ADVERTISEMENT

ಟೋಕಿಯೊ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್‌ನಲ್ಲಿ ಭಗತ್ ಭರವಸೆ

ಯುವ ಆಟಗಾರ್ತಿ ಪಲಕ್ ಕೊಹ್ಲಿ ಜಯಭೇರಿ

ಪಿಟಿಐ
Published 2 ಸೆಪ್ಟೆಂಬರ್ 2021, 16:02 IST
Last Updated 2 ಸೆಪ್ಟೆಂಬರ್ 2021, 16:02 IST
ಚೆಂಡು ಹಿಂದಿರುಗಿಸಲು ಸಜ್ಜಾದ ಪಲಕ್ ಕೊಹ್ಲಿ– ಎಎಫ್‌ಪಿ ಚಿತ್ರ
ಚೆಂಡು ಹಿಂದಿರುಗಿಸಲು ಸಜ್ಜಾದ ಪಲಕ್ ಕೊಹ್ಲಿ– ಎಎಫ್‌ಪಿ ಚಿತ್ರ   

ಟೋಕಿಯೊ: ತಮ್ಮ ರ‍್ಯಾಂಕಿಂಗ್‌ಗೆ ತಕ್ಕ ಸಾಮರ್ಥ್ಯ ತೋರುತ್ತಿರುವ ವಿಶ್ವದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ, ಭಾರತದ ಪ್ರಮೋದ್ ಭಗತ್‌ ಪ್ಯಾರಾಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

‘ಎ’ ಗುಂಪಿನ ಎಸ್‌ಎಲ್‌3 ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಗುರುವಾರ 21-12 21-9ರಿಂದ ಉಕ್ರೇನ್‌ನ ಅಲೆಕ್ಸಾಂಡರ್‌ ಚಿರ್ಕೊವ್ ಅವರನ್ನು ಮಣಿಸಿದ ಪ್ರಮೋದ್‌ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ಪೋಲಿಯೊದಿಂದಾಗಿ ಬಾಲ್ಯದಲ್ಲಿಯೇ ಪ್ರಮೋದ್ ಅವರು ಎಡಗಾಲು ಊನವಾಗಿದೆ. ಆದರೆ ಅದನ್ನು ಮೀರಿದ ಅವರ ಛಲ ಮಾದರಿಯಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ತಲಾ ಎರಡು ಬಾರಿ ಅವರು ಚಿನ್ನದ ಪದಕಗಳು ಸೇರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿಹಲವು ಟ್ರೋಫಿಗಳು ಅವರಿಗೆ ಒಲಿದಿವೆ.

ADVERTISEMENT

ಭಾರತದ ಇನ್ನುಳಿದ ಬ್ಯಾಡ್ಮಿಂಟನ್ ಪಟುಗಳಾದ ಸುಹಾಸ್ ಯತಿರಾಜ್‌, ತರುಣ್ ದಿಲ್ಲೋನ್, ಕೃಷ್ಣಾ ನಗರ್ ಮತ್ತು ಪಲಕ್ ಕೊಹ್ಲಿ ಕೂಡ ಸಿಂಗಲ್ಸ್ ವಿಭಾಗಗಳಲ್ಲಿ ಸುಲಭ ಜಯ ಸಾಧಿಸಿ ಎರಡನೇ ಸುತ್ತಿಗೆ ಕಾಲಿಟ್ಟರು.

ಎಸ್‌ಎಲ್4 ವಿಭಾಗದಲ್ಲಿ 38 ವರ್ಷದ ಸುಹಾಸ್‌ 21-9, 21-3ರಿಂದ ಜರ್ಮನಿಯ ಜಾನ್ ನಿಕ್ಲಾಸ್‌ ಪೊಟ್‌ ಎದುರು, ತರುಣ್‌ 21-7, 21-13ರಿಂದ ಥಾಯ್ಲೆಂಡ್‌ನ ಸಿರಿಪೊಂಗ್‌ ಟೀಮ್‌ರೊಮ್ ಸವಾಲು ಮೀರಿದರು. ಎಸ್‌ಎಚ್‌6 ವಿಭಾಗದಲ್ಲಿ ಕೃಷ್ಣಾ 22-20, 21-10ರಿಂದ ಮಲೇಷ್ಯಾದ ತರೆಷೋ ದಿದಿನ್ ಎದುರು ಗೆದ್ದರು.

ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಹಣಾಹಣಿಯಲ್ಲಿ ಪಲಕ್‌ ಕೊಹ್ಲಿ 21-12, 21-18ರಿಂದ ಟರ್ಕಿಯ ಜೆಹ್ರಾ ಬಾಗ್ಲರ್‌ ಅವರನ್ನು ಮಣಿಸಿದರು. ಪಲಕ್ ಮೊದಲ ಸುತ್ತಿನಲ್ಲಿ ಸೋತಿದ್ದರು.

ಇದಕ್ಕೂ ಮೊದಲು ನಡೆದ ಮಹಿಳಾ ಡಬಲ್ಸ್ ವಿಭಾಗದ ಹಣಾಹಣಿಯಲ್ಲಿ ಪಲಕ್ ಮತ್ತು ಪಾರುಲ್ ಪರಮಾರ್‌ 7-21, 5-21ರಿಂದ ಚೀನಾದ ಚೆಂಗ್ ಹೆಫಾಂಗ್‌ ಮತ್ತು ಮಾ ಹುಯಿ ಎದುರು ಎಡವಿದರು.

ಪ್ರಮೋದ್ ಭಗತ್– ಟ್ವಿಟರ್ ಚಿತ್ರ

ಶೂಟಿಂಗ್‌: ರಾಹುಲ್‌ ಜಾಕಡ್‌ಗೆ ಐದನೇ ಸ್ಥಾನ

25 ಮೀಟರ್ಸ್‌ ಪಿ3 ಮಿಶ್ರ ಏರ್‌ ರೈಫಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರಾಹುಲ್ ಜಾಕಡ್‌ ಐದನೇ ಸ್ಥಾನ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸಿದ್ದ ಅವರು ಫೈನಲ್‌ನಲ್ಲಿ ಅದೇ ಸಾಮರ್ಥ್ಯ ತೋರುವಲ್ಲಿ ವಿಫಲರಾದರು. ಫೈನಲ್‌ನಲ್ಲಿ ಅವರು 12 ಸ್ಕೋರ್ ದಾಖಲಿಸಿದರು.

ಈ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್‌ ಆಕಾಶ್‌ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು.

ಚೀನಾದ ಕ್ಸಿಂಗ್‌ ಹುವಾಂಗ್ ಅವರು ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ (ಸ್ಕೋರ್‌ 27) ಚಿನ್ನ ಗೆದ್ದರೆ, ಪೋಲೆಂಡ್‌ನ ಜೈಮನ್‌ ಸೋವಿನ್‌ಸ್ಕಿ (21) ಬೆಳ್ಳಿ ಮತ್ತು ಉಕ್ರೇನ್‌ನ ಒಲೆಕ್ಸಿ (20) ಕಂಚು ಗೆದ್ದರು.

ಗಾಯ: ಹಿಂದೆ ಸರಿದ ಅರುಣಾ

ಮಹಿಳೆಯರ ಟೇಕ್ವಾಂಡೊ ಕೆ44–49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅರುಣಾ ತನ್ವರ್‌ ಅವರು ಗಂಭೀರ ಗಾಯದಿಂದಾಗ ರಿಪೇಜ್‌ ಸುತ್ತಿನಿಂದ ಹಿಂದೆ ಸರಿದರು.

ಮೊದಲ ಸುತ್ತಿನ ಬೌಟ್‌ನಲ್ಲಿ 29–9 ಅಂತರದಿಂದ ಸರ್ಬಿಯಾದ ಡ್ಯಾನಿಜೆಲಾ ಜೊವನೊವಿಚ್ ಎದುರು ಗೆದ್ದಿದ್ದರು. ಇದೇ ಹಣಾಹಣಿಯಲ್ಲೇ ಅವರ ಬಲಗಾಲು ಮತ್ತು ಎಡ ಮುಂಗೈಗೆ ಗಾಯವಾಯಿತು. ಆದರೂ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಅವರು ಪೆರುವಿನ ಎಸ್ಪಿನೊಜಾ ಕ್ಯಾರಾಂಜ ಎದುರು ಸೋಲನುಭವಿಸಿದರು.

ಎಸ್ಪಿನೊಜಾ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದರಿಂದ ಭಾರತದ ಆಟಗಾರ್ತಿಗೆ ರಿಪೇಜ್ ಆಡುವ ಅವಕಾಶ ಲಭಿಸಿತ್ತು. ಆದರೆ ಗಾಯದ ತೀವ್ರತೆ ಅಧಿಕವಾಗಿದ್ದರಿಂದ ಅರುಣಾ ರಿಂಗ್‌ಗೆ ಇಳಿಯಲಿಲ್ಲ. ಕೂಟದಿಂದಲೂ ಅವರು ಹಿಂದೆ ಸರಿದರು.

ಕ್ಯಾನೊಯ್ ಸ್ಪ್ರಿಂಟ್‌: ನಾಲ್ಕರ ಘಟ್ಟಕ್ಕೆ ಪ್ರಾಚಿ

ಉತ್ತಮ ಸಾಮರ್ಥ್ಯ ತೋರಿದ ಪ್ರಾಚಿ ಯಾದವ್ ಅವರು ಮಹಿಳೆಯರ ಕ್ಯಾನೊಯ್ ಸ್ಪ್ರಿಂಟ್ ವಾ 200 ಮೀಟರ್ಸ್ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ವಿಎಲ್‌2 ಕ್ಲಾಸ್‌ ವಿಭಾಗದ ಮೊದಲ ಹೀಟ್‌ನಲ್ಲಿ ಅವರು 1 ನಿಮಿಷ 11.098 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಹೀಟ್‌ನಲ್ಲಿ ಬ್ರಿಟನ್‌ನ ಎಮ್ಮಾ ವಿಗ್ಸ್ (58.084 ಸೆಕೆಂಡುಗಳು) ಅಗ್ರಸ್ಥಾನ ಗಳಿಸಿದರು.

ಸೆಮಿಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿವೆ.

ಪ್ರಾಚಿ ಅವರ ಸೊಂಟದಿಂದ ಕೆಳಗಿನ ಭಾಗಕ್ಕೆ ಪಾರ್ಶ್ವವಾಯು ಬಾಧಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಅವರು ಪ್ಯಾರಾ ಈಜುಪಟುವಾಗಿದ್ದರು. ಕೋಚ್‌ ವೀರೇಂದ್ರ ಕುಮಾರ್ ಅವರ ಸಲಹೆಯ ಮೇರೆಗೆ ಕ್ಯಾನೊಯಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

–ಪ್ರಾಚಿ ಯಾದವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.