ADVERTISEMENT

ಒಲಿಂಪಿಯನ್‌ ಫುಟ್‌ಬಾಲರ್‌ ಕಲಬುರ್ಗಿಯ ಹಕೀಂ ಇನ್ನಿಲ್ಲ

ಪಿಟಿಐ
Published 22 ಆಗಸ್ಟ್ 2021, 8:38 IST
Last Updated 22 ಆಗಸ್ಟ್ 2021, 8:38 IST
ಸೈಯ್ಯದ್‌ ಶಾಹಿದ್‌ ಹಕೀಂ
ಸೈಯ್ಯದ್‌ ಶಾಹಿದ್‌ ಹಕೀಂ   

ನವದೆಹಲಿ: ರೋಮ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತ ಫುಟ್‌ಬಾಲ್‌ ತಂಡದ ಆಟಗಾರ ಸೈಯ್ಯದ್‌ ಶಾಹಿದ್‌ ಹಕೀಂ (82) ಕಲಬುರ್ಗಿಯ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಭಾರತ ಫುಟ್‌ಬಾಲ್‌ ತಂಡ ಅದೇ ಕೊನೆಯ ಬಾರಿ, 1960ರಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿತ್ತು.

ಆತ್ಮೀಯ ವಲಯದಲ್ಲಿ ಹಕೀಮ್‌ ‘ಸಾಬ್‌’ ಎಂದೇ ಪರಿಚಿತರಾಗಿದ್ದ ಅವರು ಇತ್ತೀಚೆಗಷ್ಟೇ ಪಾರ್ಶ್ವವಾಯುವಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ರಾಷ್ಟ್ರೀಯ ತರಬೇತುದಾರರೂ ಆಗಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಅವರು, 1982ರ ದೆಹಲಿ ಏಷ್ಯಾಡ್‌ನಲ್ಲಿ ಭಾಗವಹಿಸಿದ್ದ ಭಾರತ ತಂಡಕ್ಕೆ ಅಸಿಸ್ಟೆಂಟ್‌ ಕೋಚ್‌ ಆಗಿದ್ದರು. ದಿವಂಗತ ಪಿ.ಕೆ. ಬ್ಯಾನರ್ಜಿ ಆಗ ಕೋಚ್‌ ಆಗಿದ್ದರು. ಮರ್ಡೇಕಾ ಫುಟ್‌ಬಾಲ್‌ ಟೂರ್ನಿಯಲ್ಲಿ ಆಡಿದ್ದ ತಂಡಕ್ಕೆ ಅವರು ಪೂರ್ಣಪ್ರಮಾಣದ ತರಬೇತುದಾರರಾಗಿದ್ದರು.

1988ರಲ್ಲಿ ತಮ್ಮ ಮಾರ್ಗದರ್ಶನದ ಮಹೀಂದ್ರಾ ಮತ್ತು ಮಹೀಂದ್ರಾ (ಈಗ ಮಹೀಂದ್ರ ಯುನೈಟೆಡ್‌) ತಂಡ ಡ್ಯುರಾಂಡ್‌ ಕಪ್‌ ಗೆದ್ದುಕೊಂಡಿದ್ದು ಅವರ ಕ್ರೀಡಾ ಬದುಕಿನ ಅವಿಸ್ಮರಣೀಯ ಸಂದರ್ಭಗಳಲ್ಲಿ ಒಂದು. ಮಹೀಂದ್ರಾ ತಂಡ, ಆಗಿನ ಪ್ರಬಲ ತಂಡವೆನಿಸಿದ್ದ ಈಸ್ಟ್‌ ಬೆಂಗಾಲ್‌ ವಿರುದ್ಧ ಜಯಗಳಿಸಿತ್ತು. ಸಲಗಾಂವಕರ್‌ ತಂಡಕ್ಕೂ ಹಕೀಂ ಕೋಚ್‌ ಆಗಿದ್ದರು. 2004–05ರಲ್ಲಿ ಕೊನೆಯ ಬಾರಿ ಮುಂಬೈ ಎಫ್‌ಸಿ ಪರ ಕೋಚ್‌ ಆಗಿ ಅವರು ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್‌ ಲೀಡರ್‌ ಆಗಿ ಕಾರ್ಯನಿರ್ವಹಿಸಿದ್ದ ಅವರು ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಂದೆಯೂ ಕೋಚ್‌:ಆಟದ ದಿನಗಳಲ್ಲಿ ಅವರು ಮಿಡ್‌ಫೀಲ್ಡರ್‌ ಸ್ಥಾನದಲ್ಲಿ ಆಡುತ್ತಿದ್ದರು. ಅವರನ್ನು ಕಾಡುತ್ತಿದ್ದ ಕೊರಗು ಎಂದರೆ, 1960ರ ಒಲಿಂಪಿಕ್ಸ್‌ನಲ್ಲಿ ತಂಡದಲ್ಲಿದ್ದರೂ ಕಣಕ್ಕಿಳಿಯುವ ಅವಕಾಶ ಸಿಗದಿದ್ದುದು. ಕಾಕತಾಳೀಯ ಎಂದರೆ ಆಗ ತಂಡದ ತರಬೇತುದಾರರಾಗಿದ್ದು, ಬೇರಾರೂ ಅಲ್ಲ, ಅವರ ತಂದೆ ಹಾಗೂ ಒಂದು ಕಾಲದ ಖ್ಯಾತ ಆಟಗಾರ ಸೈಯ್ಯದ್‌ ಅಬ್ದುಲ್‌ ರಹೀಂ.

1962ರಲ್ಲಿ ಜಕಾರ್ತಾ ಏಷ್ಯನ್‌ ಕ್ರೀಡೆಗಳಲ್ಲಿ ಆಡಿದ್ದ ತಂಡಕ್ಕೆ ಅವರು ಆಯ್ಕೆಯಾಗಿರಲಿಲ್ಲ. ಆ ಏಷ್ಯಾಡ್‌ನಲ್ಲಿ ಭಾರತ ಚಿನ್ನ ಗೆದ್ದುಕೊಂಡಿತ್ತು. ಆಗಿನ ಕಾಲದಲ್ಲಿ ತಂಡದಲ್ಲಿದ್ದ ರಾಮ್‌ ಬಹಾದ್ದೂರ್‌, ಮರಿಯಪ್ಪ ಕೆಂಪಯ್ಯ, ಪ್ರಶಾಂತ್‌ ಸಿನ್ಹಾ (ಫ್ರಾಂಕೊ) ಅವರಂಥ ಪ್ರಬಲ ಆಟಗಾರರ ಜೊತೆ ಹಕೀಂ ಪೈಪೋಟಿ ನಡೆಸಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.