ADVERTISEMENT

ಯೂರೊ ಕಪ್ ಫುಟ್‌ಬಾಲ್ ಟೂರ್ನಿ: ಫ್ರಾನ್ಸ್‌ಗೆ ಮಣಿದ ಜರ್ಮನಿ

ಏಜೆನ್ಸೀಸ್
Published 16 ಜೂನ್ 2021, 12:44 IST
Last Updated 16 ಜೂನ್ 2021, 12:44 IST
ಜರ್ಮನಿಯ ಮ್ಯಾಟ್‌ ಹಮ್ಮೆಲ್ಸ್ (ಎಡ) ಮತ್ತು ಫ್ರಾನ್ಸ್‌ಬ ಕಿಲಿಯನ್ ಬಾಪೆ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ
ಜರ್ಮನಿಯ ಮ್ಯಾಟ್‌ ಹಮ್ಮೆಲ್ಸ್ (ಎಡ) ಮತ್ತು ಫ್ರಾನ್ಸ್‌ಬ ಕಿಲಿಯನ್ ಬಾಪೆ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ   

ಮ್ಯೂನಿಚ್‌ : ಮ್ಯಾಟ್ಸ್ ಹಮ್ಮೆಲ್ಸ್ ನೀಡಿದ ‘ಉಡುಗೊರೆ ಗೋಲು‘ ಫ್ರಾನ್ಸ್ ತಂಡದ ಗೆಲುವಿಗೆ ಕಾರಣವಾಯಿತು. ಮಂಗಳವಾರ ರಾತ್ರಿ ಇಲ್ಲಿ ನಡೆದ ಯೂರೊ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಫ್ರಾನ್ಸ್‌ 1–0 ಅಂತರದಿಂದ ಜರ್ಮನಿ ವಿರುದ್ಧ ಜಯಿಸಿ ಶುಭಾರಂಭ ಮಾಡಿತು.

ರಾಷ್ಟ್ರೀಯ ತಂಡಕ್ಕೆ ಮರಳಿದ್ದ ಜರ್ಮನಿಯ ಅನುಭವಿ ಡಿಫೆಂಡರ್‌ ಮ್ಯಾಟ್ಸ್ ಹಮ್ಮೆಲ್ಸ್ ತಂಡಕ್ಕೆ ಮುಳುವಾದರು.

‘ಎಫ್‌’ ಗುಂಪಿನ ಪಂದ್ಯದ 20ನೇ ನಿಮಿಷದಲ್ಲಿ ಚೆಂಡು ತಡೆಯುವ ಯತ್ನದಲ್ಲಿ ಮ್ಯಾಟ್ಸ್ ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಸೇರಿಸಿದರು.

ADVERTISEMENT

ಮ್ಯಾಟ್ಸ್ ಅವರ ನಾಯಕತ್ವದ ಗುಣಗಳನ್ನು ಮನಗಂಡಿದ್ದ ಕೋಚ್ ಜೋಕಿಮ್ ಲೊ ಅವರನ್ನು ತಂಡಕ್ಕೆ ಮರಳುವಂತೆ ಮಾಡಿದ್ದರು.

ಜರ್ಮನಿ ತಂಡವು ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಆರಂಭಿಕ ಪಂದ್ಯದಲ್ಲೇ ಸೋಲು ಅನುಭವಿಸಿದೆ.

ಮಂಗಳವಾರ ರಾತ್ರಿ ನಡೆದ ‘ಇ‘ ಗುಂಪಿನ ಹಣಾಹಣಿಯಲ್ಲಿ ಸ್ಪೇನ್‌ ಮತ್ತು ಸ್ವೀಡನ್ ತಂಡಗಳು ಗೋಲುರಹಿತ ಡ್ರಾ ಸಾಧಿಸಿದವು.

ಕೋಪಾ ಅಮೆರಿಕ: 52 ಮಂದಿಗೆ ಕೊರೊನಾ ಸೋಂಕು: ಕೋಪಾ ಅಮೆರಿಕ ಫುಟ್‌ಬಾಲ್‌ ಲೀಗ್‌ಗೆ ಸಂಬಂಧಿಸಿದ 33 ಆಟಗಾರರು ಸೇರಿದಂತೆ 52 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಈ ವಿಷಯ ತಿಳಿಸಿದೆ.

ಈ ಮೊದಲು 41 ಸೋಂಕು ಪ್ರಕರಣಗಳು ಇದ್ದವು. ಈಗ ಟೂರ್ನಿಗಾಗಿ ನೇಮಿಸಿರುವ 19 ಸಿಬ್ಬಂದಿಯಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸೋಂಕು ದೃಢಪಟ್ಟವರಲ್ಲಿ ಬೊಲಿವಿಯಾ ಆಟಗಾರ ಮಾರ್ಸೆಲೊ ಮಾರ್ಟಿನ್ಸ್ ಕೂಡ ಒಬ್ಬರಾಗಿದ್ದಾರೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ. ಸೋಂಕು ಹರಡಲು ದಕ್ಷಿಣ ಅಮೆರಿಕ ಫುಟ್‌ಬಾಲ್ ಮಂಡಳಿಯೇ (ಕಾನ್‌ಮೆಬೊಲ್) ಕಾರಣವೆಂದು ಮಾರ್ಟಿನ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.