ADVERTISEMENT

ಮಾಂತ್ರಿಕ ಸ್ಟ್ರೈಕರ್‌ ಗೇರ್ಡ್ ಮುಲ್ಲರ್ ಇನ್ನಿಲ್ಲ

ಏಜೆನ್ಸೀಸ್
Published 15 ಆಗಸ್ಟ್ 2021, 14:34 IST
Last Updated 15 ಆಗಸ್ಟ್ 2021, 14:34 IST
ಗೇರ್ಡ್ ಮುಲ್ಲರ್ –ಎಎಫ್‌ಪಿ ಚಿತ್ರ
ಗೇರ್ಡ್ ಮುಲ್ಲರ್ –ಎಎಫ್‌ಪಿ ಚಿತ್ರ   

ಬರ್ಲಿನ್‌: ಜರ್ಮನಿಯ ಮಾಜಿ ಫುಟ್‌ಬಾಲ್ ಆಟಗಾರ ಗೇರ್ಡ್ ಮುಲ್ಲರ್ (75) ಭಾನುವಾರ ಮುಂಜಾನೆ ನಿಧನರಾದರು ಎಂದು ಅವರು ಈ ಹಿಂದೆ ಆಡಿದ್ದ ಬಯೇನ್ ಮ್ಯೂನಿಕ್ ಕ್ಲಬ್ ತಿಳಿಸಿದೆ. ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.

ವೆಸ್ಟ್ ಜರ್ಮನಿಗಾಗಿ 62 ಪಂದ್ಯಗಳಲ್ಲಿ 68 ಗೋಲು ಗಳಿಸಿರುವ ಅವರು1960 ಮತ್ತು 70ರ ದಶಕಗಳಲ್ಲಿ ಬಂಡೆಸ್‌ಲೀಗಾದಲ್ಲಿ ಬಯೇನ್ ಮ್ಯೂನಿಕ್‌ಗಾಗಿ 365 ಗೋಲುಗಳನ್ನು ಗಳಿಸಿದ್ದರು.

ವೆಸ್ಟ್ ಜರ್ಮನಿ ಮತ್ತು ಬಯೇನ್ ಮ್ಯೂನಿಕ್‌ಗಾಗಿ ಗೋಲು ಮಳೆ ಸುರಿಸಿದ್ದ ಗೇರ್ಡ್ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಎಫ್‌ಸಿ ಬಯೇನ್‌ ಮ್ಯೂನಿಕ್‌ಗಾಗಿ ಒಟ್ಟಾರೆ 607 ಪಂದ್ಯಗಳಲ್ಲಿ 566 ಗೋಲು ಗಳಿಸಿರುವುದು ಅವರ ಅಮೋಘ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ADVERTISEMENT

ಬಂಡೆಸ್‌ಲೀಗಾ ಟೂರ್ನಿಯಲ್ಲಿ ಬಯೇನ್ ಮ್ಯೂನಿಕ್‌ ನಾಲ್ಕು ಬಾರಿ ಪ್ರಶಸ್ತಿ ಗೆದ್ದಾಗಲೂ ಗೇರ್ಡ್ ತಂಡದಲ್ಲಿದ್ದರು.1974ರಿಂದ 1976ರ ವರೆಗೆ ಯುರೋಪಿಯನ್ ಕಪ್‌ (ಈಗಿನ ಚಾಂಪಿಯನ್ಸ್ ಲೀಗ್‌) ಪ್ರಶಸ್ತಿ ಗೆದ್ದಾಗಲೂ ಅವರು ತಂಡದಲ್ಲಿದ್ದರು. 1971ರ ಬುಂಡೆಸ್‌ಲೀಗಾ ಟೂರ್ನಿಯ ಒಂದೇ ಆವೃತ್ತಿಯಲ್ಲಿ 40 ಗೋಲು ಗಳಿಸಿ ನಿರ್ಮಿಸಿದ್ದ ದಾಖಲೆ ಈ ವರ್ಷದ ವರೆಗೂ ಮುರಿಯದೇ ಉಳಿದಿತ್ತು. ಕಳೆದ ಮೇ ತಿಂಗಳಲ್ಲಿ ಬಯೇಮ್ ಮ್ಯೂನಿಕ್ ಸ್ಟ್ರೈಕರ್ ರಾಬರ್ಟ್‌ ಲೆವಂಡೊವ್‌ಸ್ಕಿ 41 ಗೋಲು ಗಳಿಸಿದ್ದಾರೆ.

ವೆಸ್ಟ್ ಜರ್ಮನಿಗಾಗಿ 1972ರಲ್ಲಿ ಯುರೋಪಿಯನ್‌ ಚಾಂಪಿಯನ್‌ಷಿಪ್‌ ಮತ್ತು 1974ರಲ್ಲಿ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದರು.ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಫೈನಲ್‌ನಲ್ಲಿ ಜಯದ ಗೋಲು ಗಳಿಸಿ ಮಿಂಚಿದ್ದರು.

ನಿವೃತ್ತಿ ನಂತರ ಬಯೇನ್ ಮ್ಯೂನಿಕ್ ಕ್ಲಬ್‌ನ ಯುವ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.