ADVERTISEMENT

ಭಾರತ–ಜಿಂಬಾಬ್ವೆ ಎರಡನೇ ಏಕದಿನ ಪಂದ್ಯ: ಸರಣಿ ಕೈವಶದತ್ತ ರಾಹುಲ್ ಬಳಗದ ಚಿತ್ತ

ಉತ್ತಮ ಲಯದಲ್ಲಿ ದೀಪಕ್, ಪ್ರಸಿದ್ಧ

ಪಿಟಿಐ
Published 20 ಆಗಸ್ಟ್ 2022, 2:00 IST
Last Updated 20 ಆಗಸ್ಟ್ 2022, 2:00 IST
ಶಿಖರ್ ಧವನ್ ಹಾಗೂ ಪ್ರಸಿದ್ಧ ಕೃಷ್ಣ  –ಎಎಫ್‌ಪಿ ಚಿತ್ರ
ಶಿಖರ್ ಧವನ್ ಹಾಗೂ ಪ್ರಸಿದ್ಧ ಕೃಷ್ಣ  –ಎಎಫ್‌ಪಿ ಚಿತ್ರ   

ಹರಾರೆ: ಆತಿಥೇಯ ಜಿಂಬಾಬ್ವೆ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಖುಷಿಯಲ್ಲಿರುವ ಭಾರತ ತಂಡವು ಈಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಶನಿವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಜಯಿಸುವುದರೊಂದಿಗೆ ತಮ್ಮ ಬ್ಯಾಟಿಂಗ್ ಕೌಶಲದ ಪರೀಕ್ಷೆಗೂ ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಸಿದ್ಧರಾಗಿದ್ದಾರೆ.

ಗಾಯದ ಸಮಸ್ಯೆ ಮತ್ತು ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ರಾಹುಲ್ ಆಡುತ್ತಿರುವ ಮೊದಲ ಟೂರ್ನಿ ಇದಾಗಿದೆ. ಮೊದಲ ಪಂದ್ಯದಲ್ಲಿ ಅವರು ಇನಿಂಗ್ಸ್ ಆರಂಭಿಸಲಿಲ್ಲ. ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಅವರು ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ 192 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಇದರಿಂದಾಗಿ ರಾಹುಲ್ ಸೇರಿದಂತೆ ಉಳಿದ ಬ್ಯಾಟರ್‌ಗಳಿಗೆ ಕ್ರೀಸ್‌ಗೆ ತೆರಳುವ ಅವಕಾಶ ಒದಗಿಬರಲಿಲ್ಲ.

ADVERTISEMENT

ಆದರೆ ಪಂದ್ಯದಲ್ಲಿ ಶಿಖರ್ ಎಡಗೈಗೆ ಚೆಂಡು ಬಡಿದು ಗಾಯವಾಗಿತ್ತು. ಅದೊಂದು ವೇಳೆ ಗಂಭೀರವಾಗಿದ್ದರೆ ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಅನುಮಾನ. ಆಗ ಶುಭಮನ್ ಜೊತೆಗೆ ರಾಹುಲ್ ಅಥವಾ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸಬಹುದು.

ದೀರ್ಘ ಕಾಲದ ನಂತರ ಕಣಕ್ಕೆ ಮರಳಿರುವ ಬೌಲರ್ ದೀಪಕ್ ಚಾಹರ್ ತಮ್ಮ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕಳೆದ ಪಂದ್ಯದಲ್ಲಿ ಅವರು ಒಂದೇ ಸ್ಪೆಲ್‌ನಲ್ಲಿ ಏಳು ಓವರ್‌ ಬೌಲಿಂಗ್ ಮಾಡಿ ತಮ್ಮ ದೈಹಿಕ ಕ್ಷಮತೆಯನ್ನು ಸಾಬೀತು ಮಾಡಿರುವುದು ಆಶಾದಾಯಕ.

ದೀಪಕ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ತಲಾ ಮೂರು ವಿಕೆಟ್ ಕಬಳಿಸಿ ಆತಿಥೇಯ ತಂಡಕ್ಕೆ ತಡೆಯೊಡ್ಡಿದ್ದರು.

ರೆಗಿಸ್ ಚಕಾಬ್ವಾ ನಾಯಕತ್ವದ ಜಿಂಬಾಬ್ವೆ ತಂಡವು ರಾಹುಲ್ ಬಳಗದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರೆ ಗೆಲುವಿನ ಕನಸು ಕಾಣಬಹುದು. ಜೊತೆಗೆ ಸರಣಿಯ ಜಯದ ಆಸೆಯನ್ನೂ ಜೀವಂತವಾಗಿಟ್ಟುಕೊಳ್ಳಬಹುದು.

ತಂಡಗಳು
ಭಾರತ: ಕೆ.ಎಲ್. ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕವಾಡ, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ಇಬ್ಬರೂ ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಶಾಬಾಜ್ ಅಹಮದ್.

ಜಿಂಬಾಬ್ವೆ: ರೆಗಿಸ್ ಚಕಾಬ್ವಾ (ನಾಯಕ), ರಯಾನ್ ಬರ್ಲ್, ತನಾಕ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲೂಕ್ ಜಾಂಗ್ವೆ, ಇನೊಸೆಂಡ್ ಕೈಯಾ, ತಕುಜ್ವಾಂಸೆ ಕೈಟೆನೊ, ಕ್ಲೈವ್ ಮದಾಂದೆ, ವೆಸ್ಲಿ ಮದೆವೆರೆ, ಟೆಡಿವಾಂಸೆ ಮರುಮಾನಿ, ಜಾನ್ ಮಸಾರ, ಟೋನಿ ಮುನ್ಯಾಂಗಾ, ರಿಚರ್ಡ್ ನಗರ್ವಾ, ವಿಕ್ಟರ್ ನಯಾಯುಚಿ, ಸಿಕಂದರ್ ರಝಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ

ಪಂದ್ಯ ಆರಂಭ: ಮಧ್ಯಾಹ್ನ 12.45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.