ADVERTISEMENT

ಹುಮ್ಮಸ್ಸಿನಲ್ಲಿ ಭಾರತ; ಒತ್ತಡದಲ್ಲಿ ವಿಂಡೀಸ್

ಕ್ರಿಕೆಟ್: ಕ್ಲೀನ್‌ಸ್ವೀಪ್‌ನತ್ತ ಶಿಖರ್ ಧವನ್ ಬಳಗದ ಚಿತ್ತ; ಯುವ ಆಟಗಾರರಿಗೆ ಅವಕಾಶ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 20:38 IST
Last Updated 26 ಜುಲೈ 2022, 20:38 IST
ರಾಹುಲ್ ದ್ರಾವಿಡ್ ಮತ್ತು ಶಿಖರ್ ಧವನ್
ರಾಹುಲ್ ದ್ರಾವಿಡ್ ಮತ್ತು ಶಿಖರ್ ಧವನ್   

ಪೋರ್ಟ್ ಆಫ್ ಸ್ಪೇನ್: ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸತತ 12ನೇ ಸರಣಿ ಗೆಲುವಿನ ವಿಶ್ವದಾಖಲೆಯ ಸಂಭ್ರಮದಲ್ಲಿರುವ ಭಾರತ ತಂಡವು ಬುಧವಾರ ವೆಸ್ಟ್ ಇಂಡೀಸ್ ಎದುರಿನ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಗೆದ್ದು ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ವಿಂಡೀಸ್ ತಂಡದ ಎದುರಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಶಿಖರ್ ಧವನ್ ಬಳಗ ಜಯಿಸಿದೆ. ಈ ಪಂದ್ಯದಲ್ಲಿ ಒತ್ತಡ ಕಡಿಮೆ ಇರುವುದರಿಂದ ಕೆಲವು ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್‌ನಲ್ಲಿರುವ ಹುಡುಗರಿಗೆ ಅವಕಾಶ ಕೊಡುವತ್ತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚಿತ್ತ ನೆಟ್ಟಿದ್ದಾರೆ.

ಅದರಿಂದಾಗಿ ಶುಭಮನ್ ಗಿಲ್ ಬದಲಿಗೆ ಋತುರಾಜ್ ಗಾಯಕವಾಡ್ ಸ್ಥಾನ ಪಡೆಯಬಹುದು. ಸಂಜು ಸ್ಯಾಮ್ಸನ್ ತಮಗೆ ಲಭಿಸಿದ ಅವಕಾಶಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಆದರೂ ಕೊನೆ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ಕೊಟ್ಟು, ಇಶಾನ್ ಕಿಶನ್ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಬಹುದು.

ADVERTISEMENT

ಪದಾರ್ಪಣೆ ಸರಣಿ ಆಡುತ್ತಿರುವ ವೇಗಿ ಆವೇಶ್ ಖಾನ್, ಕಳೆದ ಪಂದ್ಯದ ಹೀರೊ ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಹೂಡಾ ಈ ಪಂದ್ಯದಲ್ಲಿಯೂ ಆಡಬಹುದು. ಆಲ್‌ರೌಂಡರ್ ಜಡೇಜ ಗಾಯಗೊಂಡಿದ್ದು ಕಣಕ್ಕಿಳಿಯುವುದು ಖಚಿತವಿಲ್ಲ.

ಆದರೆ, ವೆಸ್ಟ್ ಇಂಡೀಸ್ ತಂಡವು ಈ ಪಂದ್ಯದಲ್ಲಿ ಜಯಿಸಿ, ಸೋಲಿನ ಸರಪಣಿ ಕಳಚಿಕೊಳ್ಳುವ ಯೋಚನೆಯಲ್ಲಿದೆ. ಕಳೆದೆರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿತ್ತು. ಮೂನ್ನೂರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿತ್ತು. ಆದರೂ ಭಾರತ ಮೇಲುಗೈ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಶಾಯ್ ಹೋಪ್ ಶತಕ ಗಳಿಸಿದ್ದರು. ಈಚೆಗೆ ವಿಂಡೀಸ್ ತಂಡವು 0–3ರಿಂದ ಬಾಂಗ್ಲಾದೇಶದ ಎದುರು ಸೋತಿತ್ತು. ಇದೀಗ ಮತ್ತು ವೈಟ್‌ವಾಷ್ ತಪ್ಪಿಸಿಕೊಳ್ಳುವ ಸವಾಲು ಎದುರಿಸುತ್ತಿದೆ.

ತಂಡಗಳು: ಭಾರತ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಆರ್ಷದೀಪ್ ಸಿಂಗ್

ವೆಸ್ಟ್ ಇಂಡೀಸ್: ನಿಕೊಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಾಮ್ರಾ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹುಸೇನ್, ಅಲ್ಜರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಮೊ ಪಾಲ್, ರೋವಮನ್ ಪೊವೆಲ್, ಜೇಡನ್ ಸೀಲ್ಸ್, ಹೇಡನ್ ವಾಲ್ಶ್

ಪಂದ್ಯ ಆರಂಭ: ರಾತ್ರಿ 7ರಿಂದ

ನೇರಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್‌ಕೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.