ADVERTISEMENT

ಟೆಸ್ಟ್ ಕ್ರಿಕೆಟ್ | ನಂ.1 ತಂಡದ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಕಿವೀಸ್

ಶತಕದ ಜೊತೆಯಾಟವಾಡಿದ ಆತಿಥೇಯ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು

ಏಜೆನ್ಸೀಸ್
Published 2 ಮಾರ್ಚ್ 2020, 17:08 IST
Last Updated 2 ಮಾರ್ಚ್ 2020, 17:08 IST
   
""

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ತಂಡ, ಮೂರೇ ದಿನಗಳಲ್ಲಿ ಭಾರತ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಎರಡು ಟೆಸ್ಟ್‌ಗಳ ಸರಣಿಯನ್ನು ಸೋಮವಾರ ‘ಕ್ಲೀನ್‌ ಸ್ವೀಪ್‌’ ಮಾಡಿತು. ಅಗ್ರಮಾನ್ಯ ತಂಡವೆಂಬ ಹೆಗ್ಗಳಿಕೆಯೊಡನೆ ಕಿವೀಸ್‌ ಪ್ರವಾಸಕ್ಕೆ ತೆರಳಿದ್ದ ವಿರಾಟ್‌ ಕೊಹ್ಲಿ ಪಡೆ ಹತಾಶೆ ಮತ್ತು ನಿರಾಶೆಯೊಡನೆ ವಾಪಸಾಗಬೇಕಾಯಿತು.

ಮೊದಲ ಟೆಸ್ಟ್‌ ಪಂದ್ಯವನ್ನು ಕೇನ್‌ ವಿಲಿಯಮ್ಸನ್‌ ಪಡೆ 10 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಈ ಗೆಲುವಿನಿಂದ ನ್ಯೂಜಿಲೆಂಡ್‌ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿತು.

ಭಾರತ ತಂಡದ (ಭಾನುವಾರ 6 ವಿಕೆಟ್‌ಗೆ 90) ಉಳಿದ ನಾಲ್ಕು ವಿಕೆಟ್‌ ಗಳನ್ನು ಆತಿಥೇಯರು 47 ನಿಮಿಷಗಳ ಒಳಗೆ ಪಡೆದರು. ನಂತರ, ಬ್ಯಾಟ್ಸಮನ್ನ ರಿಗೆ ತಳಮಳ ಮೂಡಿಸಿದ್ದ ಪಿಚ್‌ನಲ್ಲಿ 132 ರನ್ ಗುರಿಯನ್ನು ಅಂದುಕೊಂಡಿ ದ್ದಕ್ಕಿಂತ ಸುಲಭವಾಗಿ ತಲುಪಿದರು. ಆರಂಭ ಆಟಗಾರರಿಬ್ಬರು ಶತಕದ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ADVERTISEMENT

ನ್ಯೂಜಿಲೆಂಡ್‌ ಈಗ ತವರಿನಲ್ಲಿ 13 ಪಂದ್ಯಗಳಿಂದ ಅಜೇಯವಾಗಿದೆ. ಇವುಗಳಲ್ಲಿ 9 ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಂಡಿದೆ.ಭಾರತ ಈ ಪ್ರವಾಸದಲ್ಲಿ ಕ್ರಮವಾಗಿ 165, 191, 242 ಮತ್ತು 124 ರನ್‌ ಮಾತ್ರ ಮಾಡಿದೆ. ಅಗ್ರಮಾನ್ಯ ಟೆಸ್ಟ್‌ ಆಟಗಾರ ಎನಿಸಿದ್ದ ಕೊಹ್ಲಿ ಸ್ವತಃ ವಿಫಲರಾದರು. ಅವರ ಗಳಿಕೆ–ನಾಲ್ಕು ಇನಿಂಗ್ಸ್‌ಗಳಿಂದ 38 ರನ್‌ಗಳಷ್ಟೇ. ಸರಣಿಯ ಮಧ್ಯೆ ಅವರು ಟೆಸ್ಟ್‌ ಬ್ಯಾಟ್ಸ್‌ಮನ್‌ ಅಗ್ರಪಟ್ಟವನ್ನು ಸ್ಟೀವ್ ಸ್ಮಿತ್‌ ಅವರಿಗೆ ಬಿಟ್ಟುಕೊಡಬೇಕಾಯಿತು.

ಟಿಮ್‌ ಸೌಥಿ ಮತ್ತು ಟ್ರೆಂಟ್‌ ಬೌಲ್ಟ್‌ ಇನ್‌ಸ್ವಿಂಗ್ ಮತ್ತು ಔಟ್‌ ಸ್ವಿಂಗ್‌ ಮೂಲಕ ಎದುರಾಳಿ ಆಟಗಾರರನ್ನು ಕಂಗೆಡಿಸಿದರು. ಮೊತ್ತ 97 ಆಗಿದ್ದಾಗ ಹನುಮ ವಿಹಾರಿ ಮೊದಲಿಗರಾಗಿ ನಿರ್ಗಮಿಸಿದರು. ಲೆಗ್‌ಸೈಡ್‌ನತ್ತ ಹೋಗುತ್ತಿದ್ದ ಚೆಂಡನ್ನು ಆಡಲು ಹೋದಾಗ, ವಿಕೆಟ್‌ ಕೀಪರ್‌ ವಾಟ್ಲಿಂಗ್ ತಮ್ಮ ಎಡಕ್ಕೆ ಜಿಗಿದು ಕ್ಯಾಚ್‌ ಹಿಡಿದರು. ಐದು ಎಸೆತಗಳ ನಂತರ ಇದೇ ಮೊತ್ತಕ್ಕೆ ರಿಷಭ್‌ ಪಂತ್‌ ಕೂಡ ವಾಪಸಾದರು.

ಶಮಿ, ಡೀಪ್‌ಮಿಡ್‌ವಿಕೆಟ್‌ನಲ್ಲಿ ಟಾಮ್‌ ಬ್ಲಂಡೆಲ್‌ಗೆ ಕ್ಯಾಚ್‌ ನೀಡಿದರು. ರವೀಂದ್ರ ಜಡೇಜ (ಔಟಾಗದೇ 16) ಅವರಿಗೆ ಸ್ಟ್ರೈಕ್‌ ನೀಡುವ ಭರದಲ್ಲಿ ಬೂಮ್ರಾ ರನ್‌ಔಟ್‌ ಆದರು.

ಭಾರತ ಸರಣಿಯಲ್ಲಿ ಕಳೆದುಕೊಂಡ 40 ವಿಕೆಟ್‌ಗಳಲ್ಲಿ 25 ಅನ್ನು ಸೌಥಿ– ಬೌಲ್ಟ್‌ ಜೋಡಿ ಹಂಚಿಕೊಂಡಿತು.

ಸೀಮ್‌ ಬೌಲರ್‌ಗಳ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಬೂಮ್ರಾ ಮತ್ತು ಉಮೇಶ್‌ ಯಾದವ್‌ ಎದುರಾಳಿ ಬ್ಯಾಟ್ಸಮನ್ನರನ್ನು ಅಷ್ಟಾಗಿ ಕಾಡಲಿಲ್ಲ.ಮೂರನೇ ದಿನ ಇನ್ನೊಬ್ಬ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಭುಜದ ನೋವು ಕಾಡಿತು. ಹೀಗಾಗಿ ಬೌಲಿಂಗ್‌ ವಿಭಾಗ ಮೊನಚು ಕಳೆದುಕೊಂಡಿತು.

ಲಥಾಮ್‌ (52) ಮತ್ತು ಬ್ಲಂಡೆಲ್‌ (55) ಮೊದಲ ವಿಕೆಟ್‌ಗೆ 103 ರನ್‌ ಸೇರಿಸಿದರು. ಮೂರು ವಿಕೆಟ್‌ಗಳು ಅಲ್ಪ ಅಂತರದಲ್ಲಿ ಉರುಳಿದರೂ, ಗುರಿ ಕೈಎಟಕಿನಲ್ಲೇ ಇದ್ದ ಕಾರಣ ಆತಿಥೇಯರಿಗೆ ಒತ್ತಡವಿರಲಿಲ್ಲ. ಲಥಾಮ್‌ ಮೊದಲ ಇನಿಂಗ್ಸ್‌ನಲ್ಲೂ ಅರ್ಧ ಶತಕ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.