ADVERTISEMENT

PV Web Exclusive | ಇಂಗ್ಲೆಂಡ್‌ ಗೋಡೆಯ ತಾಕತ್ತು; ಸ್ಪೇನ್‌ ಆಕ್ರಮಣದ ಹಕೀಕತ್ತು

ವಿಕ್ರಂ ಕಾಂತಿಕೆರೆ
Published 4 ಜುಲೈ 2021, 12:03 IST
Last Updated 4 ಜುಲೈ 2021, 12:03 IST
ಇಂಗ್ಲೆಂಡ್ ತಂಡದ ಯಶಸ್ಸಿನ ಹಿಂದಿನ ತಂತ್ರ ಮತ್ತು ಆಟದ ಶಕ್ತಿ ನಾಯಕ ಹ್ಯಾರಿ ಕೇನ್ (ಮುಂದೆ ಇರುವವರು) –ರಾಯಿಟರ್ಸ್ ಚಿತ್ರ
ಇಂಗ್ಲೆಂಡ್ ತಂಡದ ಯಶಸ್ಸಿನ ಹಿಂದಿನ ತಂತ್ರ ಮತ್ತು ಆಟದ ಶಕ್ತಿ ನಾಯಕ ಹ್ಯಾರಿ ಕೇನ್ (ಮುಂದೆ ಇರುವವರು) –ರಾಯಿಟರ್ಸ್ ಚಿತ್ರ   

ಕೊರೊನಾ ಸೋಂಕು ಆತಂಕದ ನಡುವೆಯೇ ಆಯೋಜಿಸಿದ್ದ ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ (ಯೂರೊ ಕಪ್) ಅಡ್ಡಿಗಳನ್ನು ಕಾಣದೇ ಈಗ ಮುಕ್ತಾಯದ ಹಂತ ತಲುಪಿದೆ. ಹಾಲಿ ಚಾಂಪಿಯನ್, ವಿಶ್ವ ಚಾಂಪಿಯನ್ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ತಂಡವು ಕ್ವಾರ್ಟರ್‌ ಫೈನಲ್ ಹಂತಕ್ಕೇರುವ ಮೊದಲೇ ಗಂಟುಮೂಟೆ ಕಟ್ಟಿದೆ. ಚಾಂಪಿಯನ್‌ಷಿಪ್‌ನಲ್ಲಿ ಇಂಗ್ಲೆಂಡ್‌ನ ರಕ್ಷಣಾತ್ಮಕ ಆಟ ಮತ್ತು ಸ್ಪೇನ್‌ನ ಆಕ್ರಮಣಕಾರಿ ಫುಟ್‌ಬಾಲ್ ಪ್ರಿಯರ ಕಣ್ಮನ ತಣಿಸಿದೆ.

ಎರಡು ದಿನಗಳ ವಿಶ್ರಾಂತಿಯ ನಂತರ ಜುಲೈ ಆರು ಮತ್ತು ಏಳರಂದು ಸೆಮಿಫೈನಲ್ ಹಣಾಹಣಿಗಳು ನಡೆಯಲಿವೆ. ಸ್ಪೇನ್ ಮತ್ತು ಇಟಲಿ, ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ತಂಡಗಳು ಅಂತಿಮ ನಾಲ್ಕರ ಘಟ್ಟದಲ್ಲಿ ಮುಖಾಮುಖಿಯಾಗಲಿವೆ. ಈ ಪೈಕಿ ಯಾವ ತಂಡಗಳು ಗೆದ್ದರೂ ಪ್ರಶಸ್ತಿ ಸುತ್ತಿನ ಪೈಪೋಟಿ ರೋಚಕವಾಗಲಿದೆ. ಯಾಕೆಂದರೆ ಈ ನಾಲ್ಕೂ ತಂಡಗಳು ಗುಂಪು ಹಂತದಿಂದಲೇ ಛಲದಿಂದ ಕಾದಾಡುತ್ತ ಬಂದಿವೆ.

ಕೊರೊನಾದಿಂದಾಗಿ ಒಂದು ವರ್ಷದ ಬಿಡುವಿನ ನಂತರ ಚಾಂಪಿಯನ್‌ಷಿಪ್ ಆರಂಭಗೊಂಡಾಗ ಎಲ್ಲರ ಗಮನ ಇದ್ದದ್ದು ‘ಎಫ್‌’ ಗುಂಪಿನ ಮೇಲೆ. ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲುಗಳ ಸಾಧನೆಯ ದಾಖಲೆಯತ್ತ ಹೆಜ್ಜೆ ಇರಿಸಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಹಾಲಿ ಚಾಂಪಿಯನ್ ಪೋರ್ಚುಗಲ್‌, ಹಾಲಿ ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಮತ್ತು 2014ರ ವಿಶ್ವ ಚಾಂಪಿಯನ್ ಜರ್ಮನಿ ತಂಡಗಳು ಆ ಗುಂಪಿನಲ್ಲಿ ಇದ್ದವು. ಆದರೆ ‘ಎ’ ಗುಂಪಿನಿಂದ ಇಟಲಿ, ‘ಬಿ’ ಗುಂಪಿನಿಂದ ಡೆನ್ಮಾರ್ಕ್‌, ‘ಡಿ’ ಗುಂಪಿನಿಂದ ಇಂಗ್ಲೆಂಡ್‌ ಹಾಗೂ ‘ಇ’ ಗುಂಪಿನ ಸ್ಪೇನ್ ತಂಡಗಳು ಎದುರಾಳಿಗಳ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದವು.

ADVERTISEMENT

ಫುಟ್‌ಬಾಲ್ ಜಗತ್ತು ಸದ್ಯ ಸೆಮಿಫೈನಲ್‌ಗಳಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ಗೆಲ್ಲುವ ನಿರೀಕ್ಷೆಯನ್ನು ಹೊಂದಿದೆ. ಹಾಗೆ ನೋಡಿದರೆ ಸ್ಪೇನ್, ಇಟಲಿ ಮತ್ತು ಡೆನ್ಮಾರ್ಕ್‌ ತಂಡಗಳು ಈ ಬಾರಿ ಆಕ್ರಮಣದ ಮೂಲಕ ಹೆಚ್ಚು ಗಮನ ಸೆಳೆದಿವೆ. ಇಂಗ್ಲೆಂಡ್‌ ಕೊನೆಯ ಹಂತದಲ್ಲಿ ರಕ್ಷಣೆಯ ಜೊತೆಯಲ್ಲಿ ಆಕ್ರಮಣ ವಿಭಾಗದ ಬಲವನ್ನೂ ಹೆಚ್ಚಿಸಿಕೊಂಡಿದೆ. ಆದ್ದರಿಂದ ಈ ನಾಲ್ಕರ ಪೈಕಿ ಯಾವ ತಂಡವನ್ನೂ ಲಘುವಾಗಿ ಪರಿಗಣಿಸುವಂತಿಲ್ಲ.

ಸ್ಪೇನ್, ಇಟಲಿ ಮತ್ತು ಡೆನ್ಮಾರ್ಕ್‌ ಅತಿ ಹೆಚ್ಚು ಗೋಲು ಗಳಿಸಿರುವ ತಂಡಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಹೊಂದಿದೆ. ಸ್ಪೇನ್ 12 ಬಾರಿ ಚೆಂಡನ್ನು ಗುರಿ ಸೇರಿಸಿದ್ದರೆ ಇಟಲಿ ಹಾಗೂ ಡೆನ್ಮಾರ್ಕ್ ತಲಾ 11 ಗೋಲು ಗಳಿಸಿವೆ. ಇಂಗ್ಲೆಂಡ್ ಎಂಟು ಗೋಲುಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಗೋಲು ಬಿಟ್ಟುಕೊಡದೇ ಕ್ಲೀನ್ ಶೀಟ್‌ ಗಳಿಸಿದ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ಗೆ ಅಗ್ರಸ್ಥಾನ. ಅದು ಐದು ಪಂದ್ಯಗಳಲ್ಲಿ ಗೋಲು ನೀಡದೆ ಎದುರಾಳಿ ತಂಡವನ್ನು ಕಾಡಿದೆ.

ಮೂರು ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದೆ ಇಟಲಿ ಎರಡನೇ ಸ್ಥಾನದಲ್ಲಿದೆ. ಚೆಂಡಿನ ಮೇಲೆ ಹಿಡಿತ ಮತ್ತು ನಿಖರ ಪಾಸಿಂಗ್ ಮೂಲಕವೂ ಸ್ಪೇನ್ ಈ ಬಾರಿ ಫುಟ್‌ಬಾಲ್‌ನ ಸೊಬಗನ್ನು ಹೆಚ್ಚಿಸಿದೆ. ಇಟಲಿ ಒಂದು ಪಂದ್ಯವನ್ನೂ ಸೋಲದೆ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದರೆ ಇಂಗ್ಲೆಂಡ್ ಗುಂಪು ಹಂತದಲ್ಲಿ ಎರಡು ಪಂದ್ಯ ಗೆದ್ದು ಈಗ ಫೈನಲ್ ಕನಸು ಕಾಣುತ್ತಿದೆ. ಡೆನ್ಮಾರ್ಕ್ ಮತ್ತು ಸ್ಪೇನ್ ಗುಂಪು ಹಂತದಲ್ಲಿ ಗೆದ್ದಿರುವುದು ತಲಾ ಒಂದೊಂದೇ ಪಂದ್ಯ. ಆದರೆ ಆಯಾ ಗುಂಪಿನಲ್ಲಿ ಗೋಲು ಗಳಿಕೆಯಲ್ಲಿ ಮುಂದೆ ಇದ್ದ ಕಾರಣ ರನ್ನರ್ ಅಪ್‌ ಆಗಿ ನಾಕೌಟ್ ಹಂತಕ್ಕೇರಿದ್ದವು.

ಚಾಂಪಿಯನ್‌ಷಿಪ್‌ನಲ್ಲಿ ಈವರೆಗೆ ಒಂದು ಗೋಲು ಕೂಡ ಬಿಟ್ಟುಕೊಡಲಿಲ್ಲ ಎಂಬುದು ಇಂಗ್ಲೆಂಡ್ ರಕ್ಷಣಾ ವಿಭಾಗದ ಸಾಮರ್ಥ್ಯವನ್ನು ಸಾಬೀತು‍ಪಡಿಸುತ್ತದೆ. ಗುಂಪು ಹಂತದಲ್ಲಿ ಎರಡೇ ಗೋಲು ಗಳಿಸಿದ್ದ ತಂಡ ನಾಕೌಟ್‌ ಘಟ್ಟದ ಎರಡು ಪಂದ್ಯಗಳಲ್ಲಿ ಒಟ್ಟು ಆರು ಗೋಲು ಗಳಿಸಿದೆ. ಶನಿವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಂತೂ ಉಕ್ರೇನ್ ವಿರುದ್ಧ ದ್ವಿತೀಯಾರ್ಧದಲ್ಲೇ ಮೂರು ಬಾರಿ ಬಲೆಯೊಳಗೆ ಚೆಂಡನ್ನು ಅಟ್ಟಿ 4–0ಯಿಂದ ಜಯ ಗಳಿಸಿದೆ.

ಸ್ಫೇನ್ ಗುಂಪು ಹಂತದಲ್ಲಿ ಆರು ಗೋಲು ಗಳಿಸಿದ್ದರೂ ಪ್ರಿಕ್ವಾರ್ಟರ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ಗಳ ಮೂಲಕವಷ್ಟೇ ಜಯ ಗಳಿಸಲು ಸಾಧ್ಯವಾಗಿದೆ. ಇಟಲಿಯದ್ದೂ ಸುಮಾರಾಗಿ ಇದೇ ಪರಿಸ್ಥಿತಿ. ಗುಂಪು ಹಂತದಲ್ಲಿ ಏಳು ಗೋಲುಗಳೊಂದಿಗೆ ಮಿಂಚಿದ್ದ ತಂಡ ಕ್ವಾರ್ಟರ್ ಫೈನಲ್‌ಗೇರಬೇಕಾದರೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಿತ್ತು. ಡೆನ್ಮಾರ್ಕ್ ಗುಂಪು ಹಂತದಲ್ಲಿ ಸಮಚಿತ್ತದ ಆಟ ಪ್ರದರ್ಶಿಸಿದೆ. ನಾಕೌಟ್ ಘಟ್ಟದಲ್ಲೂ 4–0 ಮತ್ತು 2–1ರ ಜಯದೊಂದಿಗೆ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.