆದರು. ಇದರೊಂದಿಗೆ 94 ರನ್ನಿಗೆ ಆರನೇ ವಿಕೆಟ್ ಪತನವಾಯಿತು. ಅಲ್ಲದೆ ಅಂತಿಮ ಐದು ಓವರ್‌ಗಳಲ್ಲಿ ಗೆಲುವಿಗೆ 60 ರನ್‌ಗಳ ಅವಶ್ಯಕತೆಯಿತ್ತು. 

ಪೊಲಾರ್ಡ್ ನಿರ್ಗಮನ

ನಿರ್ಣಾಯಕ ಹಂತದಲ್ಲಿ ನಾಯಕ ಕೀರನ್ ಪೊಲಾರ್ಡ್ (15) ವಿಕೆಟ್ ನಷ್ಟವಾಗಿರುವುದು ಮುಂಬೈಗೆ ಮತ್ತಷ್ಟು ಹಿನ್ನಡೆಯಾಯಿತು. ಇದರೊಂದಿಗೆ 87 ರನ್ನಿಗೆ ಐದನೇ ವಿಕೆಟ್ ನಷ್ಟವಾಯಿತು.

10 ಓವರ್ ಅಂತ್ಯಕ್ಕೆ ಮುಂಬೈ 62/4

ಇಶಾನ್ ಕಿಶನ್ (11) ಅವರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. 10 ಓವರ್‌ಗಳ ಅಂತ್ಯಕ್ಕೆ ಮುಂಬೈ ನಾಲ್ಕು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. 

ನಿಖರ ದಾಳಿ ಸಂಘಟಿಸಿದ ಚಾಹರ್, ಶಾರ್ದೂಲ್

ನಿರಾಸೆ ಮೂಡಿಸಿದ ಸೂರ್ಯಕುಮಾರ್

ಈ ನಡುವೆ ಶಾರ್ದೂಲ್ ಠಾಕೂರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್ (3) ನಿರಾಸೆ ಮೂಡಿಸಿದರು. ಇದರೊಂದಿಗೆ 37 ರನ್ನಿಗೆ ಮೂರನೇ ವಿಕೆಟ್ ಪತನಗೊಂಡಿತು. 

35 ರನ್ನಿಗೆ ಮುಂಬೈ ಎರಡನೇ ವಿಕೆಟ್ ಪತನ

ಡಬಲ್ ಆಘಾತ ನೀಡಿದ ದೀಪಕ್ ಚಾಹರ್

ಚೊಚ್ಚಲ ಪಂದ್ಯ ಆಡುತ್ತಿರುವ ಅನ್ಮೋಲ್‌ಪ್ರೀತ್ ಸಿಂಗ್ (16) ಅವರನ್ನು ಹೊರದಬ್ಬಿದ ದೀಪಕ್ ಚಾಹರ್ ಡಬಲ್ ಆಘಾತ ನೀಡಿದರು. 14 ಎಸೆತಗಳನ್ನು ಎದುರಿಸಿದ ಅನ್ಮೋಲ್‌ಪ್ರೀತ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 16 ರನ್ ಗಳಿಸಿದರು. 

ಡಿ ಕಾಕ್ ವಿಕೆಟ್ ಪತನ

ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈಗೆ ಉತ್ತಮವಾಗಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ವಿಕೆಟ್ ನಷ್ಟವಾಯಿತು. 12 ಎಸೆತಗಳನ್ನು ಎದುರಿಸಿದ ಡಿ ಕಾಕ್ ಮೂರು ಬೌಂಡರಿಗಳ ನೆರವಿನಿಂದ 17 ರನ್ ಗಳಿಸಿದರು. 

ಗಾಯಕವಾಡ್ ಅವರನ್ನು ಅಭಿನಂದಿಸುತ್ತಿರುವ ಸೂರ್ಯಕುಮಾರ್ ಯಾದವ್

ಗಾಯಕವಾಡ್ ಬಿರುಸಿನ ಆಟ, ಚೆನ್ನೈ ಸವಾಲಿನ ಮೊತ್ತ

ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕವಾಡ್ ಆಕರ್ಷಕ ಅರ್ಧಶತಕದ (88*) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ಒಂದು ಹಂತದಲ್ಲಿ 24ಕ್ಕೆ ನಾಲ್ಕು ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಗಾಯಕವಾಡ್ ನೆರವಾದರು. ರವೀಂದ್ರ ಜಡೇಜ (26) ಹಾಗೂ ಡ್ವೇನ್ ಬ್ರಾವೋ (23) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಫಾಫ್ ಡು ಪ್ಲೆಸಿ (0) ಹಾಗೂ ಮೊಯಿನ್ ಅಲಿ (0) ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು.  

ಈ ನಡುವೆ ಗಾಯಗೊಂಡ ಅಂಬಟಿ ರಾಯುಡು  (0) ನಿವೃತ್ತಿ ಹೊಂದಿದರು. ಅನುಭವಿ ಆಟಗಾರ ಸುರೇಶ್ ರೈನಾ (4) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (3) ಅವರಿಂದಲೂ ಹೆಚ್ಚೇನು ಮಾಡಲಾಗಲಿಲ್ಲ. ಈ ವೇಳೆ ತಲಾ ಎರಡು ವಿಕೆಟ್‌ಗಳನ್ನು ಪಡೆದ ಟ್ರೆಂಟ್ ಬೌಲ್ಟ್ ಹಾಗೂ ಆ್ಯಡಂ ಮಿಲ್ನೆ ಮಿಂಚಿದರು. 

ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ 24 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. 

ಈ ಹಂತದಲ್ಲಿ ರವೀಂದ್ರ ಜಡೇಜ ಜೊತೆಗೂಡಿದ ಆರಂಭಿಕ ಋತುರಾಜ್ ಗಾಯಕವಾಡ್ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಾಯಕವಾಡ್ ಗಮನ ಸೆಳೆದರು. 15 ಓವರ್ ಅಂತ್ಯಕ್ಕೆ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿತ್ತು.  

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್, ಐಪಿಎಲ್‌ನಲ್ಲಿ 6ನೇ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಫಿಫ್ಟಿ ಬೆನ್ನಲ್ಲೇ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಸಿಕ್ಸರ್ ಬಾರಿಸಿ ಮಿಂಚಿದರು.

ಇನ್ನೊಂದೆಡೆ ಗಾಯಕವಾಡ್‌ಗೆ ಉತ್ತಮ ಸಾಥ್ ನೀಡುತ್ತಿದ್ದ ಜಡೇಜರನ್ನು ಬೂಮ್ರಾ ಹೊರದಬ್ಬಿದರು. ಇಧರೊಂದಿಗೆ ಐದನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟವು ಮುರಿದು ಬಿತ್ತು. 33 ಎಸೆತಗಳನ್ನು ಎದುರಿಸಿದ ಜಡೇಜ ಒಂದು ಬೌಂಡರಿ ನೆರವಿನಿಂದ 26 ರನ್ ಗಳಿಸಿದರು. 

ಕೊನೆಯ ಹಂತದಲ್ಲಿ ಡ್ವೇನ್ ಬ್ರಾವೋ ಕೇವಲ ಏಳು ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿ ಗಮನ ಸೆಳೆದರು. ಅಲ್ಲದೆ ಋತುರಾಜ್ ಜೊತೆ ಸೇರಿಕೊಂಡು ಬೌಲ್ಟ್ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 24 ರನ್‌ಗಳನ್ನು ಸೊರೆಗೈದರು. 

ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿತ್ತು. ಅಮೋಘ ಆಟದ ಪ್ರದರ್ಶನ ನೀಡಿದ ಗಾಯಕವಾಡ್ 88 ರನ್ ಗಳಿಸಿ ಅಜೇಯರಾಗುಳಿದರು. 58 ಎಸೆತಗಳನ್ನು ಎದುರಿಸಿದ ಗಾಯಕವಾಡ್ ಒಂಬತ್ತು ಬೌಂಡರಿ ಹಾಗೂ ನಾಲ್ಕು ಮನಮೋಹಕ ಸಿಕ್ಸರ್‌ಗಳನ್ನು ಬಾರಿಸಿದ್ದರು. ಮುಂಬೈ ಪರ ಬೌಲ್ಟ್, ಬೂಮ್ರಾ ಹಾಗೂ ಮಿಲ್ನೆ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು. 

ಮುಂಬೈಗೆ 157 ರನ್‌ಗಳ ಗೆಲುವಿನ ಗುರಿ

ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕವಾಡ್ ಆಕರ್ಷಕ ಅರ್ಧಶತಕದ (88*) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ರವೀಂದ್ರ ಜಡೇಜ (26) ಹಾಗೂ ಡ್ವೇನ್ ಬ್ರಾವೋ (23) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. 

ಜಡೇಜ ವಿಕೆಟ್ ಪತನ, ಜೊತೆಯಾಟ ಮುರಿದ ಬೂಮ್ರಾ

ಈ ನಡುವೆ ಅತ್ಯುತ್ತಮವಾಗಿ ಆಡುತ್ತಿದ್ದ ರವೀಂದ್ರ ಜಡೇಜ ಅವರನ್ನು ಜಸ್‌ಪ್ರೀತ್ ಬೂಮ್ರಾ ಹೊರದಬ್ಬಿದರು. ಇದರೊಂದಿಗೆ 81 ರನ್‌ಗಳ ಜೊತೆಯಾಟವು ಮುರಿದುಬಿತ್ತು. 33 ಎಸೆತಗಳನ್ನು ಎದುರಿಸಿದ ಜಡೇಜ ಒಂದು ಬೌಂಡರಿ ನೆರವಿನಿಂದ 26 ರನ್ ಗಳಿಸಿದರು. 

ಗಾಯಕವಾಡ್ ಫಿಫ್ಟಿ ಸಾಧನೆ

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಋತುರಾಜ್ ಗಾಯಕವಾಡ್, ಐಪಿಎಲ್‌ನಲ್ಲಿ ಆರನೇ ಅರ್ಧಶತಕ ಸಾಧನೆ ಮಾಡಿದರು. 
 

ಗಾಯಕವಾಡ್ ಆಸರೆ...

ಈ ಸಂದರ್ಭದಲ್ಲಿ ರವೀಂದ್ರ ಜಡೇಜ ಜೊತೆಗೂಡಿದ ಆರಂಭಿಕ ಋತುರಾಜ್ ಗಾಯಕವಾಡ್ ತಂಡವನ್ನು ಮುನ್ನಡೆಸಿದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಾಯಕವಾಡ್ ಗಮನಸೆಳೆದರು. 15 ಓವರ್ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿತ್ತು.  

ಅಂಬಟಿ ರಾಯುಡು ಗಾಯಾಳು

ನಿರಾಸೆ ಮೂಡಿಸಿದ ಧೋನಿ, ರೈನಾ

ಈ ನಡುವೆ ಗಾಯಗೊಂಡ ಅಂಬಟಿ ರಾಯುಡು ನಿವೃತ್ತಿ ಹೊಂದಿದರು. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (4) ಹಾಗೂ ಸುರೇಶ್ ರೈನಾ (3) ಅವರಿಂದಲೂ ಹೆಚ್ಚೇನು ಸಾಧನೆ ಮಾಡಲಾಗಿಲ್ಲ. ಇದರೊಂದಿಗೆ 24 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಚೆನ್ನೈ ಸಂಕಷ್ಟಕ್ಕೆ ಸಿಲುಕಿತು.

ಮುಂಬೈ ಆಟಗಾರರ ಸಂಭ್ರಮ

ಚೆನ್ನೈ ಕಳಪೆ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭಿಕ ಆಘಾತಕ್ಕೊಳಗಾಗಿದೆ. ತಂಡವು ಎರಡು ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಫಾಫ್ ಡು ಪ್ಲೆಸಿ ಹಾಗೂ ಮೊಯಿನ್ ಅಲಿ ಖಾತೆ ತೆರೆಯುವಲ್ಲಿ ವಿಫಲರಾದರು. ಈ ವಿಕೆಟ್‌ಗಳನ್ನು ಟ್ರೆಂಟ್ ಬೌಲ್ಡ್ ಹಾಗೂ ಆ್ಯಡಂ ಮಿಲ್ನೆ ಹಂಚಿದರು. 

ಟಾಸ್ ಝಲಕ್

ಬೂಮ್ರಾ, ಬ್ರಾವೋ 100 ಪಂದ್ಯಗಳ ಮೈಲಿಗಲ್ಲು

ರೋಹಿತ್ ಶರ್ಮಾ ಅಲಭ್ಯ, ಆಡುವ ಬಳಗ ಇಂತಿದೆ

ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಬ್ಯಾಟಿಂಗ್ ಆಯ್ಕೆ

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ದ್ವಿತೀಯಾರ್ಧದ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ಧೋನಿ ಮಂದಹಾಸ

IPL 2021| ಮರಳುನಾಡಿನಲ್ಲಿ ಮತ್ತೆ ಐಪಿಎಲ್ ಹಬ್ಬ

ಮುಯ್ಯಿ ತೀರಿಸಿಕೊಳ್ಳುವತ್ತ ಧೋನಿ ಚಿತ್ತ

ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಅವತ್ತು ಮುಂಬೈ ತಂಡವು ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಚೆನ್ನೈ ನೀಡಿದ್ದ 218 ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ಮುಂಬೈ ಯಶಸ್ವಿಯಾಗಿತ್ತು. ಅಂಬಟಿ ರಾಯುಡು ಅವರ ಅಮೋಘ ಅರ್ಧಶತಕ ವ್ಯರ್ಥವಾಗಿತ್ತು.

ಆದರೆ, ಕೀರನ್ ಪೊಲಾರ್ಡ್ ಅವರ ಅಬ್ಬರದ 87 ರನ್‌ಗಳ ಆಟಕ್ಕೆ ಜಯ ಒಲಿದಿತ್ತು. ರೋಹಿತ್ ಶರ್ಮಾ ಬಳಗವು ಜಯದ ಸಂಭ್ರಮ ಆಚರಿಸಿತ್ತು.

ಆ ಹಂತದಲ್ಲಿ ಧೋನಿ ಬಳಗವು ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಮುಂಬೈ ನಾಲ್ಕರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಎರಡೂ ತಂಡಗಳಲ್ಲಿ ಅಬ್ಬರದ ಬ್ಯಾಟ್ಸ್‌ಮನ್‌ಗಳು ಮತ್ತು ಆಲ್‌ರೌಂಡರ್‌ಗಳು ಇರುವುದರಿಂದ ಮತ್ತೊಮ್ಮೆ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಇದೆ.
 

ಮಹೇಂದ್ರ ಸಿಂಗ್ ಧೋನಿ vs ರೋಹಿತ್ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.