ADVERTISEMENT

ಸ್ಕಾಟ್ಲೆಂಡ್‌ಗೆ ಸೋಲುಣಿಸಿದ ‘ಜೆಕ್‌’

ಏಜೆನ್ಸೀಸ್
Published 14 ಜೂನ್ 2021, 16:16 IST
Last Updated 14 ಜೂನ್ 2021, 16:16 IST
ಗೋಲು ಗಳಿಸಿ ಸಂಭ್ರಮಿಸಿದ ಪ್ಯಾಟ್ರಿಕ್ ಶೀಕ್ –ಎಎಫ್‌ಪಿ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಪ್ಯಾಟ್ರಿಕ್ ಶೀಕ್ –ಎಎಫ್‌ಪಿ ಚಿತ್ರ   

ಗ್ಲಾಸ್ಗೊ: ಹತ್ತು ನಿಮಿಷಗಳ ಅವಧಿಯಲ್ಲಿ ಪ್ಯಾಟ್ರಿಕ್ ಶೀಕ್ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ಅವರ ಅಮೋಘ ಆಟದ ನೆರವಿನಿಂದ ಜೆಕ್ ಗಣರಾಜ್ಯ ತಂಡ ಯೂರೊ ಕಪ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

ಸ್ಕಾಟ್ಲೆಂಡ್‌ನ ಹ್ಯಾಂಪ್‌ಡೆನ್ ಪಾರ್ಕ್ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್‌ ವಿರುದ್ಧ ಜೆಕ್ ಗಣರಾಜ್ಯ 2–0 ಅಂತರದ ಜಯ ಸಾಧಿಸಿತು. ಪ್ರಥಮಾರ್ಧ ಮುಕ್ತಾಯದ ಹಂತದಲ್ಲಿದ್ದಾಗ 42ನೇ ನಿಮಿಷದಲ್ಲಿ ಹೆಡರ್ ಮೂಲಕ ಮೊದಲ ಗೋಲು ಗಳಿಸಿದ ಪ್ಯಾಟ್ರಿಕ್ 52ನೇ ನಿಮಿಷದಲ್ಲಿ ಅದ್ಭುತ ಕಾಲ್ಚಳಕದ ಮೂಲಕ ಎದುರಾಳಿ ಡಿಫೆಂಡರ್‌ಗಳನ್ನು ವಂಚಿಸಿ ಮೊತ್ತೊಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

23 ವರ್ಷಗಳ ನಂತರ ಸ್ಕಾಟ್ಲೆಂಡ್‌ ಪ್ರಮುಖ ಟೂರ್ನಿಯೊಂದಕ್ಕೆ ಅರ್ಹತೆ ಗಳಿಸಿತ್ತು. ಆದರೆ ಮೊದಲ ಪಂದ್ಯದಲ್ಲೇ ಸೋಲುವ ಮೂಲಕ ಅದರ ಕನಸಿಗೆ ಪೆಟ್ಟು ಬಿದ್ದಿದೆ. ಮುಂದಿನ ಪಂದ್ಯದಲ್ಲಿ ಅದು ಬಲಿಷ್ಠ ಇಂಗ್ಲೆಂಡ್ ಎದುರು ಸೆಣಸಲಿದೆ.

ADVERTISEMENT

ಕೋಪಾ ಅಮೆರಿಕ: ಬ್ರೆಜಿಲ್ ಶುಭಾರಂಭ

ಸಾವೊ ಪೌಲೊ (ಎಪಿ): ವೆನೆಜುವೆಲಾವನ್ನು ಏಕಪಕ್ಷೀಯವಾಗಿ ಮಣಿಸಿದ ಬ್ರೆಜಿಲ್ ತಂಡ ಕೋಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮೇನ್ ಗರಿಂಚಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಬ್ರೆಜಿಲ್ 3–0ಯಿಂದ ಗೆಲುವು ಸಾಧಿಸಿತು.

ಮೌರಿನ್ಹೊಸ್‌, ನೇಮರ್ ಮತ್ತು ಗ್ಯಾಬ್ರಿಯಲ್ ಬಾರ್ಬೊಸಾ ಕ್ರಮವಾಗಿ 23, 63 ಮತ್ತು 89ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.