ADVERTISEMENT

ಫುಟ್‌ಬಾಲ್‌: ಬಾಂಗ್ಲಾ ಎದುರು ಭಾರತಕ್ಕೆ ಗೆಲುವು

ಪಿಟಿಐ
Published 7 ಜೂನ್ 2021, 17:30 IST
Last Updated 7 ಜೂನ್ 2021, 17:30 IST
ಚೆಂಡಿನೊಂದಿಗೆ ಮುನ್ನುಗ್ಗಿದ ಸುನಿಲ್ ಚೆಟ್ರಿ –ಟ್ವಿಟರ್ ಚಿತ್ರ
ಚೆಂಡಿನೊಂದಿಗೆ ಮುನ್ನುಗ್ಗಿದ ಸುನಿಲ್ ಚೆಟ್ರಿ –ಟ್ವಿಟರ್ ಚಿತ್ರ   

ದೋಹಾ: ಆರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಭಾರತ ತಂಡ ವಿಶ್ವಕಪ್‌ ಮತ್ತು ಏಷ್ಯಾಕಪ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಸೋಮವಾರ ಮೊದಲ ಜಯದ ಸವಿಯುಂಡಿತು. ಅಲ್ ಸದ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಎದುರು ನಡೆದ ಪಂದ್ಯದಲ್ಲಿ ನಾಯಕ ಸುನಿಲ್ ಚೆಟ್ರಿ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ 2–0 ಅಂತರದಲ್ಲಿ ಜಯ ಗಳಿಸಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 105ನೇ ಸ್ಥಾನದಲ್ಲಿರುವ ಭಾರತ 184ನೇ ಸ್ಥಾನದಲ್ಲಿರುವ ಬಾಂಗ್ಲಾವನ್ನು ಆರಂಭದಿಂದಲೇ ಕಾಡಿತು. ಮೊದಲಾರ್ಧದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಯಶಸ್ಸು ಕಂಡಿತು. 79ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಮುನ್ನಡೆ ಗಳಿಸಿಕೊಟ್ಟರು.

ಎಡಭಾಗದಲ್ಲಿ ಎದುರಾಳಿ ತಂಡದ ಆಟಗಾರರು ಇಲ್ಲದೇ ಇದ್ದುದನ್ನು ಗಮನಿಸಿದ ಆಶಿಕ್ ಕುರುಣಿಯನ್ ಚೆಂಡನ್ನು ನಿಯಂತ್ರಿಸಿ ಮಿಂಚಿನ ವೇಗದಲ್ಲಿ ಮುಂದೆ ಸಾಗಿದರು. ನಂತರ ನಾಯಕನತ್ತ ಅಟ್ಟಿದರು. ಸುನಿಲ್ ಚೆಟ್ರಿ ಸುಲಭವಾಗಿ ಗುರಿ ಮುಟ್ಟಿಸಿದರು. ಕುರುಣಿಯನ್ ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದಿದ್ದರು.

ADVERTISEMENT

ಇಂಜುರಿ ಅವಧಿಯಲ್ಲಿ (90+2) ಸುನಿಲ್ ಚೆಟ್ರಿ ಮತ್ತೊಮ್ಮೆ ಜಾದೂ ಮಾಡಿದರು. ಬಲಭಾಗದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸುರೇಶ್ ವಾಂಗ್ಜಂ ನಿಖರ ಪಾಸ್ ಮೂಲಕ ನಾಯಕನಿಗೆ ನೀಡಿದರು. ಎದುರಾಳಿ ತಂಡದ ರಕ್ಷಣಾ ವಿಭಾಗದವರ ಮಧ್ಯದಲ್ಲೇ ಚೆಟ್ರಿ ಚೆಂಡನ್ನು ಗೋಲುಪೆಟ್ಟಿಗೆಯ ಬಲಮೂಲೆಗೆ ಗಾಳಿಯಲ್ಲಿ ತೂರಿಬಿಟ್ಟರು. ಗೋಲ್‌ಕೀಪರ್ ತೋಪು ಬರ್ಮನ್‌ ಡೈವ್ ಮಾಡಿ ತಡೆಯಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ.

ವಿಶ್ವಕಪ್ ಅರ್ಹತೆಯಿಂದ ಭಾರತ ಈಗಾಗಲೇ ಹೊರಬಿದ್ದಿದೆ. ಈ ಗೆಲುವಿನೊಂದಿಗೆ ಏಷ್ಯಾಕಪ್ ಟೂರ್ನಿಗೆ ಅರ್ಹತೆ ಗಳಿಸುವ ಮೂರನೇ ಸುತ್ತಿನ ಪಂದ್ಯಗಳಲ್ಲಿ ಸ್ಪರ್ಧಿಸುವ ಭಾರತದಕನಸು ಜೀವಂತವಾಗಿ ಉಳಿದಿದೆ. ಈ ಹಿಂದಿನ ಆರು ಪಂದ್ಯಗಳಲ್ಲಿ ತಂಡ ಮೂರು ಪಾಯಿಂಟ್ ಮಾತ್ರ ಗಳಿಸಿ ‘ಇ’ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು.

ಸೋಮವಾರದ ಗೆಲುವಿನೊಂದಿಗೆ ವಿಶ್ವಕಪ್ ಅರ್ಹತಾ ಟೂರ್ನಿಯೊಂದರಲ್ಲಿ ಭಾರತ ಆರು ವರ್ಷಗಳ ನಂತರ ಮೊದಲ ಜಯ ಗಳಿಸಿದಂತಾಗಿದೆ. ವಿದೇಶದಲ್ಲಿ ಇದು 20 ವರ್ಷಗಳ ನಂತರ ಮೊದಲ ಜಯವಾಗಿದೆ. 2015ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗುವಾಮ್ ಎದುರು ಭಾರತ 1–0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಬಾಂಗ್ಲಾ ವಿರುದ್ಧ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಇದು ಭಾರತದ ಮೂರನೇ ಜಯವಾಗಿದೆ. 1985ರಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಭಾರತ 2–1ರಲ್ಲಿ ಗೆದ್ದಿತ್ತು.

ಇಲ್ಲಿ ಗಳಿಸಿದ ಎರಡು ಗೋಲುಗಳೊಂದಿಗೆ ಈಗ ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಗೋಲು ಗಳಿಸಿರುವವರ ಪಟ್ಟಿಯಲ್ಲಿ ಸುನಿಲ್ ಚೆಟ್ರಿ ಎರಡನೇ ಸ್ಥಾನಕ್ಕೇರಿದರು. ಅವರ ಖಾತೆಯಲ್ಲಿ ಈಗ 74 ಗೋಲುಗಳಿವೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 103 ಗೋಲು ಗಳಿಸಿದ್ದು ಮೂರನೇ ಸ್ಥಾನದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲಿ ಮಬ್‌ಖೌತ್‌ 73 ಗೋಲು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.