ADVERTISEMENT

ಡಬ್ಲ್ಯುಪಿಎಲ್‌ ಕ್ರಿಕೆಟ್‌ ಟೂರ್ನಿ| ಫೈನಲ್‌ಗೆ ಮುಂಬೈ ಇಂಡಿಯನ್ಸ್

ಡಬ್ಲ್ಯುಪಿಎಲ್‌ ಕ್ರಿಕೆಟ್‌ ಟೂರ್ನಿ: ವಾಂಗ್‌ ಹ್ಯಾಟ್ರಿಕ್‌; ನಥಾಲಿ ಅಬ್ಬರದ ಬ್ಯಾಟಿಂಗ್‌

ಪಿಟಿಐ
Published 24 ಮಾರ್ಚ್ 2023, 19:45 IST
Last Updated 24 ಮಾರ್ಚ್ 2023, 19:45 IST
ವಿಕೆಟ್‌ ಗಳಿಸಿದ ಇಸಾಬೆಲ್ ವಾಂಗ್ ಸಂಭ್ರಮ– ಎಎಫ್‌ಪಿ ಚಿತ್ರ
ವಿಕೆಟ್‌ ಗಳಿಸಿದ ಇಸಾಬೆಲ್ ವಾಂಗ್ ಸಂಭ್ರಮ– ಎಎಫ್‌ಪಿ ಚಿತ್ರ   

ನವಿ ಮುಂಬೈ : ಇಸಾಬೆಲ್‌ ವಾಂಗ್ (15ಕ್ಕೆ 4) ಅವರು ಗಳಿಸಿದ ಹ್ಯಾಟ್ರಿಕ್‌ ಹಾಗೂ ನಥಾಲಿ ಸಿವೆರ್‌ ಬ್ರಂಟ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡದವರು ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ಸುತ್ತು ತಲುಪಿದರು.

ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ 72 ರನ್‌ಗಳಿಂದ ಯುಪಿ ವಾರಿಯರ್ಸ್‌ ತಂಡವನ್ನು ಪರಾಭವಗೊಳಿಸಿತು. ಮುಂಬೈ ತಂಡ ಭಾನುವಾರ ನಡೆಯುವ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಅನ್ನು ಎದುರಿ ಸಲಿದೆ.

ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ಬಳಗ, ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 182 ರನ್‌ ಪೇರಿಸಿತು. ಗುರಿ ಬೆನ್ನತ್ತಿದ ವಾರಿಯರ್ಸ್ 17.4 ಓವರ್‌ಗಳಲ್ಲಿ 110 ರನ್‌ ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು.

ADVERTISEMENT

ಸವಾಲಿನ ಗುರಿ ಪಡೆದ ಯುಪಿ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಇನಿಂಗ್ಸ್‌ನ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಅಲಿಸಾ ಹೀಲಿ (11) ಅವರನ್ನು ಔಟ್‌ ಮಾಡುವ ಮೂಲಕ ವಾಂಗ್‌ ತಮ್ಮ ವಿಕೆಟ್‌ ಬೇಟೆ ಆರಂಭಿಸಿದರು. 13ನೇ ಓವರ್‌ನ 2ನೇ ಎಸೆತದಲ್ಲಿ ಕಿರಣ್‌ ನವಗಿರೆ (43 ರನ್‌), 3ನೇ ಎಸೆತದಲ್ಲಿ ಸಿಮ್ರಾನ್ ಶೇಖ್ ಮತ್ತು 4ನೇ ಎಸೆತದಲ್ಲಿ ಸೋಫಿ ಎಕ್ಸೆಲ್‌ಸ್ಟನ್‌ ಅವರ ವಿಕೆಟ್‌ ಗಳಿಸಿದ ವಾಂಗ್‌ ಟೂರ್ನಿಯ ಮೊದಲ ಹ್ಯಾಟ್ರಿಕ್ ಗಳಿಸಿದ ಗೌರವಕ್ಕೆ ಭಾಜನರಾದರು.

27 ಎಸೆತ ಎದುರಿಸಿದ ಕಿರಣ್‌ 4ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಅವರಿಗೆ ಉಳಿದವರಿಂದ ಬೆಂಬಲ ದೊರೆಯಲಿಲ್ಲ.

ವಾಂಗ್‌ ಅವರಿಗೆ ಸೈಕಾ ಇಶಾಕ್‌ (24ಕ್ಕೆ 2) ಉತ್ತಮ ಸಾಥ್ ನೀಡಿದರು.

ಸವಾಲಿನ ಮೊತ್ತ: ಟಾಸ್‌ ಗೆದ್ದ ವಾರಿಯರ್ಸ್‌ ತಂಡದ ನಾಯಕಿ ಅಲಿಸಾ ಹೀಲಿ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಯಷ್ಟಿಕಾ ಭಾಟಿಯಾ (21) ಮತ್ತು ಹೆಯಿಲಿ ಮ್ಯಾಥ್ಯೂಸ್‌ (26) ಮೊದಲ ವಿಕೆಟ್‌ಗೆ 31 ರನ್‌ ಸೇರಿಸಿದರು.

ನಥಾಲಿ (38 ಎಸೆತಗಳಲ್ಲಿ ಅಜೇಯ 72 ರನ್‌) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಮೂರನೇ ವಿಕೆಟ್‌ಗೆ 35 ರನ್‌ ಸೇರಿಸಿದರು. ಕೌರ್‌ (14 ರನ್‌, 15 ಎ.) ಅದೇ ಓವರ್‌ನಲ್ಲಿ ಸೋಫಿ ಎಕ್ಸೆಲ್‌ಸ್ಟನ್‌ ಅವರಿಗೆ ವಿಕೆಟ್‌ ಒಪ್ಪಿಸಿದರು.

ನತಾಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು.

ಕೊನೆಯಲ್ಲಿ ಅಮೇಲಿ ಕೆರ್‌ (29 ರನ್‌, 19 ಎ) ಕೂಡಾ ಅಬ್ಬರಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 182 (ಯಷ್ಟಿಕಾ ಭಾಟಿಯಾ 21, ಹೆಯಿಲಿ ಮ್ಯಾಥ್ಯೂಸ್‌ 26, ನಥಾಲಿ ಸಿವೆರ್ ಬ್ರಂಟ್‌ ಔಟಾಗದೆ 72, ಹರ್ಮನ್‌ಪ್ರೀತ್‌ ಕೌರ್‌ 14, ಅಮೇಲಿ ಕೆರ್‌ 29, ಸೋಫಿ ಎಕ್ಸೆಲ್‌ಸ್ಟನ್‌ 39ಕ್ಕೆ 2, ಅಂಜಲಿ ಸರ್ವಾಣಿ 17ಕ್ಕೆ 1). ಯುಪಿ ವಾರಿಯರ್ಸ್‌: 17.4 ಓವರ್‌ಗಳಲ್ಲಿ 110 (ಕಿರಣ್ ನವಗಿರೆ 43, ದೀಪ್ತಿ ಶರ್ಮಾ 16; ನತಾಲಿ ಸಿವೆರ್ ಬ್ರಂಟ್‌ 21ಕ್ಕೆ 1, ಸೈಕಾ ಇಶಾಕ್‌ 24ಕ್ಕೆ 2, ಇಸಾಬೆಲ್‌ ವಾಂಗ್‌ 15ಕ್ಕೆ 4). ಫಲಿತಾಂಶ: ಮುಂಬೈಗೆ 72 ರನ್‌ಗಳ ಜಯ ಫೈನಲ್ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.