ADVERTISEMENT

ಬೆಲ್ಜಿಯಂಗೆ ಮಣಿದ ಪೋರ್ಚುಗಲ್‌

ನೆದರ್ಲೆಂಡ್ಸ್‌ಗೆ ಸೋಲುಣಿಸಿದ ಜೆಕ್ ಗಣರಾಜ್ಯ; ಗೋಲು ಗಳಿಸಲು ರೊನಾಲ್ಡೊ ವಿಫಲ

ಏಜೆನ್ಸೀಸ್
Published 28 ಜೂನ್ 2021, 12:50 IST
Last Updated 28 ಜೂನ್ 2021, 12:50 IST
ಗೋಲು ಗಳಿಸಿ ಸಂಭ್ರಮಿಸಿದ ಬೆಲ್ಜಿಯಂನ ಥಾರ್ಗನ್ ಹಜಾರ್ಡ್ –ಎಎಫ್‌ಪಿ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಬೆಲ್ಜಿಯಂನ ಥಾರ್ಗನ್ ಹಜಾರ್ಡ್ –ಎಎಫ್‌ಪಿ ಚಿತ್ರ   

ಸೆವಿಲೆ, ಸ್ಪೇನ್: ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಮತ್ತು ಅವರ ನೇತೃತ್ವದ ಪೋರ್ಚುಗಲ್ ತಂಡವನ್ನು ನಿಯಂತ್ರಿಸಿದ ಬೆಲ್ಜಿಯಂ ಏಕೈಕ ಗೋಲಿನೊಂದಿಗೆ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಜೆಕ್ ಗಣರಾಜ್ಯ 2–0 ಗೋಲುಗಳಿಂದ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಎಂಟರ ಘಟ್ಟ ಪ್ರವೇಶಿಸಿತು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪೋರ್ಚುಗಲ್‌ 0–1ರಲ್ಲಿ ಸೋತು ಹೊರಬಿದ್ದಿತು. ಪಂದ್ಯ ಮುಗಿಯುತ್ತಿದ್ದಂತೆ ಕ್ರಿಸ್ಟಿಯಾನೊ ರೊನಾಲ್ಡೊ ತೋಳಿಗೆ ಕಟ್ಟಿದ್ದ ನಾಯಕತ್ವದ ಪಟ್ಟಿಯನ್ನು ಕಿತ್ತೆಸೆದು ಬೇಸರ ವ್ಯಕ್ತಪಡಿಸಿದರು.

ಗರಿಷ್ಠ ಅಂತರರಾಷ್ಟ್ರೀಯ ಗೋಲು (109) ಗಳಿಸಿದ ಇರಾನ್‌ನ ಸ್ಟ್ರೈಕರ್ ಅಲಿ ದಯಿ ದಾಖಲೆಯನ್ನು ಕಳೆದ ಪಂದ್ಯದಲ್ಲಿ ಸಮಗಟ್ಟಿದ್ದ ರೊನಾಲ್ಡೊ ಹೊಸ ದಾಖಲೆ ಬರೆಯುವ ಹುಮ್ಮಸ್ಸಿನೊಂದಿಗೆ ಕಣಕ್ಕೆ ಇಳಿದಿದ್ದರು. ಆದರೆ ಬೆಲ್ಜಿಯಂನ ರಕ್ಷಣಾ ಗೋಡೆ ಕೆಡವಲು ಅವರಿಗಾಗಲಿ ತಂಡದ ಇತರ ಆಟಗಾರರಿಗಾಗಲಿ ಸಾಧ್ಯವಾಗಲಿಲ್ಲ. ಇದೇ ವೇಳೆ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಎದುರಾಳಿಗಳು ಮೊದಲಾರ್ಧದಲ್ಲೇ ಗಳಿಸಿದ ಮುನ್ನಡೆಯನ್ನು ಕೊನೆಯ ವರೆಗೆ ಉಳಿಸಿಕೊಂಡರು.

ADVERTISEMENT

ಪಂದ್ಯದುದ್ದಕ್ಕೂ ರೊನಾಲ್ಡೊ ಅವರನ್ನು ನಿಯಂತ್ರಿಸಲು ಬೆಲ್ಜಿಯಂ ಗಮನ ಹರಿಸಿತು. 25ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್ ಅವಕಾಶದಲ್ಲಿ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶವಿತ್ತು. ಆದರೆ ಚೆಂಡು ಗುರಿ ಸೇರಲು ಗೋಲ್‌ಕೀಪರ್ ತಿಬೌಟ್ ಕಾರ್ಟಾಯ್ಸ್ ಬಿಡಲಿಲ್ಲ. 74ನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಫ್ರೀ ಕಿಕ್ ಅವಕಾಶದಲ್ಲಿ ರೊನಾಲ್ಡೊ ಒದ್ದ ಚೆಂಡು ಹೊರಗೆ ಚಿಮ್ಮಿತು. ಕೆಲವೇ ನಿಮಿಷಗಳಲ್ಲಿ ಎದುರಾಳಿಗಳ ಗೋಲು ಆವರಣದಲ್ಲಿ ಉತ್ತಮ ಅವಕಾಶ ಸೃಷ್ಟಿಸಿದರೂ ಚೆಂಡನ್ನು ಗುರಿಸೇರಿಸಲು ರೊನಾಲ್ಡೊಗೆ ಸಾಧಿಸಲಿಲ್ಲ. 56ನೇ ನಿಮಿಷದಲ್ಲಿ ಅವರು ನೀಡಿದ ಪಾಸ್‌ ನಿಯಂತ್ರಿಸಿ ಗೋಲು ಗಳಿಸುವಲ್ಲಿ ಡೀಗೊ ಜೋತಾ ವಿಫಲರಾದರು.

ಕೆವಿನ್ ಡಿ ಬ್ರೂನಿ, ಏಡೆನ್ ಹಜಾರ್ಡ್ ಮತ್ತು ರೊಮೆಲು ಲುಕಾಕು ನೇತೃತ್ವದ ಫಾರ್ವರ್ಡ್ ವಿಭಾಗ ‍ಹಾಲಿ ಚಾಂಪಿಯನರನ್ನು ಆರಂಭದಿಂದಲೇ ಕಾಡಿತು. 42ನೇ ನಿಮಿಷದಲ್ಲಿ ಗೋಲ್‌ಕೀಪರ್ ರಿಯು ಪ್ಯಾಟ್ರಿಕೊ ಅವರನ್ನು ವಂಚಿಸಿ ಥಾರ್ಗನ್ ಹಜಾರ್ಡ್ ಮೋಹಕ ಗೋಲು ಗಳಿಸಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು.

ಗಾಯಗೊಂಡ ಬ್ರೂನಿ ದ್ವಿತೀಯಾರ್ಧದಲ್ಲಿ ಆಡಲಿಲ್ಲ. ಬದಲಿ ಆಟಗಾರನನ್ನು ಕಣಕ್ಕೆ ಇಳಿಸಿದ ಬೆಲ್ಜಿಯಂ ನಿರಾತಂಕವಾಗಿ ಆಡಿತು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸಲು ಪೋರ್ಚುಗಲ್‌ಗೆ ಅನೇಕ ಅವಕಾಶಗಳು ಒದಗಿದ್ದವು. ರೂಬೆನ್ ಡಯಾಸ್ ಹೆಡ್ ಮಾಡಿದ ಚೆಂಡು ಸುಲಭವಾಗಿ ಗೋಲುಪೆಟ್ಟಿಗೆಯೊಳಗೆ ಸೇರುವ ಸಾಧ್ಯತೆ ಇತ್ತು. ಆದರೆ ಗೋಲ್‌ಕೀ‍‍ಪರ್ ಕಾರ್ಟಾಯ್ಸ್ ತಂಡವನ್ನು ರಕ್ಷಿಸಿದರು. ಟೂರ್ನಿಯಲ್ಲಿ ಈವರೆಗೆ ಸೋಲು ಕಾಣದ ಬೆಲ್ಜಿಯಂ ಒಟ್ಟಾರೆ 13 ಪಂದ್ಯಗಳಲ್ಲಿ ಅಜೇಯವಾಗಿದೆ.

ಜೆಕ್‌ ಗಣರಾಜ್ಯದ ಸಂಭ್ರಮ

ಬುಡಾಪೆಸ್ಟ್‌ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡ ಜೆಕ್ ಗಣರಾಜ್ಯಕ್ಕೆ ಮಣಿಯಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. 55ನೇ ನಿಮಿಷದಲ್ಲಿ ನೆದರ್ಲೆಂಡ್ಸ್‌ ಡಿಫೆಂಡರ್ ಮಥಿಸ್ ಡಿ ಲೈಟ್ ಅವರು ರೆಡ್ ಕಾರ್ಡ್‌ ಪಡೆದು ಹೊರಹೋದರು. ಇದರಿಂದ ಜೆಕ್ ತಂಡಕ್ಕೆ ಅನುಕೂಲವಾಯಿತು.

68ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್ ಥಾಮಸ್ ಹೋಲ್ಸ್ ಹೆಡರ್ ಮೂಲಕ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 80ನೇ ನಿಮಿಷದಲ್ಲಿ ಶೀಕ್ ಗಳಿಸಿದ ಗೋಲಿನೊಂದಿಗೆ ತಂಡ ಗೆಲುವು ಖಚಿತಪಡಿಸಿಕೊಂಡಿತು. ನಂತರ ಎಚ್ಚರಿಕೆಯ ಆಟವಾಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.