ADVERTISEMENT

‘ವಿನೂ ಮಂಕಡ್‌’ಗೆ ಹುಬ್ಬಳ್ಳಿಯ ರಾಜೇಂದ್ರ

ಕ್ರಿಕೆಟ್‌: ಧಾರವಾಡ ವಲಯದಿಂದ ಆಯ್ಕೆಯಾದ ಏಕೈಕ ಆಟಗಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 16:39 IST
Last Updated 18 ಸೆಪ್ಟೆಂಬರ್ 2021, 16:39 IST
ರಾಜೇಂದ್ರ ಡಂಗನವರ
ರಾಜೇಂದ್ರ ಡಂಗನವರ   

ಹುಬ್ಬಳ್ಳಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ 19 ವರ್ಷದ ಒಳಗಿನವರ ವಿನೂ ಮಂಕಡ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಗೆ ಹುಬ್ಬಳ್ಳಿಯ ರಾಜೇಂದ್ರ ಡಂಗನವರ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಧಾರವಾಡ ವಲಯದಿಂದ ಈ ಬಾರಿ ಆಯ್ಕೆಯಾದ ಏಕೈಕ ಆಟಗಾರ.

ವಿನೂ ಮಂಕಡ್‌ ಟೂರ್ನಿ ಸೆ. 28ರಿಂದ ಅ. 4ರ ತನಕ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿದೆ. ಕರ್ನಾಟಕ ತಂಡ ಪುದುಚೇರಿ, ಸೌರಾಷ್ಟ್ರ, ಜಮ್ಮು ಕಾಶ್ಮೀರ, ವಿದರ್ಭ ಮತ್ತು ಜಾರ್ಖಂಡ್‌ ತಂಡಗಳ ಎದುರು ಪಂದ್ಯವಾಡಲಿದೆ.

ಎಡಗೈ ಬ್ಯಾಟ್ಸ್‌ಮನ್‌ ಮತ್ತು ಎಡಗೈ ಸ್ಪಿನ್ನರ್‌ ಆಗಿರುವ ರಾಜೇಂದ್ರ ಪ್ರಥಮ ಡಿವಿಷನ್‌ ಟೂರ್ನಿಗಳಲ್ಲಿ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ (ಸಿಸಿಕೆ) ‘ಎ’ ತಂಡವನ್ನು ಪ್ರತಿನಿಧಿಸುತ್ತಿದ್ದರು. ಇಲ್ಲಿನ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿಯಲ್ಲಿ (ಟಿಎಸ್‌ಸಿಎ) ನಿತ್ಯ ಅಭ್ಯಾಸ ನಡೆಸುತ್ತಿದ್ದಾರೆ. ರಾಜೇಂದ್ರ, ಇಲ್ಲಿನ ಶಶಿಶೇಖರ ಡಂಗನವರ ಹಾಗೂ ಗೌರಿ ದಂಪತಿಯ ಪುತ್ರ.

ADVERTISEMENT

ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬೆಂಗಳೂರಿನಲ್ಲಿ ಫ್ರೆಂಡ್ಸ್‌ ಯೂನಿಯನ್‌ ಕ್ಲಬ್‌ ಪ್ರತಿನಿಧಿಸುತ್ತಾರೆ.

ರಾಜೇಂದ್ರ 14 ಮತ್ತು 16 ವರ್ಷದ ಒಳಗಿನವರ ಟೂರ್ನಿಯಲ್ಲಿ ಧಾರವಾಡ ವಲಯ ಪ್ರತಿನಿಧಿಸಿದ್ದರು. ಈ ವಲಯ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಗದಗ ಮತ್ತು ಹಾವೇರಿ ಜಿಲ್ಲೆಗಳನ್ನು ಒಳಗೊಂಡಿದೆ. 2019ರಲ್ಲಿ 16 ವರ್ಷದ ಒಳಗಿನವರ ರಾಜ್ಯ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಹೋದ ವರ್ಷ 19 ವರ್ಷದೊಳಗಿನವರ ರಾಜ್ಯ ತಂಡದಲ್ಲಿ ಎರಡು ಪಂದ್ಯಗಳಲ್ಲಷ್ಟೇ ಅವಕಾಶ ಸಿಕ್ಕಿತ್ತು.

ಆಯ್ಕೆ ಪ್ರೇರಣೆ: ಬಿಸಿಸಿಐ ಮಹತ್ವದ ಟೂರ್ನಿಗೆ ನಮ್ಮ ವಲಯದ ಆಟಗಾರ ಆಯ್ಕೆಯಾಗಿರುವುದು ಇತರ ಆಟಗಾರರಿಗೂ ಪ್ರೇರಣೆಯಾಗಿದೆ ಎಂದು ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್‌ ಸಂತೋಷ ವ್ಯಕ್ತಪಡಿಸಿದರು.

ಮುಂದಿನ ವರ್ಷ 19 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಏಕದಿನ ತಂಡದಲ್ಲಿ ರಾಜೇಂದ್ರಗೆ 20 ಆಟಗಾರರನ್ನು ಒಳಗೊಂಡ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಮಹತ್ವದ ಹೆಜ್ಜೆ. ಕಠಿಣ ಪರಿಶ್ರಮ ಪಟ್ಟು ಸಾಮರ್ಥ್ಯ ಸಾಬೀತು ಮಾಡಬೇಕು. ಈ ಅವಕಾಶ ಚೆನ್ನಾಗಿ ಬಳಸಿಕೊಳ್ಳಬೇಕಾದ ಸವಾಲಿದೆ ಎಂದರು.

‘ಶಿರಗುಪ್ಪಿ ಸರ್‌ ಕಾರಣ’

ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ನಾನು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಆದರೆ ಈಗಿನ ಸ್ಪರ್ಧೆಗೆ ಅಗತ್ಯವಾಗಿ ಬೇಕಾದ ಕೌಶಲಗಳನ್ನು ಹೇಳಿಕೊಟ್ಟಿದ್ದು ಟಿಎನ್‌ಸಿ ಅಕಾಡೆಮಿ ಕೋಚ್‌ ಸೋಮಶೇಖರ ಶಿರಗುಪ್ಪಿ ಸರ್‌. ಅವರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದಿಂದಾಗಿ ಅನೇಕ ವಿಷಯಗಳನ್ನು ಕಲಿತುಕೊಳ್ಳಲು ಸಾಧ್ಯವಾಯಿತು ಎಂದು ರಾಜೇಂದ್ರ ಸಂತೋಷ ಹಂಚಿಕೊಂಡರು.

ಮೊದಲ ಡಿವಿಷನ್‌ನಲ್ಲಿ ಆಡಲು ಸಿಸಿಕೆ ಕ್ಲಬ್‌ನ ವಸಂತ ಮುರ್ಡೇಶ್ವರ ಸರ್‌ ಅವಕಾಶ ಮಾಡಿಕೊಟ್ಟರು. ಅಭ್ಯಾಸಕ್ಕೆ ಕ್ರಿಕೆಟ್‌ ನೆಟ್ಸ್‌ನಲ್ಲಿ ಇದ್ದಾಗ ಸೋಮಶೇಖರ ಸರ್‌ ಅತ್ಯಂತ ಕರಾರುವಾಕ್ಕಾಗಿ ಹಾಗೂ ವೃತ್ತಿಪರತೆಯಿಂದ ಹೇಳಿಕೊಡುತ್ತಾರೆ. ಅಭ್ಯಾಸದ ಅವಧಿ ಮುಗಿದ ಬಳಿಕ ಸ್ನೇಹಿತರಂತೆ ಇರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಎತ್ತರಕ್ಕೆ ಏರುವ ಹೆಗ್ಗುರಿ ಹೊಂದಿದ್ದೇನೆ ಎಂದರು.

ಅಕಾಡೆಮಿ ಅರಂಭವಾಗಿ ಮೂರು ವರ್ಷಗಳಲ್ಲಿಯೇ ರಾಜೇಂದ್ರ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದು ಹೆಮ್ಮೆ. ರಾಜೇಂದ್ರನ ಕಠಿಣ ಪರಿಶ್ರಮ ಮತ್ತು ಬದ್ಧತೆಗೆ ಒಲಿದ ಸ್ಥಾನವಿದು
ಸೋಮಶೇಖರ ಶಿರಗುಪ್ಪಿ
ಟಿಎಸ್‌ಸಿಎ ಕೋಚ್‌

ರಾಜೇಂದ್ರ ಉತ್ತಮ ಆಲ್‌ರೌಂಡರ್‌. ಆತನಿಗೆ ಉತ್ತಮ ಭವಿಷ್ಯವಿದೆ. ಮೊದಲ ಡಿವಿಷನ್‌ನಲ್ಲಿ ನಮ್ಮ ಕ್ಲಬ್‌ ಪ್ರತಿನಿಧಿಸುತ್ತಾನೆ ಎನ್ನುವ ಹೆಮ್ಮೆಯಿದೆ.
ವಸಂತ ಮುರ್ಡೇಶ್ವರ
ಸಿಸಿಕೆ ತಂಡದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.