ADVERTISEMENT

ಶಿವಮೊಗ್ಗ: ಗ್ರಾಮೀಣ ಪರಿಸರದಲ್ಲಿ ಅರಳಿದ ಕ್ರಿಕೆಟ್ ಪ್ರತಿಭೆ ಮಿಥೇಶ್

19 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮಿಥೇಶ್

ಎಂ.ರಾಘವೇಂದ್ರ
Published 18 ಸೆಪ್ಟೆಂಬರ್ 2021, 3:46 IST
Last Updated 18 ಸೆಪ್ಟೆಂಬರ್ 2021, 3:46 IST
ಮಿಥೇಶ್
ಮಿಥೇಶ್   

ಸಾಗರ: ಅದೊಂದು ವರ್ಷದಲ್ಲಿ ಆರು ತಿಂಗಳು ಸತತವಾಗಿ ಮಳೆ ಸುರಿಯುವ ಸ್ಥಳ. ಆ ಊರಿನಲ್ಲಿ ಎಲ್ಲಿ ನೋಡಿದರೂ ಗುಡ್ಡ–ಬೆಟ್ಟಗಳೇ ಕಾಣುತ್ತವೆ. ಅಸಲಿಗೆ ಅದೊಂದು ಜಗತ್ಪ್ರಸಿದ್ದ ಊರು. ಇಂತಹ ಸ್ಥಳದಿಂದ ಅಪ್ಪಟ ಯುವ ಕ್ರಿಕೆಟ್ ಪ್ರತಿಭೆಯೊಂದು ಉನ್ನತ ಸಾಧನೆ ಮಾಡಿರುವ ಯಶೋಗಾಥೆ ಇಲ್ಲಿದೆ.

ಸಾಗರ ತಾಲ್ಲೂಕಿನ ಜೋಗ ಜಲಪಾತ ಎಲ್ಲರಿಗೂ ಗೊತ್ತಿರುವ ಪ್ರದೇಶ. ಇಲ್ಲಿನ ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ಸಿದ್ದರಾಜು ಹಾಗೂ ಶೋಭಾ ದಂಪತಿಯ ಪುತ್ರ ಮಿಥೇಶ್ 19 ವರ್ಷದೊಳಗಿನ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆಯುವ ಸಾಧನೆ ಮಾಡಿದ್ದಾನೆ.

ಕ್ರಿಕೆಟ್ ಎಂದರೆ ಅದೊಂದು ನಗರ ಕೇಂದ್ರಿತ ಆಟ ಎಂಬ ಮಾತು ಸಾಮಾನ್ಯ. ಆದರೆ, ಈ ಮಾತನ್ನು ಸುಳ್ಳು ಮಾಡುವಂತೆ ಹಲವು ಗ್ರಾಮೀಣ ಪ್ರತಿಭೆಗಳು ಆಗಾಗ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಪ್ರತಿಭೆ, ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸುತ್ತಾರೆ. ಈ ಮಾತಿಗೆ ಇತ್ತೀಚಿನ ಉದಾಹರಣೆ ಮಿಥೇಶ್.

ADVERTISEMENT

ತನ್ನ 8ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಆರಂಭಿಸಿದ ಮಿಥೇಶ್‌ನ ಆಸಕ್ತಿಯನ್ನು ಕಂಡು ತಂದೆ ಸಿದ್ದರಾಜು ಅವರ ಮನೆ ಬಳಿಯೇ ಒಂದು ಅಂಕಣವನ್ನು ಸಿದ್ಧಪಡಿಸಿದರು. ಜೋಗದಂತಹ ಊರಿಗೆ ಲೆದರ್ ಬಾಲ್ ಕ್ರಿಕೆಟ್ ಎಂಬುದೇ ಅಪರಿಚಿತವಾದ ಸಂಗತಿ. ಇಂತಹ ಸನ್ನಿವೇಶದಲ್ಲಿ ಜೋಗದಲ್ಲೇ ಒಂದು ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸಿದ್ದರಾಜು ತಮ್ಮ ಮಗನ ಪ್ರತಿಭೆಗೆ ಸಾಣೆ ಹಿಡಿಯಲು ಮುಂದಾದರು.

ಈ ಸಂದರ್ಭದಲ್ಲಿ ಮಿಥೇಶ್‌ನ ಪ್ರತಿಭೆಯನ್ನು ಗುರುತಿಸಿದವರು ಸಾಗರದ ಸಾಗರ್ ಸ್ಫೋರ್ಟ್ಸ್ ಕ್ರಿಕೆಟ್ ಅಕಾಡೆಮಿಯ (ಎಸ್‌ಎಸ್ಎ) ಕ್ರಿಕೆಟ್ ತರಬೇತುದಾರರಾದ ಐ.ಎನ್.ಸುರೇಶ್ ಬಾಬು ಹಾಗೂ ರವಿ ನಾಯ್ಡು. ಅವರು ಆಗಷ್ಟೇ ಸಾಗರದ ಗೋಪಾಲಗೌಡ ಕ್ರೀಡಾಂಗಣದಲ್ಲಿ ಎಸ್ಎಸ್ಎ ಯುವ ಕ್ರಿಕೆಟಿಗರಿಗೆ ತರಬೇತಿ ನೀಡಲು ಮುಂದಾಗಿದ್ದರು.

ಪ್ರತಿದಿನ 30 ಕಿ.ಮೀ. ದೂರ ಬಸ್‌ನಲ್ಲಿ ಸಾಗರಕ್ಕೆ ಬಂದು ಕ್ರಿಕೆಟ್ ಅಭ್ಯಾಸದಲ್ಲಿ ಪಾಲ್ಗೊಂಡು ಮರಳಿ ಬಸ್‌ನಲ್ಲೇ ಜೋಗಕ್ಕೆ ತೆರಳುವುದು ಮಿಥೇಶ್‌ಗೆ ಸವಾಲಾಗಿತ್ತು. ಆದರೆ, ಕ್ರಿಕೆಟ್‌ ಬಗ್ಗೆ ಇರುವ ಅದಮ್ಯ ಪ್ರೀತಿ, ಪೋಷಕರ, ತರಬೇತುದಾರರ ಪ್ರೋತ್ಸಾಹ ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮಿಥೇಶ್‌ಗೆ ಆಸರೆಯಾಗಿತ್ತು.

14 ವರ್ಷದೊಳಗಿನ ಶಿವಮೊಗ್ಗ ವಲಯ ಕ್ರಿಕೆಟ್‌ಗೆ ಎಸ್ಎಸ್ಎ ಮೂಲಕ ಪದಾರ್ಪಣೆ ಮಾಡಿದ ಮಿಥೇಶ್ ನಂತರ 16 ವರ್ಷದೊಳಗಿನ ವಲಯ ಕ್ರಿಕೆಟ್‌ನಲ್ಲೂ ಬಲಗೈ ವೇಗದ ಬೌಲರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಗಮನ ಸೆಳೆಯುವ ಸಾಧನೆ ಮಾಡಿದರು.

ಕಳೆದ ವರ್ಷ 19 ವರ್ಷದೊಳಗಿನ ಶಿವಮೊಗ್ಗ ವಲಯ ಕ್ರಿಕೆಟ್‌ಗೆ ಆಯ್ಕೆಯಾಗಿದ್ದ ಮಿಥೇಶ್‌ಗೆ ರಾಜ್ಯ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ. ಅದೇ ವರ್ಷ ಶಿವಮೊಗ್ಗ ವಲಯದ ಎರಡನೇ ಡಿವಿಜನ್ ಲೀಗ್ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದ ಮಿಥೇಶ್ ಶತಕವೊಂದನ್ನು ದಾಖಲಿಸಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು.

ಪ್ರಸಕ್ತ ವರ್ಷ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 19 ವರ್ಷದೊಳಗಿನ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮಿಥೇಶ್ ರಾಜ್ಯ ತಂಡವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. ಇಂದೋರ್‌ನಲ್ಲಿ ನಡೆಯಲಿರುವ ವಿನೂ ಮಂಕಡ್ ಟ್ರೋಫಿಯಲ್ಲಿ ಶಿವಮೊಗ್ಗ ವಲಯವನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಮಿಥೇಶ್ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.