ADVERTISEMENT

ಟಿ–20 ವಿಶ್ವಕಪ್‌: ಬಾಂಗ್ಲಾ ದೇಶ ತಂಡಕ್ಕೆ ಉತ್ತಮ ಅವಕಾಶ -ಶಕಿಬ್‌ ಅಲ್‌ ಹಸನ್‌

ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ವಿಶ್ವಾಸ

ಏಜೆನ್ಸೀಸ್
Published 12 ಸೆಪ್ಟೆಂಬರ್ 2021, 6:45 IST
Last Updated 12 ಸೆಪ್ಟೆಂಬರ್ 2021, 6:45 IST
ಶಕೀಬ್‌ ಅಲ್‌ ಹಸನ್‌
ಶಕೀಬ್‌ ಅಲ್‌ ಹಸನ್‌   

ಢಾಕಾ (ಎಎಫ್‌ಪಿ): ಜಿಂಬಾಬ್ವೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳ ಮೇಲೆ ಇತ್ತೀಚೆಗೆ ಸಾಧಿಸಿದ ಸರಣಿ ಜಯಗಳಿಂದಾಗಿ ಮುಂದಿನ ತಿಂಗಳು ಆರಂಭವಾಗುವ ಟಿ–20 ವಿಶ್ವಕಪ್‌ಗೆ ಆತ್ಮವಿಶ್ವಾಸದೊಡನೆ ಕಣಕ್ಕಿಳಿಯಲು ಬಾಂಗ್ಲಾದೇಶ ತಂಡಕ್ಕೆ ಸಾಧ್ಯವಾಗಲಿದೆ ಎಂದು ಪ್ರಮುಖ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಹೇಳಿದ್ದಾರೆ.

ಜುಲೈನಲ್ಲಿ ನಡೆದ ಟಿ–20 ಸರಣಿಯಲ್ಲಿ ಬಾಂಗ್ಲಾದೇಶ 2–1 ರಿಂದ ಆತಿಥೇಯ ಜಿಂಬಾಬ್ವೆ ಮೇಲೆ ಜಯಗಳಿಸಿತ್ತು. ನಂತರ ತವರಿನಲ್ಲಿ ಪ್ರಬಲ ಆಸ್ಟ್ರೇಲಿಯಾವನ್ನು 4–1 ಅಂತರದಿಂದ ಬಗ್ಗುಬಡಿದಿತ್ತು. ಶುಕ್ರವಾರ ಢಾಕಾದಲ್ಲಿ ಮುಕ್ತಾಯಗೊಂಡ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲಿ 3–2 ಅಂತರದ ಜಯ ದಾಖಲಿಸಿತ್ತು.

‘ವಿಶ್ವಕಪ್‌ನಲ್ಲಿ ನಮಗೆ ಉತ್ತಮ ಅವಕಾಶವಿದೆ. ನಮಗೆ ಉತ್ತಮ ಸಿದ್ಧತೆ ದೊರಕಿದೆ. ಕೊನೆಯ ಮೂರು ಸರಣಿಗಳನ್ನು ನಾವು ಗೆದ್ದುಕೊಂಡಿರುವುದು ತಂಡದಲ್ಲಿ ವಿಶ್ವಾಸ ಮೂಡಿಸಲು ಕಾರಣವಾಗಿದೆ’ ಎಂದು ಶಕೀಬ್‌ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

‘ತಂಡವೊಂದು ಗೆಲ್ಲುತ್ತ ಹೋದಂತೆ, ಅದರ ಮನೋಭಾವದಲ್ಲೂ ಯಶಸ್ಸಿನ ಹಂಬಲ ಮೂಡಿಸುತ್ತದೆ. ಇದು ತಂಡದಲ್ಲಿ ವಿಶ್ವಾಸ ಹೆಚ್ಚಿಸುತ್ತದೆ’ ಎಂದಿದ್ದಾರೆ.

ಇತ್ತೀಚಿನ ಬಾಂಗ್ಲಾದೇಶದ ಪಂದ್ಯಗಳೆಲ್ಲಾ ಅಲ್ಪಸ್ಕೋರ್‌ನದ್ದಾಗಿದ್ದವು. ಪ್ರವಾಸಿಗರಂತೆ, ಬಾಂಗ್ಲಾದೇಶ ಆಟಗಾರರೂ ಪರದಾಡಿದ್ದರು. ಹೀಗಾಗಿ ಪಿಚ್‌ ವರ್ತನೆ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ‘9 ರಿಂದ 10 ಪಂದ್ಯ ಆಡಿದ್ದ ಎಲ್ಲರೂ ಕುದುರಿಕೊಳ್ಳಲು ಪರದಾಡಿದರು. ಯಾರೊಬ್ಬರೂ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ಆಗಲಿಲ್ಲ’ ಎಂದು ಶಕೀಬ್‌ ಹೇಳಿದರು.

‘ನಮ್ಮ ಬ್ಯಾಟ್ಸಮನ್ನರ ಸಾಮರ್ಥ್ಯವನ್ನು ಇಂಥ ಪಿಚ್‌ಗಳಿಂದ ಲೆಕ್ಕಹಾಕಬಾರದು. ಎಲ್ಲರೂ ಉತ್ತಮ ಆಟವಾಡಲು ಪ್ರಯತ್ನಿಸಿದ್ದಾರೆ. ಪ್ರತಿಯೊಬ್ಬರು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಇರುವವರು’ ಎಂದು ಅವರು ಹೇಳಿದರು.

ಚುಟುಕು ಕ್ರಿಕೆಟ್‌ನ ವಿಶ್ವಕಪ್‌ ಅಕ್ಟೋಬರ್‌– ನವೆಂಬರ್‌ ತಿಂಗಳಲ್ಲಿ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿದೆ. ಪೂರ್ವಭಾವಿ ಹಂತದಲ್ಲಿ ಬಾಂಗ್ಲಾದೇಶ ತಂಡವು ‘ಬಿ’ ಗುಂಪಿಲ್ಲಿದೆ. ಈ ಗುಂಪಿನಲ್ಲಿ ಸ್ಕಾಟ್ಲೆಂಡ್‌, ಪಪುವಾ ನ್ಯೂಗಿನಿ, ಒಮಾನ್‌ ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.