ADVERTISEMENT

ವೀಕ್ಷಕ ವಿವರಣೆಯಿಂದ ಮೈಕೆಲ್ ಹೋಲ್ಡಿಂಗ್ ನಿವೃತ್ತಿ

ಪಿಟಿಐ
Published 16 ಸೆಪ್ಟೆಂಬರ್ 2021, 10:51 IST
Last Updated 16 ಸೆಪ್ಟೆಂಬರ್ 2021, 10:51 IST
ಮೈಕೆಲ್ ಹೋಲ್ಡಿಂಗ್
ಮೈಕೆಲ್ ಹೋಲ್ಡಿಂಗ್   

ನವದೆಹಲಿ: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್ ವೀಕ್ಷಕ ವಿವರಣೆಗೆ ವಿದಾಯ ಘೋಷಿಸಿದ್ದಾರೆ.

66 ವರ್ಷದ ಹೋಲ್ಡಿಂಗ್ ಸ್ಕೈ ಸ್ಪೋರ್ಟ್ಸ್‌ನ ಕಾಮೆಂಟ್ರಿ ಪ್ಯಾನಲ್‌ನಲ್ಲಿ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಇದ್ದರು.

ಇತ್ತೀಚೆಗೆ ಇಂಗ್ಲೆಂಡ್‌ ಮತ್ತು ಭಾರತ ತಂಡಗಳ ನಡುವಣ ಟೆಸ್ಟ್ ಸರಣಿಯಲ್ಲಿಯೂ ಅವರು ವೀಕ್ಷಕ ವಿವರಣೆ ನೀಡಿದ್ದರು.

ADVERTISEMENT

ವಿಶ್ವದ ಎಲ್ಲ ತಂಡಗಳ ದಿಗ್ಗಜ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಮೂಡಿಸಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಕಾಮೆಂಟ್ರಿಯಲ್ಲಿಯೂ ಬಹಳಷ್ಟು ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ನೇರ, ನಿಷ್ಠುರ ಹೇಳಿಕೆಗಳಿಂದ ಚರ್ಚೆಗಳನ್ನೂ ಹುಟ್ಟುಹಾಕಿದ್ದಾರೆ. ಅದರಲ್ಲೂ ಕ್ರೀಡೆಯಲ್ಲಿ ಜನಾಂಗೀಯ ನಿಂದನೆಗಳ ವಿರುದ್ಧ ಸದಾ ದನಿ ಎತ್ತಿದ್ದಾರೆ. ಇತ್ತೀಚೆಗೆ ಬ್ಲ್ಯಾಕ್ ಲೈವ್ಸ್‌ ಮ್ಯಾಟರ್‌ ಪ್ರತಿಭಟನೆಗಳ ಸಂದರ್ಭದಲ್ಲಿ ಅವರ ಭಾಷಣಗಳು ಗಮನಸೆಳೆದಿದ್ದವು.

‘ಈಗ ಮೊದಲಿನಂತೆ ಹೆಚ್ಚೆಚ್ಚು ಪ್ರಯಾಣ ಮಾಡುವುದು ಸಾಧ್ಯವಾಗುತ್ತಿಲ್ಲ. ನನಗೀಗ 66 ವರ್ಷ. 36, 46 ಅಥವಾ 56 ಅಲ್ಲ. 2020ರ ನಂತರ ಕಾಮೆಂಟ್ರಿ ಮಾಡುವುದು ನನ್ನಿಂದ ಸಾಧ್ಯವಾಗಲಿಕ್ಕಿಲ್ಲ’ ಎಂದು ಹೋದ ವರ್ಷವೇ ಹೋಲ್ಡಿಂಗ್ ಹೇಳಿದ್ದರು.

1991ರಲ್ಲಿ ಕ್ರಿಕೆಟ್ ಕಾಮೆಂಟ್ರಿ ಮಾಡಲು ಆರಂಭಿಸಿದ್ದರು.

‘ಸ್ಕೈ ಸ್ಪೋರ್ಟ್ಸ್‌ನವರಿಗೆ ಮೊದಲೇ ಹೇಳಿದ್ದೆ. 2020ರಲ್ಲಿ ನಿಗದಿತ ಟೂರ್ನಿಗಳು ನಡೆಯದಿದ್ದರೆ, ನನ್ನ ಪಾಲಿನ ಕೋಟಾವನ್ನು ಮುಂದಿನ ವರ್ಷದಲ್ಲಿ ಮಾಡುವ ಬಗ್ಗೆ ಯೋಚಿಸುತ್ತೇನೆ ಎಂದಿದ್ದೆ. ನನಗೆ ಬಹಳಷ್ಟು ಉಪಕಾರ ಮತ್ತು ಬೆಂಬಲ ನೀಡಿರುವ ಈ ಸಂಸ್ಥೆಯಿಂದ ಹಾಗೆಯೇ ಹೊರನಡೆಯಲು ಸಾಧ್ಯವಿಲ್ಲ’ ಎಂದರು.

1987ರಲ್ಲಿ ಹೋಲ್ಡಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಅವರು 60 ಟೆಸ್ಟ್ ಮತ್ತು 102 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಒಟ್ಟು 391 ಅಂತರರಾಷ್ಟ್ರೀಯ ವಿಕೆಟ್‌ಗಳು ಅವರ ಖಾತೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.