ADVERTISEMENT

ತಂದೆಯೇ ನನ್ನ ಆತ್ಮೀಯ ಮಿತ್ರ, ಮಾರ್ಗದರ್ಶಕ ಆಗಿದ್ದರು: ಜೀವ್ ಮಿಲ್ಖಾ ಸಿಂಗ್

ಪಿಟಿಐ
Published 21 ಜೂನ್ 2021, 13:38 IST
Last Updated 21 ಜೂನ್ 2021, 13:38 IST
ಜೀವ್ ಮಿಲ್ಖಾ ಸಿಂಗ್ (ಬಲ)– ಪಿಟಿಐ ಚಿತ್ರ
ಜೀವ್ ಮಿಲ್ಖಾ ಸಿಂಗ್ (ಬಲ)– ಪಿಟಿಐ ಚಿತ್ರ   

ಚಂಡೀಗಡ: ತಂದೆಯೇ ನನಗೆ ಆತ್ಮೀಯ ಸ್ನೇಹಿತ, ಮಾರ್ಗದರ್ಶಿಯಾಗಿದ್ದರು. ಅವರನ್ನು ಕಳೆದುಕೊಂಡ ದುಃಖ ಜೀವನದುದ್ದಕ್ಕೂ ನಮ್ಮನ್ನು ಕಾಡಲಿದೆ ಎಂದು ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಪುತ್ರ, ಗಾಲ್ಫ್ ಆಟಗಾರ ಜೀವ ಮಿಲ್ಖಾ ಸಿಂಗ್ ಹೇಳಿದ್ದಾರೆ.

ಕೊರೊನಾ ಸೋಂಕಿತರಾಗಿದ್ದ 91 ಮಿಲ್ಖಾ ಸಿಂಗ್‌ ಶುಕ್ರವಾರ ನಿಧನರಾಗಿದ್ದರು.

‘ನನ್ನ ಅಪ್ಪ, ತಂದೆಗಿಂತ ಹೆಚ್ಚಿನ ಸ್ಥಾನದಲ್ಲಿದ್ದರು. ನನ್ನ ಆತ್ಮೀಯ ಸ್ನೇಹಿತ, ಮಾರ್ಗದರ್ಶಿ ಹಾಗೂ ಗುರು ಅವರೇ ಆಗಿದ್ದರು. ಈ ದುಃಖದಿಂದ ಹೊರಬರುವ ಆತ್ಮಸ್ಥೈರ್ಯವನ್ನು ಹೊಂದಿದ್ದೇನೆ ಎಂಬ ನಂಬಿಕೆಯಿದೆ. ಇದು ನನಗೆ ಅಗತ್ಯವೂ ಇದೆ‘ ಎಂದು 49 ವರ್ಷದ ಜೀವ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ದುಬೈನಲ್ಲಿದ್ದ ಜೀವ್ ಅವರು ತಂದೆಗೆ ಕೋವಿಡ್ ದೃಢಪಟ್ಟ ಬಳಿಕ ಭಾರತಕ್ಕೆ ಮರಳಿದ್ದರು.

ಮಿಲ್ಖಾ ಸಿಂಗ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆದಿತ್ತು. ಜೀವ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು.

ಮಿಲ್ಖಾ ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೂಡ ಕೋವಿಡ್‌ನಿಂದಲೇ ಸಾವನ್ನಪ್ಪಿದ್ದು ಕುಟುಂಬದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.

‘ಅಪ್ಪನ ಅಂತ್ಯಕ್ರಿಯೆಯ ವೇಳೆ ಸೇನಾ ವಾಹನದಲ್ಲಿ ಬಂದ ಯೋಧರು ಗೌರವ ಸಲ್ಲಿಸಿದ್ದು, ನನ್ನ ಕಣ್ಣಿಗೆ ಕಟ್ಟಿದಂತಿದೆ. ಭಾರತೀಯ ಸೈನ್ಯಕ್ಕೆ ನಮ್ಮ ಕುಟುಂಬ ಯಾವಾಗಲೂ ಋಣಿಯಾಗಿರುತ್ತದೆ‘ ಎಂದು ಜೀವ್ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.