ADVERTISEMENT

ಹಾಕಿ: ಸೆಮಿ ಪ್ರವೇಶಿಸಿದ ನೆದರ್ಲೆಂಡ್ಸ್‌, ಜರ್ಮನಿ

ಹಾಕಿ: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಕೊರಿಯಾ, ಇಂಗ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:08 IST
Last Updated 25 ಜನವರಿ 2023, 19:08 IST
ನೆದರ್ಲೆಂಡ್ಸ್‌ ಆಟಗಾರರ ಸಂಭ್ರಮ –ಪಿಟಿಐ ಚಿತ್ರ
ನೆದರ್ಲೆಂಡ್ಸ್‌ ಆಟಗಾರರ ಸಂಭ್ರಮ –ಪಿಟಿಐ ಚಿತ್ರ   

ಭುವನೇಶ್ವರ: ಸೊಗಸಾದ ಪ್ರದರ್ಶನ ನೀಡಿದ ನೆದರ್ಲೆಂಡ್ಸ್‌ ಮತ್ತು ಜರ್ಮನಿ ತಂಡಗಳು ಎಫ್‌ಐಎಚ್‌ ವಿಶ್ವಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದವು.

ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸ್ 5–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದರೆ, ಜರ್ಮನಿ ಪೆನಾಲ್ಟಿ ಶೂಟೌಟ್‌ನಲ್ಲಿ 4–3 ರಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದಿತು.

ಆಕ್ರಮಣಕಾರಿ ಆಟವಾಡಿದ ನೆದರ್ಲೆಂಡ್ಸ್ ತಂಡದ ಪರ ಕೊಯೆನ್‌ ಬಿಜೆನ್ (26 ಮತ್ತು 30ನೇ ನಿ.) ಎರಡು ಗೋಲುಗಳನ್ನು ತಂದಿತ್ತರು. ಇತರ ಗೋಲುಗಳನ್ನು ಜಸ್ಟೆನ್‌ ಬ್ಲಾಕ್, ಸ್ಟೆಯ್ನ್‌ ವಾನ್‌ ಹೈನಿಗೆನ್, ಟ್ಯುನ್‌ ಬೈನ್ಸ್‌ ತಂದಿತ್ತರು. ಕೊರಿಯಾ ತಂಡದ ಗೋಲನ್ನು ಇನ್‌ವೂ ಸಿಯೊ ಗಳಿಸಿದರು.

ADVERTISEMENT

ಇಂಗ್ಲೆಂಡ್‌– ಜರ್ಮನಿ ಪಂದ್ಯ ನಿಗದಿತ ಅವಧಿಯಲ್ಲಿ 2–2 ಗೋಲುಗಳಿಂದ ಸಮಬಲದಲ್ಲಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಗೆ ಅದೃಷ್ಟ ಒಲಿಯಿತು.

ಅಂಪೈರ್‌ಗೆ ಏಟು: ನೆದರ್ಲೆಂಡ್ಸ್‌– ದಕ್ಷಿಣ ಕೊರಿಯಾ ಪಂದ್ಯದ ವೇಳೆ ಜರ್ಮನಿಯ ಅಂಪೈರ್‌ ಬೆನ್‌ ಗೊಯೆಂಟೆನ್‌ ಅವರ ಮುಖಕ್ಕೆ ಚೆಂಡು ಬಡಿದು ಗಾಯಗೊಂಡರು. ಕೊರಿಯಾದ ಆಟಗಾರನ ಡ್ರ್ಯಾಗ್‌ಫ್ಲಿಕ್‌ ವೇಳೆ ಚೆಂಡು, ನೆದರ್ಲೆಂಡ್ಸ್‌ ಆಟಗಾರನ ಸ್ಟಿಕ್‌ಗೆ ತಾಗಿ ಅಂಪೈರ್‌ ಮುಖಕ್ಕೆ ಅಪ್ಪಳಿಸಿದೆ.

ಅವರನ್ನು ಕೂಡಲೇ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಪಂದ್ಯದ 28ನೇ ನಿಮಿಷದಲ್ಲಿ ಈ ಘಟನೆ ನಡೆಯಿತು. ಆ ಬಳಿಕ ಭಾರತದ ರಘು ಪ್ರಸಾದ್‌ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದರು.

ಭಾರತ– ಜಪಾನ್‌ ಸೆಣಸು: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲವಾಗಿರುವ ಭಾರತ ತಂಡ 9 ರಿಂದ 16ರ ವರೆಗಿನ ಸ್ಥಾನವನ್ನು ನಿರ್ಣಯಿಸಲು ಗುರುವಾರ ನಡೆಯುವ ಪಂದ್ಯದಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.