ADVERTISEMENT

6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಯುವಿ ಕರೆಗಾಗಿ ಕಾಯುತ್ತಿರುವ ಜಸ್ಕರನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2021, 14:44 IST
Last Updated 11 ಸೆಪ್ಟೆಂಬರ್ 2021, 14:44 IST
ಜಸ್ಕರನ್ ಮಲ್ಹೋತ್ರಾ
ಜಸ್ಕರನ್ ಮಲ್ಹೋತ್ರಾ   

ಮಸ್ಕತ್ (ಒಮಾನ್): ಏಕದಿನ ಕ್ರಿಕೆಟ್‌ನಲ್ಲಿ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿರುವ ಅಮೆರಿಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಸ್ಕರನ್ ಮಲ್ಹೋತ್ರಾ, ಭಾರತದ ಮಾಜಿ ದಿಗ್ಗಜ ಯುವರಾಜ್ ಸಿಂಗ್ ಅವರಿಂದ ಕರೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ಪಪುವಾ ನ್ಯೂ ಗಿನಿ ವಿರುದ್ಧ ಗುರುವಾರ ನಡೆದ ಏಕದಿನ ಪಂದ್ಯದಲ್ಲಿ ಸತತ ಆರು ಸಿಕ್ಸರ್ ಬಾರಿಸಿರುವ ಜಸ್ಕರನ್, ನೂತನ ದಾಖಲೆ ಬರೆದರು. ಅಲ್ಲದೆ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎನಿಸಿದ್ದಾರೆ.

ಜಸ್ಕರನ್ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಯುವರಾಜ್ ಸಿಂಗ್ ಕೂಡಾ ಶೀಘ್ರದಲ್ಲೇ ಕರೆ ಮಾಡುವ ನಿರೀಕ್ಷೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅಮೆರಿಕದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಜಸ್ಕರನ್ ಭಾಜನರಾದರು. 124 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 16 ಸಿಕ್ಸರ್ ನೆರವಿನಿಂದ 173 ರನ್ ಗಳಿಸಿ ಔಟಾಗದೆ ಉಳಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ವೊಂದರ ಎಲ್ಲ ಆರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಅವರಿಗೆ ಸಲ್ಲುತ್ತದೆ. 2007ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

ಅದಾದ ಆರು ತಿಂಗಳ ಬಳಿಕ 2007ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವಿ, ಸ್ಟುವರ್ಟ್ ಬ್ರಾಡ್ ದಾಳಿಯಲ್ಲಿ ಸತತ ಆರು ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು.

ಇದೇ ವರ್ಷಾರಂಭದಲ್ಲಿ ವೆಸ್ಟ್‌ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ಸಹ ಈ ಸಾಧನೆಯನ್ನು ಸರಿಗಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.