ADVERTISEMENT

ಮಹಿಳೆಯರ ಏಕದಿನ ಕ್ರಿಕೆಟ್‌: ಮೂನಿ ಶತಕ, ಆಸ್ಟ್ರೇಲಿಯಾಗೆ ಜಯದ ಹೊಂಬೆಳಕು

ಮಹಿಳೆಯರ ಏಕದಿನ ಕ್ರಿಕೆಟ್‌: ಸ್ಮೃತಿ ಮಂದಾನ, ಶಫಾಲಿ, ರಿಚಾ ಜೊತೆಯಾಟಗಳು ವ್ಯರ್ಥ

ಪಿಟಿಐ
Published 24 ಸೆಪ್ಟೆಂಬರ್ 2021, 14:15 IST
Last Updated 24 ಸೆಪ್ಟೆಂಬರ್ 2021, 14:15 IST
ಬೇತ್ ಮೂನಿ –ಎಎಫ್‌ಪಿ ಚಿತ್ರ
ಬೇತ್ ಮೂನಿ –ಎಎಫ್‌ಪಿ ಚಿತ್ರ   

ಮಕಾಯ, ಆಸ್ಟ್ರೇಲಿಯಾ: ಅತ್ಯಂತ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಕೊನೆಯ ಓವರ್‌ನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಗೆಲುವಿನತ್ತ ದಾಪುಗಾಲು ಹಾಕಿದ್ದ ಭಾರತ ಮಹಿಳಾ ತಂಡ ಸೋಲಿನ ಸುಳಿಯಲ್ಲಿ ಸಿಲುಕಿತು.

ಭಾರತ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಎರಡನೇ ಪಂದ್ಯದಲ್ಲಿಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತು. ಈ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು. 275 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜಯದ ರನ್‌ ಗಳಿಸಿದರು.

ಆರಂಭಿಕ ಬ್ಯಾಟರ್ ಬೇತ್ ಮೂನಿ (ಔಟಾಗದೆ 125; 133 ಎ, 12 ಬೌಂಡರಿ), ತಹಲಿಯಾ ಮೆಗ್ರಾ (74; 77 ಎ, 9 ಬೌಂ) ಮತ್ತು ನಿಕೋಲಾ ಕ್ಯಾರಿ (ಔಟಾಗದೆ 39; 38 ಎ, 2 ಬೌಂ) ತಂಡದ ಗೆಲುವಿಗೆ ಕಾರಣರಾದರು.

ADVERTISEMENT

ಆರಂಭದಲ್ಲಿ ವಿಕೆಟ್‌ಗಳು ಉರುಳಿದ್ದರಿಂದ 16ನೇ ಓವರ್‌ನಲ್ಲಿ ಆಸ್ಟ್ರೇಲಿಯಾ 52ಕ್ಕೆ4 ಎಂಬ ಸ್ಥಿತಿಯಲ್ಲಿತ್ತು. ಆದರೆ ಬೇತ್‌ ಮೂನಿ ಮತ್ತು ತಹಲಿಯಾ ಮೆಗ್ರಾ ಅವರ 126 ರನ್‌ಗಳ ಜೊತೆಯಾಟ ಪಂದ್ಯದ ಗತಿಯನ್ನು ಬದಲಿಸಿತು. ಆರನೇ ವಿಕೆಟ್‌ಗೆ ಮೂನಿ ಮತ್ತು ನಿಕೋಲಾ 97 ರನ್‌ಗಳನ್ನು ಸೇರಿಸಿ ಜಯವನ್ನು ಕಸಿದುಕೊಂಡರು. ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾದ ಗೆಲುವಿಗೆ 13 ರನ್‌ ಬೇಕಾಗಿತ್ತು. ಜೂಲನ್ ಗೋಸ್ವಾಮಿ ಎರಡು ನೋಬಾಲ್ ಹಾಕುವುದರೊಂದಿಗೆ ಗೆಲುವಿನ ‘ಕಾಣಿಕೆ’ ನೀಡಿದರು.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತ ಶುಕ್ರವಾರ ಚೇತರಿಸಿಕೊಂಡಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (86; 94 ಎಸೆತ, 11 ಬೌಂಡರಿ) ಮತ್ತು ರಿಚಾ ಘೋಷ್ ಅವರ ಅಮೋಘ ಆಟದ ನೆರವಿನಿಂದ ತಂಡ ಏಳು ವಿಕೆಟ್‌ಗಳಿಗೆ 274 ರನ್ ಕಲೆ ಹಾಕಿತು. ಇದು, 2018ರ ನಂತರ ಆಸ್ಟ್ರೇಲಿಯಾ ಎದುರು ಭಾರತದ ಗರಿಷ್ಠ ಮೊತ್ತವಾಗಿದೆ.

ಮೊದಲ ವಿಕೆಟ್‌ಗೆ ಸ್ಮೃತಿ ಮತ್ತು ಶಫಾಲಿ ವರ್ಮಾ 74 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ವಿಕೆಟ್ ಕೀಪರ್ ರಿಚಾ ಘೋಷ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 76 ರನ್‌ ಕಲೆ ಹಾಕಿದ ಅವರು 19ನೇ ಅರ್ಧಶತಕವನ್ನೂ ಪೂರೈಸಿದರು. ಮೊದಲ 60 ಎಸೆತಗಳಲ್ಲಿ ಸ್ಮೃತಿ ಮತ್ತು ಶಫಾಲಿ 68 ರನ್‌ ಗಳಿಸಿದರು. ಇದು, ಈ ವರ್ಷ ತಂಡ ಆಡಿದ 10 ಪಂದ್ಯಗಳ ಪೈಕಿ ಮೊದಲ 10 ಓವರ್‌ಗಳಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ. 12ನೇ ಓವರ್‌ನಲ್ಲಿ ಸೋಫಿ ಮೋಲಿನೆಕ್ಸ್‌ ಈ ಜೊತೆಯಾಟವನ್ನು ಮುರಿದರು.

ಕಳೆದ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದ ನಾಯಕಿ ಮಿಥಾಲಿ ರಾಜ್ ರನೌಟ್ ಆಗಿ ಮರಳಿದರು. ಇದರ ಬೆನ್ನಲ್ಲೇ ಯಾಸ್ತೀಕಾ ಭಾಟಿಯಾ ಕೂಡ ಮರಳಿದರು. ಈ ಹಂತದಲ್ಲಿ ಜೊತೆಗೂಡಿದ ಸ್ಮೃತಿ ಮತ್ತು ರಿಚಾ ಅವರು ಎದುರಾಳಿ ತಂಡದ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತರು. ಸ್ಮೃತಿ ಔಟಾದ ನಂತರ ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್ ಮತ್ತು ಜೂಲನ್ ಗೋಸ್ವಾಮಿ ಮಿಂಚಿದರು. ಹೀಗಾಗಿ ತಂಡದ ಮೊತ್ತ 250ರ ಗಡಿ ದಾಟಿತು.

ಭಾರತ: 50 ಓವರ್‌ಗಳಲ್ಲಿ 7ಕ್ಕೆ 274 (ಸ್ಮೃತಿ ಮಂದಾನ 86, ಶಫಾಲಿ ವರ್ಮಾ 22, ರಿಚಾ ಘೋಷ್‌ 44, ದೀಪ್ತಿ ಶರ್ಮಾ 23, ಪೂಜಾ ವಸ್ತ್ರಕಾರ್ 29, ಜೂಲನ್ ಗೋಸ್ವಾಮಿ ಔಟಾಗದೆ 28; ತಹಲಿಯಾ ಮೆಗ್ರಾ 45ಕ್ಕೆ3, ಸೋಫಿ ಮೋಲಿನೆಕ್ಸ್‌ 28ಕ್ಕೆ2, ಡಾರ್ಸಿ ಬ್ರೌನ್ 63ಕ್ಕೆ1); ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 5ಕ್ಕೆ 275 (ಬೇತ್ ಮೂನಿ ಔಟಾಗದೆ 125, ತಹಲಿಯಾ ಮೆಗ್ರಾ 74, ನಿಕೋಲ ಕ್ಯಾರಿ ಔಟಾಗದೆ 39; ಜೂಲನ್ ಗೋಸ್ವಾಮಿ 40ಕ್ಕೆ1, ಮೇಘನಾ ಸಿಂಗ್‌ 38ಕ್ಕೆ1, ಪೂಜಾ ವಸ್ತ್ರಕಾರ್ 43ಕ್ಕೆ1, ದೀಪ್ತಿ ಶರ್ಮಾ 60ಕ್ಕೆ1). ಫಲಿತಾಂಶ: ಆಸ್ಟ್ರೇಲಿಯಾಗೆ 5 ವಿಕೆಟ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.