ADVERTISEMENT

IPL 2021: ಪಂಜಾಬ್‌ಗೆ ಸೋಲು; ವ್ಯಾಪಕ ಟೀಕೆಗೆ ಗುರಿಯಾದ ಅನಿಲ್ ಕುಂಬ್ಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2021, 13:01 IST
Last Updated 22 ಸೆಪ್ಟೆಂಬರ್ 2021, 13:01 IST
ಅನಿಲ್ ಕುಂಬ್ಳೆ ಹಾಗೂ ಮಯಂಕ್ ಅಗರವಾಲ್ (ಸಂಗ್ರಹ ಚಿತ್ರ)
ಅನಿಲ್ ಕುಂಬ್ಳೆ ಹಾಗೂ ಮಯಂಕ್ ಅಗರವಾಲ್ (ಸಂಗ್ರಹ ಚಿತ್ರ)   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೇವಲ ಎರಡು ರನ್ ಅಂತರದ ಸೋಲಿಗೆ ಶರಣಾಗಿದೆ.

ಇದರಿಂದಾಗಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ವ್ಯಾಪಕ ಟೀಕೆಗೊಳಗಾಗಿದ್ದಾರೆ.

ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಹರಲ್ಲ ಎಂದು ಅಭಿಪ್ರಾಯಪಟ್ಟಿರುವ ಅಭಿಮಾನಿಗಳು, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾದ ತರಬೇತುದಾರ ಹುದ್ದೆಗೆ ಆಯ್ಕೆ ಮಾಡಬಾರದು ಎಂದು ಹೇಳಿದ್ದಾರೆ.

ಪಂಜಾಬ್ ತಂಡದ ಆಯ್ಕೆ ಬಗ್ಗೆಯೂ ಕುಂಬ್ಳೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಪ್ರಮುಖವಾಗಿಯೂ ಟೂರ್ನಿಯ ಮೊದಲಾರ್ಧದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಕೈಬಿಟ್ಟಿರುವುದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಮೇಲಿನ ಸೇಡನ್ನು ಕುಂಬ್ಳೆ ಅವರು ರವಿ ಬಿಷ್ಣೋಯಿ ಮೇಲೆ ತೀರಿಸುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕ್ರಿಸ್ ಗೇಲ್ ಅವರಿಗೂ ಅವಕಾಶ ನೀಡದಿರುವುದು ಕುಂಬ್ಳೆ ಮೇಲಿನ ಕೋಪಕ್ಕೆ ಕಾರಣವಾಗಿದೆ.

'ಅನಿಲ್ ಕುಂಬ್ಳೆ, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕ್ರಿಸ್ ಗೇಲ್ ಎಲ್ಲರೂ ಆರ್‌ಸಿಬಿ ತಂಡವನ್ನು ತೊರೆದಿದ್ದಾರೆ. ಆದರೆ ಆರ್‌ಸಿಬಿ ಅವರನ್ನು ತೊರೆದಿಲ್ಲ' ಎಂದು ಮಗದೊಬ್ಬರು ಟೀಕಿಸಿದ್ದಾರೆ.

ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ 185 ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ನಾಲ್ಕು ವಿಕೆಟ್ ನಷ್ಟಕ್ಕೆ 183 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗಾಗಿ ನಾಲ್ಕು ರನ್ ಗಳಿಸಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.