ADVERTISEMENT

ಕೊಲಂಬಿಯಾ ಹೊರಕ್ಕೆ; ಫೈನಲ್‌ನಲ್ಲಿ ಬ್ರೆಜಿಲ್-ಅರ್ಜೆಂಟೀನಾ ಮುಖಾಮುಖಿ

ಪಿಟಿಐ
Published 7 ಜುಲೈ 2021, 6:23 IST
Last Updated 7 ಜುಲೈ 2021, 6:23 IST
ಅರ್ಜೆಂಟೀನಾ ಜಯಭೇರಿ
ಅರ್ಜೆಂಟೀನಾ ಜಯಭೇರಿ   

ಬ್ರೆಸಿಲಿಯಾ (ಬ್ರೆಜಿಲ್): ರಿಯೊ ಡಿ ಜನೈರೊದ ಐತಿಹಾಸಿಕ ಮಾರ್ಕಾನ ಸ್ಟೇಡಿಯಂನಲ್ಲಿ ನಡೆದ ಕೋಪಾ ಅಮೆರಿಕ ಟೂರ್ನಿಯ ಜಿದ್ದಾಜಿದ್ದಿನ ಸೆಮಿಫೈನಲ್ ಮುಖಾಮುಖಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾ ಮಣಿಸಿರುವ ಅರ್ಜೆಂಟೀನಾ, ಫೈನಲ್‌ಗೆ ಲಗ್ಗೆಯಿಟ್ಟಿದೆ.

ಭಾನುವಾರ ನಡೆಯಲಿರುವ ರೋಚಕ ಫೈನಲ್ ಮುಖಾಮುಖಿಯಲ್ಲಿ ಅರ್ಜೆಂಟೀನಾ ತಂಡವು ಬ್ರೆಜಿಲ್ ಸವಾಲನ್ನು ಎದುರಿಸಲಿದೆ. ಅಲ್ಲದೆ ಫುಟ್ಬಾಲ್ ಜಗತ್ತಿನ ಎರಡು ಬಲಿಷ್ಠ ತಂಡಗಳು ಪರಸ್ಪರ ಟ್ರೋಫಿಗಾಗಿ ಹೋರಾಡಲಿದೆ.

ನಿಯಮಿತ ಹಾಗೂ ಹೆಚ್ಚುವರಿ ಅವಧಿಯ ಅಂತ್ಯಕ್ಕೆ ಇತ್ತಂಡಗಳು 1-1ರ ಗೋಲುಗಳ ಅಂತರದ ಸಮಬಲ ಸಾಧಿಸಿದ್ದವು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ವಿಜೇತರನ್ನು ನಿರ್ಧರಿಸಲಾಯಿತು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಟ್ ಮೂರು ಅದ್ಭುತ ಸೇವ್‌ಗಳ ನೆರವಿನಿಂದ ಅರ್ಜೇಂಟೀನಾ ತಂಡವು ಕೊಲಂಬಿಯಾ ವಿರುದ್ಧ 3-2 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿತು.

7ನೇ ನಿಮಿಷದಲ್ಲಿ ಗೋಲು ಬಾರಿಸಿದ್ದ ಲಾಟಾರೊ ಮಾರ್ಟಿನೆಂಜ್ ಅರ್ಜೇಂಟೀನಾಗೆ ಮುನ್ನಡೆ ಒದಗಿಸಿದ್ದರೆ ಪಂದ್ಯದ ದ್ವಿತಿಯಾರ್ಧದಲ್ಲಿ 67ನೇ ನಿಮಿಷದಲ್ಲಿ ಕೊಲಂಬಿಯಾದ ಲೂಯಿಸ್ ಡಯಾಜ್ ಸಮಬಲದ ಗೋಲು ದಾಖಲಿಸಿದ್ದರು. ಆದರೂ ಪೆನಾಲ್ಟಿಯಲ್ಲಿ ಕೊಲಂಬಿಯಾ ಎಡವಿತು.

ಇದರೊಂದಿಗೆ ಲಯೊನೆಲ್ ಮೆಸ್ಸಿ ಹಾಗೂ ನೇಮರ್ ನಡುವೆ ನೇರ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ಇದು ವಿಶ್ವ ಫುಟ್ಬಾಲ್ ಪ್ರೇಮಿಗಳಿಗೆ ಅತೀವ ಸಂಭ್ರಮಕ್ಕೆ ಕಾರಣವಾಗಿದೆ.

ಅತ್ತ ಮೊದಲ ಸೆಮಿಫೈನಲ್ ಮುಖಾಮುಖಿಯಲ್ಲಿ ಬ್ರೆಜಿಲ್, 1-0 ಗೋಲಿನ ಅಂತರದಲ್ಲಿ ಪೆರು ವಿರುದ್ಧ ಜಯ ದಾಖಲಿಸಿತ್ತು.

1993ರಲ್ಲಿ ಕೋಪಾ ಅಮೆರಿಕ ಕಪ್ ಗೆದ್ದಿರುವುದನ್ನು ಹೊರತುಪಡಿಸಿದರೆ ಅರ್ಜೇಂಟೀನಾ ಪ್ರಮುಖ ಟೂರ್ನಿಗಳಲ್ಲಿ ಕಿರೀಟ ಗೆಲ್ಲುವಲ್ಲಿ ವಿಫಲವಾಗಿದೆ. ಅಂದು ಕೂಡಾ ಪೆನಾಲ್ಟಿಯಲ್ಲೇ ಕೊಲಂಬಿಯಾ ವಿರುದ್ಧ 6-5ರ ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.