ADVERTISEMENT

ಕ್ರಿಕೆಟ್ ಅಂಪೈರ್ ರೂಡಿ ಕರ್ಜನ್ ನಿಧನ: ಕಂಬನಿ ಮಿಡಿದ ಸಚಿನ್, ಸೆಹ್ವಾಗ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 2:53 IST
Last Updated 10 ಆಗಸ್ಟ್ 2022, 2:53 IST
ರೂಡಿ ಕರ್ಜನ್ ಮತ್ತು ವೀರೇಂದ್ರ ಸೆಹ್ವಾಗ್ (ಟ್ವಿಟರ್‌ ಚಿತ್ರ)
ರೂಡಿ ಕರ್ಜನ್ ಮತ್ತು ವೀರೇಂದ್ರ ಸೆಹ್ವಾಗ್ (ಟ್ವಿಟರ್‌ ಚಿತ್ರ)   

ನವದೆಹಲಿ: ಕ್ರಿಕೆಟ್ ಅಂಪೈರಿಂಗ್ ದಿಗ್ಗಜ, ದಕ್ಷಿಣ ಆಫ್ರಿಕಾದ ರೂಡಿ ಕರ್ಜನ್ (73) ನಿಧನಕ್ಕೆ ಕ್ರಿಕೆಟ್‌ ಲೋಕ ಕಂಬನಿ ಮಿಡಿದಿದೆ.

ಮಂಗಳವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ರೂಡಿ ಕರ್ಜನ್ ಮೃತಪಟ್ಟಿದ್ದಾರೆ.

‘ನನ್ನ ತಂದೆ ತಮ್ಮ ಕೆಲವು ಸ್ನೇಹಿತರೊಂದಿಗೆ ಗಾಲ್ಫ್‌ ಆಡಲು ತೆರಳಿದ್ದರು. ಅವರು ಸೋಮವಾರವೇ ಮನೆಗೆ ಮರಳಬೇಕಿತ್ತು. ಆದರೆ, ಇನ್ನೊಂದು ಸುತ್ತು ಗಾಲ್ಫ್ ಆಡುವ ಉದ್ದೇಶದಿಂದ ಅಲ್ಲಿಯೇ ಉಳಿದಿದ್ದರು. ಮಂಗಳವಾರ ಮರಳುತ್ತಿದ್ದರು’ ಎಂದು ರೂಡಿ ಅವರ ಮಗ ಕರ್ಜನ್ ಜೂನಿಯರ್ ಹೇಳಿದ್ದಾರೆ.

ADVERTISEMENT

ರೂಡಿ ಕರ್ಜನ್ ನಿಧನಕ್ಕೆ ಭಾರತದ ಹಿರಿಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ನಾನು ಮೊದಲ ಬಾರಿಗೆ 1992ರಲ್ಲಿ ರೂಡಿಯನ್ನು ಭೇಟಿಯಾದೆ. ಹಲವು ವರ್ಷಗಳಿಂದ ನಾವು ಉತ್ತಮ ಸ್ನೇಹಿತರಾಗಿದ್ದೇವು. ಅವರು (ರೂಡಿ) ಸದಾ ನಗುಮೊಗದಿಂದ ಆಟಗಾರರನ್ನು ಸ್ವಾಗತಿಸುವ ಆತ್ಮೀಯ ವ್ಯಕ್ತಿಯಾಗಿದ್ದರು. ಅವರು ಎಲ್ಲರಿಂದಲೂ ಗೌರವ ಪಡೆದಿದ್ದಾರೆ. ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

‘ರೂಡಿ ಕರ್ಜನ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ರೂಡಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವು. ನಾನು ರಾಶ್ ಶಾಟ್ ಆಡಿದಾಗಲೆಲ್ಲಾ ಅವರು ನನ್ನನ್ನು ಗದರಿಸುತ್ತಿದ್ದರು, ‘ಸಂವೇದನಾಶೀಲವಾಗಿ ಆಟವಾಡಿ, ನಾನು ನಿಮ್ಮ ಬ್ಯಾಟಿಂಗ್ ವೀಕ್ಷಿಸಲು ಬಯಸುತ್ತೇನೆ ಎಂದು ಅವರು ಹೇಳುತ್ತಿದ್ದರು. ಒಬ್ಬ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ’ ಎಂದು ಸೆಹ್ವಾಗ್ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ರೂಡಿ ಕರ್ಜನ್ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

1990ರಿಂದ 2010ರವರೆಗೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್ ಹಾಗೂ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟು 400ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಶ್ರೇಷ್ಠ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು.

‘ವಿಶ್ವವಿಖ್ಯಾತ ಅಂಪೈರ್ ರೂಡಿ ಕರ್ಜನ್ ಮತ್ತು ಇನ್ನೂ ಮೂವರು ವ್ಯಕ್ತಿಗಳು ಮಂಗಳವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ರಿವರ್ಸ್‌ಡೇಲ್ ಬಳಿ ಈ ಅವಘಡ ಸಂಭವಿಸಿದೆ. ಕೇಪ್‌ಟೌನ್‌ನಲ್ಲಿ ವಾರಾಂತ್ಯದ ಗಾಲ್ಫ್‌ಗೆ ತೆರಳಿದ್ದ ಅವರು ನೆಲ್ಸನ್‌ ಮಂಡೇಲಾ ಬೇ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದರು’ ಎಂದು ಅಲ್ಗೋವಾ ಎಫ್‌ಎಂ ವರದಿ ಮಾಡಿದೆ.

2002ರಲ್ಲಿ ಅವರು ಐಸಿಸಿ ಎಲೀಟ್ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದಿದ್ದರು. ಎಂಟು ವರ್ಷಗಳ ಕಾಲ ಅವರು ತಮ್ಮ ಸ್ಥಾನ ಕಾಪಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.