ADVERTISEMENT

ಸ್ಥಳೀಯ ಅಂತರ ತಂಡಗಳ ಟೂರ್ನಿ: ಮರ್ಫಿ ಟೌನ್ ತಂಡಕ್ಕೆ ಪ್ರಶಸ್ತಿ

ಕೆಎಸ್‌ಎಫ್‌ಎ–ಬಿಡಿಎಫ್‌ಎ ಫುಟ್‌ಬಾಲ್ ಟೂರ್ನಿಗಳು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 14:33 IST
Last Updated 15 ಆಗಸ್ಟ್ 2021, 14:33 IST
ಯೂತ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಮರ್ಫಿ ಟೌನ್ ಫುಟ್‌ಬಾಲ್ ತಂಡ
ಯೂತ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಮರ್ಫಿ ಟೌನ್ ಫುಟ್‌ಬಾಲ್ ತಂಡ   

ಬೆಂಗಳೂರು: ಮರ್ಫಿ ಟೌನ್‌ ತಂಡವು ರಾಜ್ಯ ಫುಟ್‌ಬಾಲ್ ಸಂಸ್ಥೆ ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಯ ಸ್ಥಳೀಯ ಅಂತರ ತಂಡಗಳ ಟೂರ್ನಿಯಲ್ಲಿ ಹಿರಿಯರ ಮತ್ತು ಯೂತ್‌ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಭಾನುವಾರ ಇಲ್ಲಿ ನಡೆದ ಯೂತ್ ವಿಭಾಗದ ಫೈನಲ್‌ನಲ್ಲಿ ಮರ್ಫಿ ಟೌನ್‌ ಪೆನಾಲ್ಟಿ ಶೂಟೌಟ್‌ ಮೂಲಕ ಗೌತಮಪುರ ಎಫ್‌ಸಿಯನ್ನು ಮಣಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಹೊಡೆದಿದ್ದವು. ಮರ್ಫಿ ಪರ ಎಬನೆಜರ್‌ (26ನೇ ನಿಮಿಷ, 42ನಿ.) ತಂಡದ ಎರಡೂ ಗೋಲು ದಾಖಲಿಸಿದರು. ಗೌತಮಪುರ ತಂಡದ ವಿಘ್ನೇಶ್‌ (8ನೇ ನಿ.) ಮತ್ತು ಓಂಪ್ರಕಾಶ್‌ (19ನೇ ನಿ.) ಯಶಸ್ವಿಯಾದರು.

ಪೆನಾಲ್ಟಿ ಶೂಟೌಟ್‌ನಲ್ಲಿ ಮರ್ಫಿ ಮೂರು ಗೋಲು ಗಳಿಸಿದರೆ ಎದುರಾಳಿ ತಂಡವು ಒಂದರಲ್ಲಿ ಮಾತ್ರ ಯಶಸ್ಸು ಕಂಡಿತು.

ADVERTISEMENT

ಹಿರಿಯರ ವಿಭಾಗದ ಫೈನಲ್‌ನಲ್ಲಿ ಮರ್ಫಿ ಟೌನ್‌ ತಂಡವು ಶಾಂತಿನಗರ ತಂಡವನ್ನು ಸೋಲಿಸಿತು. ಈ ಪಂದ್ಯವೂ ಕೂಡ ಪೆನಾಲ್ಟಿ ಶೂಟೌಟ್‌ನಲ್ಲಿ ಅಂತ್ಯವಾಯಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲು ದಾಖಲಿಸಿದ್ದವು. ಮರ್ಫಿ ಪರ ಸತೀಶ್‌ (2 ಮತ್ತು 10 ನೇ ನಿ.) ಮತ್ತು ಶಾಂತಿನಗರ ಪರ ಲಾರೆನ್ಸ್ (14ನೇ ನಿ.) ಮತ್ತು ಹರೀಶ್ (24ನೇ ನಿ.) ಕಾಲ್ಚಳಕ ತೋರಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಮರ್ಫಿ ಐದು ಮತ್ತು ಶಾಂತಿನಗರ ತಂಡ ನಾಲ್ಕು ಗೋಲು ಹೊಡೆದವು.

ರೊನಾಲ್ಡೊಎಫ್‌ಸಿ ಚಾಂಪಿಯನ್‌: ಐಜಲ್‌ ಹಾಗೂ ಶರತ್‌ ಕುಮಾರ್ ಗಳಿಸಿದ ತಲಾ ಎರಡು ಗೋಲುಗಳ ನೆರವಿನಿಂದ ರೊನಾಲ್ಡೊ ಎಫ್‌ಸಿ ತಂಡವು ‘ಸಿ‘ ಡಿವಿಷನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಆ ತಂಡವು 4–0ಯಿಂದ ಬೆಂಗಳೂರು ಪ್ಯಾಂಥರ್ಸ್‌ ತಂಡವನ್ನು ಸೋಲಿಸಿತು.

ಶರತ್ ಕುಮಾರ್‌ 11 ಮತ್ತು 41ನೇ ನಿಮಿಷ ಮತ್ತು ಐಜಲ್‌ 22 ಮತ್ತು 38ನೇ ನಿಮಿಷದಲ್ಲಿ ವಿಜೇತ ತಂಡದ ಪರ ಕಾಲ್ಚಳಕ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.