ADVERTISEMENT

Euro Cup| ಚಾಂಪಿಯನ್ ಇಟಲಿಗೆ ತವರಿನಲ್ಲಿ ರೋಮಾಂಚನ

ಯೂರೊ ಕಪ್: ವೇಗದ ಗೋಲು ಗಳಿಸಿದ ಲ್ಯೂಕ್ ಶಾ; ತಿರುವು ನೀಡಿದ ಲಿಯೊನಾರ್ಡೊ ಬೊನುಚಿ

ಏಜೆನ್ಸೀಸ್
Published 12 ಜುಲೈ 2021, 11:30 IST
Last Updated 12 ಜುಲೈ 2021, 11:30 IST
ಪ್ರಶಸ್ತಿ ಗೆದ್ದ ಇಟಲಿ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ
ಪ್ರಶಸ್ತಿ ಗೆದ್ದ ಇಟಲಿ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ   

ರೋಮ್: ರಾಜಧಾನಿಯಲ್ಲಿ ಕಾಲೂರಿದ ಕೂಡಲೇ ಇಟಲಿ ನಾಯಕ ಜಾರ್ಜೊ ಚಿಲ್ಲಿನಿ ಆಕಾಶದೆಡೆಗೆ ಪ್ರಶಸ್ತಿಯನ್ನು ಎತ್ತಿ ಹಿಡಿದು ಭಾವುಕರಾದರು. ಸಹ ಆಟಗಾರರು ಮತ್ತು ಸುತ್ತ ಸೇರಿದ್ದವರು ಸಂಭ್ರಮದಿಂದ ನಲಿದಾಡಿದರು. ಎಲ್ಲಲ್ಲೂ ತ್ರಿವರ್ಣ ಧ್ವಜಗಳು ಹಾರಾಡಿದರೆ ಬಣ್ಣಬಣ್ಣದ ಪಟಾಕಿಗಳು ಪುಳಕ ನೀಡಿದವು.

ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿದ ಇಟಲಿ ತಂಡ ಸೋಮವಾರ ತವರಿಗೆ ಬಂದಿಳಿಯಿತು. ರೋಮ್‌ ಸೇರಿದಂತೆ ಇಟಲಿಯಾದ್ಯಂತ ಭಾನುವಾರ ರಾತ್ರಿ ಆರಂಭವಾದ ಖುಷಿಯ ಆಚರಣೆ ಸೋಮವಾರವೂ ಮುಂದುವರಿಯಿತು.

ಫೈನಲ್ ಪಂದ್ಯದಲ್ಲಿ ಹ್ಯಾರಿ ಕೇನ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಇಟಲಿ ಪೆನಾಲ್ಟಿ ಶೂಔಟ್‌ನಲ್ಲಿ 3–2ರ ಜಯ ಸಾಧಿಸಿತ್ತು. ಎರಡನೇ ನಿಮಿಷದಲ್ಲಿ ಲ್ಯೂಕ್ ಶಾ ಗಳಿಸಿದ ಗೋಲಿನ ಬಲದಿಂದ ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್‌ ಮುಂದಿನ ಒಂದು ತಾಸಿನ ವರೆಗೂ ಎದುರಾಳಿಗಳನ್ನು ಕಟ್ಟಿಹಾಕಿ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ 67ನೇ ನಿಮಿಷದಲ್ಲಿ ಲಿಯೊನಾರ್ಡೊ ಬೊನುಚಿ ಚೆಂಡನ್ನು ಗುರಿ ಮುಟ್ಟಿಸಿ ಇಟಲಿಗೆ ಸಮಬಲ ಸಾಧಿಸಿಕೊಟ್ಟರು.

ADVERTISEMENT

ನಿಗದಿತ ಅವಧಿಯಲ್ಲಿ ಪಂದ್ಯ 1–1ರಲ್ಲಿ ಸಮ ಆಗಿತ್ತು. ಹೆಚ್ಚುವರಿ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ. ಆದಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು. ಇಟಲಿ ಮೂರು ಬಾರಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರೆ ಇಂಗ್ಲೆಂಡ್‌ ಎರಡು ಗೋಲು ಮಾತ್ರ ಗಳಿಸಿತು. ಈ ಮೂಲಕ 55 ವರ್ಷಗಳ ನಂತರ ಪ್ರಮುಖ ಟೂರ್ನಿಯೊಂದರ ಪ್ರಶಸ್ತಿ ಗಳಿಸುವ ಇಂಗ್ಲೆಂಡ್ ಆಸೆ ಕಮರಿತು. ಇಟಲಿಗೆ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಇದು ಎರಡನೇ ಪ್ರಶಸ್ತಿ.

ಎರಡನೇ ನಿಮಿಷದಲ್ಲಿ ಕೀರನ್ ಟ್ರಿಪಿಯಾರ್ ದೂರದಿಂದ ನೀಡಿದ ಪಾಸ್‌ಗೆ ಕಾಲೊಡ್ಡಿ ಶಾ ಮಿಂಚಿನ ವೇಗದ ಗೋಲು ಗಳಿಸಿದರು. ಟೂರ್ನಿಯ ಫೈನಲ್‌ ಪಂದ್ಯವೊಂದರ ಅತ್ಯಂತ ವೇಗದ ಗೋಲಾಗಿತ್ತು. ಅರ್ಧ ಜಿದ್ದಾಜಿದ್ದಿಯ ಹೋರಾಟದ ನಂತರ ಇಟಲಿ ಹಚ್ಚು ಆಕ್ರಮಣಕ್ಕೆ ಮುಂದಾಯಿತು. ಆದರೆ ಇಂಗ್ಲೆಂಡ್ ಗೋಲ್‌ಕೀಪರ್ ಫೆಡರಿಕೊ ಚೀಜಾ ಅವರ ಅತ್ಯುತ್ತಮ ‘ಸೇವ್‌’ಗಳು ಪ್ರವಾಸಿ ತಂಡದ ಪ್ರಯತ್ನಗಳನ್ನು ವಿಫಲಗೊಳಿಸಿದವು. ಆದರೆ ದ್ವಿತೀಯಾರ್ಧದಲ್ಲಿ ತಂಡ ಯಶಸ್ಸು ಕಂಡಿತು. ಹೆಡರ್ ಮೂಲಕ ಬೊನುಚಿ ಗಳಿಸಿದ ಗೋಲು ಪಂದ್ಯಕ್ಕೆ ತಿರುವು ನೀಡಿತು.

ಇಂಗ್ಲೆಂಡ್‌ಗೆ ಶೂಟೌಟ್‌ಕಾಟ

ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅರಂಭದಲ್ಲೇ ಗೋಲು ಗಳಿಸಿ ಮುನ್ನಡೆ ಸಾಧಿಸಿದ್ದರೂ ಪೆನಾಲ್ಟಿ ಶೂಟೌಟ್‌ ಇಂಗ್ಲೆಂಡ್ ಕನಸನ್ನು ಭಗ್ನಗೊಳಿಸಿತು. ಈ ಹಿಂದೆಯೂ ಪ್ರಮುಖ ಟೂರ್ನಿಗಳಲ್ಲಿ ಇಂಗ್ಲೆಂಡ್‌ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದೆ.

* 1990ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಂಡ 4–3ರಲ್ಲಿ ಜರ್ಮನಿಗೆ ಮಣಿದಿತ್ತು. ನಿಗದಿತ ಅವಧಿಯಲ್ಲಿ ಪಂದ್ಯ 1–1ರಲ್ಲಿ ಡ್ರಾ ಆಗಿತ್ತು.

* 1996ರ ಯೂರೊ ಕಪ್‌ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ದ 1–1ರ ಸಮಬಲ ಸಾಧಿಸಿದ್ದ ಪಂದ್ಯದಲ್ಲಿ ಇಂಗ್ಲೆಂಡ್ 5–6ರ ಸೋಲು ಕಂಡಿತ್ತು.

* 1998ರ ವಿಶ್ವಕಪ್‌ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯ ನಿಗದಿ ಅವಧಿಯಲ್ಲಿ 2–2ರಲ್ಲಿ ಸಮ ಆಗಿತ್ತು. ಶೂಟೌಟ್‌ನಲ್ಲಿ 3–4ರಲ್ಲಿ ಇಂಗ್ಲೆಂಡ್ ಸೋತಿತ್ತು. ಅರ್ಜೆಂಟೀನಾ ಕ್ವಾರ್ಟರ್ ಫೈನಲ್‌ಗೇರಿತ್ತು.

* 2004ರ ಯೂರೊ ಕಪ್‌ ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯ 2–2ರಲ್ಲಿ ಸಮ ಆಗಿತ್ತು. ಶೂಟೌಟ್‌ನಲ್ಲಿ 5–6ರಲ್ಲಿ ಇಂಗ್ಲೆಂಡ್‌ ಪರಾಭವಗೊಂಡಿತ್ತು.

* 2006ರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ ಗೋಲು ರಹಿತ ಸಮಬಲ ಸಾಧಿಸಿದ್ದ ತಂಡ ನಂತರ 1–3ರಲ್ಲಿ ಸೋಲಿಗೆ ಶರಣಾಗಿತ್ತು.

* 2012ರ ಯೂರೊ ಕಪ್‌ನಲ್ಲಿ ಇಟಲಿ ಎದುರಿನಕ್ವಾರ್ಟರ್ ಫೈನಲ್‌ನ ನಿಗದಿ ಅವಧಿ ಗೋಲು ರಹಿತ ಸಮಬಲದಲ್ಲಿ ಮುಕ್ತಾಯಗೊಂಡಿತ್ತು. ಪೆನಾಲ್ಟಿಯಲ್ಲಿ ಇಂಗ್ಲೆಂಡ್ 2–4ರಲ್ಲಿ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.