ADVERTISEMENT

T20 WC: ಆಸೀಸ್, ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿರುವ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2021, 8:16 IST
Last Updated 18 ಸೆಪ್ಟೆಂಬರ್ 2021, 8:16 IST
ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ನವದೆಹಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್‌ ಪೂರ್ವಭಾವಿಯಾಗಿ ನಡೆಯಲಿರುವ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡವು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಸವಾಲುಗಳನ್ನು ಎದುರಿಸಲಿವೆ.

ಭಾರತ ಆತಿಥ್ಯ ವಹಿಸುತ್ತಿರುವ ಟಿ20 ವಿಶ್ವಕಪ್, ಕೋವಿಡ್‌ನಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಹಾಗೂ ಒಮಾನ್‌ನಲ್ಲಿ ಆಯೋಜನೆಯಾಗುತ್ತಿವೆ. ಇದರಂತೆ ಅಭ್ಯಾಸ ಪಂದ್ಯಗಳ ವಿವರವನ್ನು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈಗಾಗಲೇ ಟ್ವೆಂಟಿ-20 ವಿಶ್ವಕಪ್‌ನ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಭಾರತವು ತನ್ನ ಮೊದಲ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ.

ಈ ರೋಚಕ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಆಸೀಸ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯಗಳುಟೀಮ್ ಇಂಡಿಯಾಗೆ ನೆರವಾಗುವ ಭರವಸೆಯಿದೆ.

ವಿರಾಟ್ ಕೊಹ್ಲಿ ಬಳಗವು, ಅಕ್ಟೋಬರ್ 18 ಹಾಗೂ 20ರಂದು ಕ್ರಮವಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿಆಡಲಿವೆ.

ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೂ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಅರ್ಹತೆಗಾಗಿ ಎಂಟು ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಲಿವೆ. ಅಕ್ಟೋಬರ್ 17ರಿಂದ 22ರ ವರೆಗೆ ಆರಂಭಿಕ ಹಂತದ ಪಂದ್ಯಗಳು ನಡೆಯಲಿವೆ. ಇಲ್ಲಿ ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು 'ಸೂಪರ್ 12' ಹಂತಕ್ಕೆ ಅರ್ಹತೆಯನ್ನು ಪಡೆಯುತ್ತವೆ. ಆ ತಂಡಗಳು ಈಗಾಗಲೇ ಅರ್ಹತೆ ಪಡೆದ ಎಂಟು ತಂಡಗಳೊಂದಿಗೆ ಸೇರಲಿವೆ.

'ಸೂಪರ್ 12' ಹಂತದ ಗ್ರೂಪ್ 2ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿವೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಅಕ್ಟೋಬರ್ 24ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.