ADVERTISEMENT

Tokyo Olympics | ಫುಟ್‌ಬಾಲ್‌: ಪ್ರಶಸ್ತಿ ಸುತ್ತಿಗೆ ಬ್ರೆಜಿಲ್‌–ಸ್ಪೇನ್‌

ಏಜೆನ್ಸೀಸ್
Published 3 ಆಗಸ್ಟ್ 2021, 19:28 IST
Last Updated 3 ಆಗಸ್ಟ್ 2021, 19:28 IST
ಹೆಡರ್ ಮಾಡುವ ಯತ್ನದಲ್ಲಿ ಮೆಕ್ಸಿಕೊದ ಲೂಯಿಸ್ ರೊಮೊ (ಎಡ) ಹಾಗೂ ಬ್ರೆಜಿಲ್‌ ಡ್ಯಾನಿ ಅಲ್ವೆಸ್            – ರಾಯಿಟರ್ಸ್ ಚಿತ್ರ
ಹೆಡರ್ ಮಾಡುವ ಯತ್ನದಲ್ಲಿ ಮೆಕ್ಸಿಕೊದ ಲೂಯಿಸ್ ರೊಮೊ (ಎಡ) ಹಾಗೂ ಬ್ರೆಜಿಲ್‌ ಡ್ಯಾನಿ ಅಲ್ವೆಸ್ – ರಾಯಿಟರ್ಸ್ ಚಿತ್ರ   

ಟೋಕಿಯೊ: ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿರುವ ಒಲಿಂಪಿಕ್ಸ್ ಹಾಲಿ ಚಾಂಪಿಯನ್ ಬ್ರೆಜಿಲ್ ತಂಡವು ಟೋಕಿಯೊ ಕ್ರೀಡಾಕೂಟದ ಫುಟ್‌ಬಾಲ್‌ನಲ್ಲಿ ಫೈನಲ್ ತಲುಪಿದೆ. ಕಶಿಮಾ ಅಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಆ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 4–1ರಿಂದ ಮೆಕ್ಸಿಕೊ ತಂಡವನ್ನು ಪರಾಭವಗೊಳಿಸಿತು.

ಪಂದ್ಯದ 120 ನಿಮಿಷಗಳ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಿರಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗಿತ್ತು. ಇಲ್ಲಿ ಬ್ರೆಜಿಲ್ ಆಟಗಾರರು ನಾಲ್ಕು ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸಿದರೆ, ಮೆಕ್ಸಿಕೊ ಒಂದು ಗೋಲು ದಾಖಲಿಸುವಲ್ಲಿ ಮಾತ್ರ ಯಶಸ್ವಿಯಾಯಿತು.

ಎದುರಾಳಿಗಳ ಪ್ರಯತ್ನಗಳನ್ನು ವಿಫಲಗೊಳಿಸಿದ ಬ್ರೆಜಿಲ್ ಗೋಲ್‌ಕೀ‍ಪರ್ ಸ್ಯಾಂಟೊಸ್‌ ಅವರು ತಂಡಕ್ಕೆ ಆಪತ್ಬಾಂಧವರಾದರು.

ADVERTISEMENT

ಬ್ರೆಜಿಲ್ ಪರ ಡ್ಯಾನಿ ಅಲ್ವೆಸ್‌, ಗೇಬ್ರಿಯಲ್‌ ಮಾರ್ಟಿನೆಲ್ಲಿ, ಬ್ರೂನೊ ಗಿಮಾರೆಸ್‌ ಮತ್ತು ರೇನೈರ್ ಶೂಟೌಟ್‌ನಲ್ಲಿ ಕಾಲ್ಚಳಕ ತೋರಿದರು. ಸ್ಪೇನ್ ಪರ ಜೋಹಾನ್ ವಾಸ್ಕೆಜ್ ಯಶಸ್ವಿಯಾದರು.

ಮೆಕ್ಸಿಕೊ ತಂಡವು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತ್ತು.

ಸೆಮಿಫೈನಲ್‌ನ ಇನ್ನೊಂದು ಹಣಾಹಣಿಯಲ್ಲಿ 1–0ಯಿಂದ ಆತಿಥೇಯ ಜಪಾನ್ ತಂಡವನ್ನು ಮಣಿಸಿದ ಸ್ಪೇನ್‌ ಫೈನಲ್‌ ಪ್ರವೇಶಿಸಿತು. ಸ್ಪೇನ್ ಪರ 115ನೇ ನಿಮಿಷದಲ್ಲಿ ಅಸೆನ್ಸಿಯೊ ಗೋಲು ದಾಖಲಿಸಿದರು.

ಫೈನಲ್ ಪಂದ್ಯ ಶನಿವಾರ ಯೊಕೊಹಾಮ ಕ್ರೀಡಾಂಗಣದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.