ADVERTISEMENT

ಶಿವಕುಮಾರ್‌ ಆಲ್‌ರೌಂಡ್ ಆಟ; ಹುಬ್ಬಳ್ಳಿ ಜಯಭೇರಿ

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿ: ಸಿಸೊಡಿಯಾ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 17:28 IST
Last Updated 19 ಆಗಸ್ಟ್ 2022, 17:28 IST
ಹುಬ್ಬಳ್ಳಿ ಟೈಗರ್ಸ್ ತಂಡದ ಬಿಯು ಶಿವಕುಮಾರ್ ಸಂಭ್ರಮ 
ಹುಬ್ಬಳ್ಳಿ ಟೈಗರ್ಸ್ ತಂಡದ ಬಿಯು ಶಿವಕುಮಾರ್ ಸಂಭ್ರಮ    

ಬೆಂಗಳೂರು: ಆಲ್‌ರೌಂಡ್ ಆಟವಾಡಿದ ಬಿ.ಯು. ಶಿವಕುಮಾರ್ (ಔಟಾಗದೆ 61 ಹಾಗೂ 17ಕ್ಕೆ1) ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಇಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಗಳಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ತಂಡವು 8 ವಿಕೆಟ್‌ಗಳಿಂದ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಗೆದ್ದಿತು. ಟೂರ್ನಿಯಲ್ಲಿ ತಂಡಕ್ಕೆ ಇದು ನಾಲ್ಕನೇ ಜಯ.

ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಲುವನಿತ್ ಸಿಸೊಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಶಿವಮೊಗ್ಗ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 146 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡವು 17.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 149 ರನ್ ಗಳಿಸಿತು. ಲುವನಿತ್ ಸಿಸೊಡಿಯಾ (62; 38ಎ, 4X6, 6X3) ಹಾಗೂ ಶಿವಕುಮಾರ್ ಮೊದಲ ವಿಕೆಟ್ ಜೊತೆಯಾಟದಲ್ಲಿ 107 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶಿವಕುಮಾರ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.

ADVERTISEMENT

ಅವರು ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಶಿವಮೊಗ್ಗ ತಂಡಕ್ಕೆ ಶರತ್ ಬಿಆರ್ (36; 33ಎ) ಹಾಗೂ ಸ್ಟಾಲಿನ್ ಹೂವರ್ (38; 25ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 71 ರನ್‌ ಸೇರಿಸಿದ್ದ ಅವರ ಜೊತೆಯಾಟವನ್ನು ಶಿವಕುಮಾರ್ ಮುರಿದರು. ಹತ್ತನೇ ಓವರ್‌ನಲ್ಲಿ ಸ್ಟಾಲಿನ್ ಹೂವರ್ ವಿಕೆಟ್ ಪಡೆದ ಅವರು ಮಿಂಚಿದ್ದರು. ಸಿದ್ಧಾರ್ಥ್ (23) ಹಾಗೂ ಎಸ್‌. ಚೈತನ್ಯ (ಔಟಾಗದೆ 32) ಕೂಡ ಉಪಯುಕ್ತ ಕಾಣಿಕೆ ನೀಡಿದರು. ಆದರೆ, ಶಿವಮೊಗ್ಗ ತಂಡವು ಹುಬ್ಬಳ್ಳಿಗೆ ಕಠಿಣ ಗುರಿಯೊಡ್ಡುವಲ್ಲಿ ಸಫಲವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು
ಶಿವಮೊಗ್ಗ ಸ್ಟ್ರೈಕರ್ಸ್:
20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 146 (ಬಿ.ಆರ್. ಶರತ್ 36, ಸ್ಟಾಲಿನ್ ಹೂವರ್ 38, ಸಿದ್ಧಾರ್ಥ್ 23, ಎಸ್. ಚೈತನ್ಯ ಔಟಾಗದೆ 32, ವಿ. ಕೌಶಿಕ್ 29ಕ್ಕೆ2)

ಹುಬ್ಳಿ ಟೈಗರ್ಸ್: 17.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 149 (ಲುವನಿತ್ ಸಿಸೊಡಿಯಾ 62, ಬಿ.ಯು. ಶಿವಕುಮಾರ್ ಔಟಾಗದೆ 61, ಲಿಯಾನ್ ಖಾನ್ ಔಟಾಗದೆ 19)

ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 8 ವಿಕೆಟ್‌ಗಳ ಜಯ.

ಇಂದಿನ ಪಂದ್ಯಗಳು
ಮಂಗಳೂರು ಯುನೈಟೆಡ್–ಶಿವಮೊಗ್ಗ ಸ್ಟ್ರೈಕರ್ (ಮಧ್ಯಾಹ್ನ 3)
ಮೈಸೂರು ವಾರಿಯರ್ಸ್–ಬೆಂಗಳೂರು ಬ್ಲಾಸ್ಟರ್ಸ್ (ರಾತ್ರಿ 7)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.