ADVERTISEMENT

ಬೆನ್ನು ನೋವಿನಿಂದ ಖಿನ್ನತೆ: ಅಥ್ಲೆಟಿಕ್ಸ್‌ಗೆ ವಿದಾಯ ಹೇಳಲು ನಿರ್ಧರಿಸಿದ ಬರ್ಮನ್‌

ಪಿಟಿಐ
Published 17 ಸೆಪ್ಟೆಂಬರ್ 2021, 12:10 IST
Last Updated 17 ಸೆಪ್ಟೆಂಬರ್ 2021, 12:10 IST
ಸ್ವಪ್ನಾ ಬರ್ಮನ್‌– ಪಿಟಿಐ ಚಿತ್ರ
ಸ್ವಪ್ನಾ ಬರ್ಮನ್‌– ಪಿಟಿಐ ಚಿತ್ರ   

ಕೋಲ್ಕತ್ತ: ಬೆನ್ನು ನೋವಿನಿಂದಾಗಿ ಖಿನ್ನತೆಗೆ ಒಳಗಾಗಿರುವ ಭಾರತದ ಅಥ್ಲೀಟ್‌ ಸ್ವಪ್ನಾ ಬರ್ಮನ್ ಅವರು ಕ್ರೀಡೆಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ.

ರೈಲ್ವೆ ತಂಡವನ್ನು ಪ್ರತಿನಿಧಿಸುವ ಸ್ವಪ್ನಾ, ತೆಲಂಗಾಣದ ವಾರಂಗಲ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಹೈಜಂಪ್‌ನಲ್ಲಿ ಗುರುವಾರ ಚಿನ್ನದ ಪದಕ ಗೆದ್ದುಕೊಂಡಿದ್ದರು.

‘ನನಗೆ ನೋವು ಸಹಿಸಲಾಗುತ್ತಿಲ್ಲ. ತುಂಬಾ ಹತಾಶೆಗೆ ಒಳಗಾಗಿದ್ದೇನೆ. ಕ್ರೀಡಾಕೂಟಗಳಲ್ಲಿ ಇನ್ನು ಸ್ಪರ್ಧಿಸುವುದು ಸುಲಭವಲ್ಲ. ಸ್ವಲ್ಪ ಗೊಂದಲದಲ್ಲಿದ್ದರೂ ವಿದಾಯ ಹೇಳಲು ಸಿದ್ಧವಾಗಿದ್ದೇನೆ. ಕೋಲ್ಕತ್ತ ತಲುಪಿದ ಬಳಿಕ ಈ ಕುರಿತು ನಿರ್ಧಾರ ಪ್ರಕಟಿಸುವೆ‘ ಎಂದು ವಾರಂಗಲ್‌ನಲ್ಲಿ ಅವರು ತಿಳಿಸಿದರು.

ADVERTISEMENT

‘ನಾನು ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಬಯಸಿರಲಿಲ್ಲ. ಆದರೆ ತಂಡದೊಂದಿಗಿನ ಬದ್ಧತೆಯಿಂದಾಗಿ ಸ್ಪರ್ಧಿಸಬೇಕಾಯಿತು‘ ಎಂದು ಅವರು ಹೇಳಿದರು. ಅವರ ನೆಚ್ಚಿನ ವಿಭಾಗ ಹೆಪ್ಟಾಥ್ಲಾನ್‌ನಲ್ಲಿ ಕಣಕ್ಕಿಳಿಯಲಿಲ್ಲ.

ಸ್ವಪ್ನಾ 2018ರ ಜಕಾರ್ತ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೆಪ್ಟಾಥ್ಲಾನ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು. ಅವರ ಎರಡೂ ಪಾದದ ಮೇಲೆ ಆರು ಕಾಲ್ಬೆರಳುಗಳಿವೆ. 2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಅದು ಅವರ ಕೊನೆಯ ಅಂತರಾಷ್ಟ್ರೀಯ ಸ್ಪರ್ಧೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.