ADVERTISEMENT

ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿ: ಚೆಟ್ರಿ ಬಳಗಕ್ಕೆ ಈಗಲ್ಸ್ ಸವಾಲು

ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿ: ಗುಂಪು ಹಂತ ಪ್ರವೇಶಿಸುವತ್ತ ಬೆಂಗಳೂರು ಎಫ್‌ಸಿ ಚಿತ್ತ

ಪಿಟಿಐ
Published 14 ಆಗಸ್ಟ್ 2021, 11:00 IST
Last Updated 14 ಆಗಸ್ಟ್ 2021, 11:00 IST
ಅಭ್ಯಾಸನಿರತ ಬಿಎಫ್‌ಸಿ ಆಟಗಾರರು– ಟ್ವಿಟರ್‌ ಚಿತ್ರ
ಅಭ್ಯಾಸನಿರತ ಬಿಎಫ್‌ಸಿ ಆಟಗಾರರು– ಟ್ವಿಟರ್‌ ಚಿತ್ರ   

ಮಾಲೆ, ಮಾಲ್ಡೀವ್ಸ್: ಶುಭಾರಂಭದ ನಿರೀಕ್ಷೆಯಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಎಎಫ್‌ಸಿ ಕಪ್ ಪ್ಲೇ ಆಫ್ ಹಣಾಹಣಿಯಲ್ಲಿ ಭಾನುವಾರ ಆತಿಥೇಯ ಕ್ಲಬ್‌ ಈಗಲ್ಸ್ ವಿರುದ್ಧ ಸೆಣಸಲಿದೆ.

ಮೇನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡವು ಎಎಫ್‌ಸಿ ಕಪ್‌ ಟೂರ್ನಿಯ ‘ಡಿ‘ ಗುಂಪಿಗೆ ಮುನ್ನಡೆಯಲಿದೆ.

ಏಪ್ರಿಲ್‌ನಲ್ಲಿ ನಡೆದ ಪ್ರಿಲಿಮಿನರಿ ಸುತ್ತಿನಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ 5–0ಯಿಂದ ನೇಪಾಳದ ತ್ರಿಭುವನ್ ಆರ್ಮಿ ತಂಡವನ್ನು ಪರಾಭವಗೊಳಿಸಿತ್ತು. ಮತ್ತೊಂದು ಹಣಾಹಣಿಯಲ್ಲಿ ಕ್ಲಬ್ ಈಗಲ್ಸ್ 2–0ಯಿಂದ ಭೂತಾನ್‌ನ ಥಿಂಪು ಎಫ್‌ಸಿಗೆ ಸೋಲುಣಿಸಿತ್ತು.

ADVERTISEMENT

ತಂಡಕ್ಕೆ ಸೇರ್ಪಡೆಯಾಗಿರುವ ಹೊಸ ಆಟಗಾರರಾದ ರೋಹಿತ್ ಕುಮಾರ್‌, ಹರ್ಮನ್‌ಪ್ರೀತ್ ಸಿಂಗ್‌, ಜಯೇಶ್‌ ರಾಣೆ, ಡ್ಯಾನಿಶ್ ಫಾರೂಕ್‌ ಮತ್ತು ಸಾರ್ಥಕ್ ಗೋಲುಯ್ ಮೇಲೆ ಬಿಎಫ್‌ಸಿಯ ಮುಖ್ಯ ಕೋಚ್‌ ಮಾರ್ಕೊ ಪೆಜ್ಜೊಲಿ ಭರವಸೆ ಇರಿಸಿದ್ದಾರೆ.

ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಕಳಪೆ ಸಾಮರ್ಥ್ಯ ತೋರಿದ್ದ ಚೆಟ್ರಿ ಬಳಗ ಏಳನೇ ಸ್ಥಾನ ಗಳಿಸಿತ್ತು. ಆದರೆ ಎಎಫ್‌ಸಿ ಕಪ್ ಟೂರ್ನಿಯಲ್ಲಿ ತಂಡದ ದಾಖಲೆ ಉತ್ತಮವಾಗಿದೆ. 2016ರಲ್ಲಿ ರನ್ನರ್‌ಅಪ್ ಆಗಿದ್ದ ಬಿಎಫ್‌ಸಿ, 2017ರಲ್ಲಿ ಇಂಟರ್‌ಜೋನಲ್‌ ಫೈನಲ್‌, ಮರುವರ್ಷ ಸೆಮಿಫೈನಲ್‌ ತಲುಪಿತ್ತು.

ಈಗಲ್ಸ್ ತಂಡವು ಈ ಪಂದ್ಯದಲ್ಲಿ ಪ್ರಮುಖ ಆಟಗಾರ ಅಹಮದ್ ರಿಜ್ವಾನ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರು ಆಡುತ್ತಿಲ್ಲ ಎಂದು ಕೋಚ್‌ ಮೊಹಮ್ಮದ್ ಶಾಜ್ಲಿ ತಿಳಿಸಿದ್ದಾರೆ.

ಅಲಿ ಆಶ್ಫಾಕ್‌, ಅಕ್ರಂ ಅಬ್ದುಲ್ ಘಣಿ, ಅಲಿ ಫಾಸಿರ್‌, ಮೊಹಮ್ಮದ್ ಆರಿಫ್‌, ಇಸ್ಮಾಯಿಲ್ ಈಸಾ, ಅಹಮದ್ ಹಸನ್ ಅವರ ಅನುಭವದ ಬಲ ತಂಡಕ್ಕಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿ ನಿರೀಕ್ಷಿಸಬಹುದಾಗಿದೆ.

ಈ ಪಂದ್ಯದಲ್ಲಿ ಗೆದ್ದ ತಂಡವು ಭಾರತ ಮೂಲದ ಎಟಿಕೆ ಮೋಹನ್ ಬಾಗನ್‌, ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್, ಮಾಲ್ಡೀವ್ಸ್‌ನ ಮೈಜಿಯಾ ಸ್ಪೋರ್ಟ್ಸ್ ಆ್ಯಂಡ್‌ ರಿಕ್ರಿಯೇಷನ್ ತಂಡಗಳು ಇರುವ ಡಿ ಗುಂಪನ್ನು ಸೇರಿಕೊಳ್ಳಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 8.30

ಸ್ಥಳ: ಮಾಲ್ಡೀವ್ಸ್ ರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಂಗಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.