ADVERTISEMENT

ತುಮ್ಹೆ ರುಕ್ನಾ ನಹಿ ಹೇ.. ಮಿಲ್ಖಾ ಹಿತವಚನ ಸ್ಮರಿಸಿಕೊಂಡ ಗುರುಪ್ರೀತ್‌ ಸಿಂಗ್‌

ಪಿಟಿಐ
Published 20 ಜೂನ್ 2021, 12:45 IST
Last Updated 20 ಜೂನ್ 2021, 12:45 IST
ಗುರುಪ್ರೀತ್ ಸಿಂಗ್‌ (ಬಲಬದಿ)
ಗುರುಪ್ರೀತ್ ಸಿಂಗ್‌ (ಬಲಬದಿ)   

ನವದೆಹಲಿ: ‘ನೀನು ನಿಲುವಂತಿಲ್ಲ, ಮುಂದೆ ಸಾಗಬೇಕು’ (ತುಮ್ಹೆ ರುಕ್ನಾ ನಹೀ ಹೇ) ಎಂದುಅಥ್ಲೀಟ್‌ ಮಿಲ್ಖಾ ಸಿಂಗ್‌ ನೀಡಿದ್ದ ಹಿತವಚನ ತಮಗೆ ಎಂದೆಂದೂ ಪ್ರೇರಣಾದಾಯಿ’ ಎಂದು ಭಾರತ ಫುಟ್‌ಬಾಲ್‌ ತಂಡದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಹೇಳಿದ್ದಾರೆ.

‘ಫ್ಲೈಯಿಂಗ್‌ ಸಿಖ್‌’ ಎಂದೇ ಹೆಸರಾಗಿದ್ದ ಮಿಲ್ಖಾ ಅವರ ಸಲಹೆ ತಾವು ಯುರೋಪಿನಲ್ಲಿ ಕಳೆದಿದ್ದ ದಿನಗಳ ವೇಳೆ ಹಲವು ಸವಾಲುಗಳನ್ನು ಮೆಟ್ಟಿನಿಲ್ಲಲು ನೆರವಾಯಿತು ಗುರುಪ್ರೀತ್‌ ಸಿಂಗ್‌ ನೆನಪು ಮಾಡಿಕೊಂಡಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಡಿದ್ದ ಮಿಲ್ಖಾ ಸಿಂಗ್‌ ಅವರು ಶುಕ್ರವಾರ ಚಂಡೀಗಡದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹಲವು ಕ್ರೀಡಾಪಟುಗಳು ಅವರಿಗೆ ನುಡಿನಮನ ಸಲ್ಲಿಸಿದ್ದರು.

ಗುರುಪ್ರೀತ್‌, 2015ರಲ್ಲಿ ಚಂಡೀಗಡದಲ್ಲಿ ತಮಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದನ್ನು ಮೆಲುಕು ಹಾಕಿಕೊಂಡಿದ್ದಾರೆ. ಅಲ್ಲಿ ಮಿಲ್ಖಾ ಸಿಂಗ್‌ ಮುಖ್ಯ ಅತಿಥಿಯಾಗಿದ್ದರು. ‘ಅವರು ನನಗೆ ಹೇಳಿದ್ದರು– ಪರಿಶ್ರಮಕ್ಕೆ ಪರ್ಯಾಯವಿಲ್ಲ. ನಾನು ಕೆಲ ಸಂದರ್ಭಗಳಲ್ಲಿ ತರಬೇತಿಯ ನಂತರ ರಕ್ತ ಕಾರಿದ್ದೂ ಇದೆ. ಆದರೆ ನೀನು ನಿಲಬಾರದು’ ಎಂದು ಮಿಲ್ಖಾ ಸಿಂಗ್‌ ನನಗೆ ಹೇಳಿದ್ದರು ಎಂದು ಗುರುಪ್ರೀತ್‌ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕೆಲವು ವರ್ಷ ಯುರೋಪಿನಲ್ಲಿದ್ದಾಗ ನಾನು ನಾರ್ವೆಯ ಎಫ್‌ಸಿ ಸ್ಟಾಬೆಕ್‌ ಕ್ಲಬ್‌ಗೆ ಆಡುತ್ತಿದ್ದೆ. ನನ್ನ ಆಟದ ಮಟ್ಟ ಸಾಬೀತುಪಡಿಸಿ ಆಡುವ ತಂಡದಲ್ಲಿ ಸ್ಥಾನ ಪಡೆಯಲು ದಿನವೂ ಹೆಣಗಾಡಬೇಕಿತ್ತು. ಹೊರದೇಶದಲ್ಲಿ ಇದು ದೊಡ್ಡ ಸವಾಲು. ಆಡಬೇಕೆಂಬ ಸ್ಫೂರ್ತಿ ಉಳಿಸಿಕೊಳ್ಳುವುದೇ ಕಠಿಣವಾಗಿತ್ತು. ಆದರೆ ನಾನು ‘ಫ್ಲೈಯಿಂಗ್‌ ಸಿಖ್‌’ ಮಿಲ್ಖಾ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಆ ಮಾತುಗಳು ನನ್ನ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದವು. ದಿನವೂ ಹೋರಾಟ ನಡೆಸಲು ಮುನ್ನುಗ್ಗುವ ಛಾತಿ ಮೂಡಿಸಿದವರು’ ಎಂದು 29 ವರ್ಷದ ಗೋಲ್‌ಕೀಪರ್‌ ಹೇಳಿದ್ದಾರೆ.

2014ರಲ್ಲಿ ನಾರ್ವೆಯ ಎಫ್‌ಸಿ ಸ್ಟಾಬೆಕ್‌ ತಂಡಕ್ಕೆ ಆಡುವ ಮೂಲಕ ಯುರೋಪ್‌ನ ಉನ್ನತ ಶ್ರೇಣಿಯ ಕ್ಲಬ್‌ ಪ್ರತಿನಿಧಿಸಿದ ಮೊದಲ ಭಾರತೀಯ ಫುಟ್‌ಬಾಲರ್‌ ಎಂಬ ಶ್ರೇಯಕ್ಕೆ ಗುರುಪ್ರೀತ್‌ ಪಾತ್ರರಾಗಿದ್ದರು.

‘ಮಿಲ್ಖಾ ಜೀವನಗಾಥೆ ಕೋಟ್ಯಂತರ ಭಾರತೀಯರನ್ನು ಪ್ರಭಾವಿಸಿದೆ. ಈಗ ಅವರಿಲ್ಲದಿದ್ದರೂ, ಅವರು ಮುಂದಿನ ತಲೆಮಾರಿಗೂ ಸ್ಪೂರ್ತಿಯಾಗುವರು’ ಎಂದು ಗುರುಪ್ರೀತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.