ADVERTISEMENT

ಡುರಾಂಡ್‌ ಕಪ್‌ ಕ್ವಾರ್ಟರ್‌ ಫೈನಲ್‌ನತ್ತ ಬಿಎಫ್‌ಸಿ ಚಿತ್ತ

ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:38 IST
Last Updated 17 ಸೆಪ್ಟೆಂಬರ್ 2021, 16:38 IST
ಬೆಂಗಳೂರು ಎಫ್‌ಸಿ ಆಟಗಾರರು (ನೀಲಿ ಪೋಷಾಕು)
ಬೆಂಗಳೂರು ಎಫ್‌ಸಿ ಆಟಗಾರರು (ನೀಲಿ ಪೋಷಾಕು)   

ಕೋಲ್ಕತ್ತ: ಕ್ವಾರ್ಟರ್‌ಫೈನಲ್ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ),ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಡೆಲ್ಲಿ ಎಫ್‌ಸಿ ತಂಡವನ್ನು ಎದುರಿಸಲಿದೆ.

ಸಿ ಗುಂಪಿನ ಈ ಪಂದ್ಯಕ್ಕೆ ಮೋಹನ್ ಬಾಗನ್ ಕ್ರೀಡಾಂಗಣ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಮಣಿಸಿದ್ದ ಬಿಎಫ್‌ಸಿ ಆತ್ಮವಿಶ್ವಾಸದಲ್ಲಿದೆ.

ಡೆಲ್ಲಿ ಎದುರು ಗೆದ್ದರೆ ಬಿಎಫ್‌ಸಿ ಎಂಟರಘಟ್ಟಕ್ಕೆ ಪ್ರವೇಶಿಸುವುದು ಖಚಿತವಾಗಲಿದೆ. ಆದರೆ ಇನ್ನೂ ಒಂದು ಜಯ ಸಾಧಿಸದ ಡೆಲ್ಲಿ ತಂಡಕ್ಕೆ ಇದು ಮಹತ್ವದ ಹಣಾಹಣಿಯಾಗಿದೆ.

ADVERTISEMENT

‘ಡೆಲ್ಲಿ ಎಫ್‌ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಗುಂಪಿನಲ್ಲಿ ಕಡಿಮೆ ತಂಡಗಳು ಇರುವುದರಿಂದ ಅದೃಷ್ಟ ಯಾವಾಗ ಬೇಕಾದರೂ ಕೈಹಿಡಿಯಬಹುದು. ಅಲ್ಲಿಯೂ ಉತ್ತಮ ಆಟಗಾರರಿದ್ದಾರೆ. ಎದುರಾಳಿಗಳನ್ನು ನಾವು ಗೌರವಿಸುತ್ತೇವೆ. ಸವಾಲಿಗೆ ಸಜ್ಜಾಗಿದ್ದು ನಮ್ಮ ಆಟಗಾರರು ಸಾಧ್ಯವಾದಷ್ಟು ಶ್ರೇಷ್ಠ ಆಟವಾಡಲಿದ್ದಾರೆ‘ ಎಂದು ಬಿಎಫ್‌ಸಿ ತಂಡದ ಕೋಚ್‌ ನೌಶಾದ್ ಮೂಸಾ ಹೇಳಿದ್ದಾರೆ.

ಕ್ವಾರ್ಟರ್‌ಫೈನಲ್‌ಗೆ ಆರ್ಮಿ ಗ್ರೀನ್‌: ಸುದೇವ ಡೆಲ್ಲಿ ಎಫ್‌ಸಿ ಎದುರು 1–0ಯಿಂದ ಜಯ ಗಳಿಸಿದ ಮಾಜಿ ಚಾಂಪಿಯನ್ ಆರ್ಮಿ ಗ್ರೀನ್ ತಂಡವು ಟೂರ್ನಿಯ ಎಂಟರಘಟ್ಟ ಪ್ರವೇಶಿಸಿತು. ವಿಜೇತ ತಂಡದ ಪರ ದೀಪಕ್ ಸಿಂಗ್‌ 51ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವು 5–0 ಗೋಲುಗಳಿಂದ ಜೆಮ್‌ಶೆಡ್‌ಪುರ ಎಫ್‌ಸಿಯನ್ನು ಮಣಿಸಿತು. ಗೆದ್ದ ತಂಡದ ದೇವೇಂದ್ರ ಮುರಗಾಂವಕರ್‌ (20 ಮತ್ತು 44ನೇ ನಿಮಿಷ), ಮುಹಮ್ಮದ್ ನೆಮಿಲ್‌ (46 ಮತ್ತು 81ನೇ ನಿಮಿಷ) ಹಾಗೂ ಪ್ರಿನ್ಸಟನ್ ರೆಬೆಲ್ಲೊ (26ನೇ ನಿ.) ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.