ADVERTISEMENT

ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2021, 2:58 IST
Last Updated 19 ಜೂನ್ 2021, 2:58 IST
ಮಿಲ್ಖಾ ಸಿಂಗ್
ಮಿಲ್ಖಾ ಸಿಂಗ್   

ನವದೆಹಲಿ: ಒಲಿಂಪಿಯನ್ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಕೆಲವು ದಿನಗಳ ಹಿಂದಷ್ಟೇ ಮಿಲ್ಖಾ ಸಿಂಗ್‌ ಜೀ ಅವರ ಬಳಿ ಮಾತನಾಡಿದ್ದೆ. ಅದು ನಮ್ಮ ಕೊನೆಯ ಸಂಭಾಷಣೆಯಾಗಿರಬಹುದು ಎಂದು ಭಾವಿಸಿರಲಿಲ್ಲ. ಹಲವಾರು ಉದಯೋನ್ಮುಖ ಕ್ರೀಡಾಪಟುಗಳು ಅವರ ಜೀವನ ಯಾನದಿಂದ ಸ್ಫೂರ್ತಿ ಪಡೆಯಲಿದ್ದಾರೆ. ಅವರ ಅಗಲುವಿಕೆಯ ಸಂತಾಪಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಮಿಲ್ಖಾ ಸಿಂಗ್‌ ನಿಧನದೊಂದಿಗೆ ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಕ್ರೀಡಾಪಟುವೊಬ್ಬರನ್ನು ನಾವು ಕಳೆದುಕೊಂಡಂತಾಗಿದೆ. ಅವರ ಪ್ರೇರಣಾದಾಯಕ ವ್ಯಕ್ತಿತ್ವವು ಲಕ್ಷಾಂತರ ಜನರನ್ನು ಸೆಳೆದಿತ್ತು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

‘ಮಿಲ್ಖಾ ಸಿಂಗ್‌ ನಿಧನವು ನನ್ನನ್ನು ದುಃಖತಪ್ತನನ್ನಾಗಿ ಮಾಡಿದೆ. ಅವರ ಹೋರಾಟಗಳ ಕಥೆ ಮತ್ತು ವ್ಯಕ್ತಿತ್ವದ ಶಕ್ತಿಯು ತಲೆಮಾರುಗಳ ಕಾಲ ಭಾರತೀಯರಿಗೆ ಸ್ಫೂರ್ತಿ ನೀಡಲಿದೆ. ಸಂತಾಪಗಳು’ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

‘ಮಿಲ್ಖಾ ಸಿಂಗ್ ಭಾರತದ ಹೆಮ್ಮೆ. ಅವರ ಸಾವಿನಿಂದ ತೀವ್ರ ದುಃಖವಾಗಿದೆ. ಕೆಲವು ದಿನಗಳ ಹಿಂದೆ ಅವರ ಪತ್ನಿ ಸಹ ನಿಧನರಾಗಿದ್ದರು. ಕಳೆದ ವರ್ಷ ನಾನು ಅವರ ಮನೆಯಲ್ಲಿ 2 ಗಂಟೆಗಳ ಕಾಲ ಇದ್ದು ಅವರ ಜತೆ ಮಾತನಾಡಿದ್ದೆ. ಇಬ್ಬರೂ ತುಂಬಾ ದಯಾಮಯಿಗಳಾಗಿದ್ದರು, ಓಂ ಶಾಂತಿ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

‘ಮಿಲ್ಖಾ ಸಿಂಗ್ ಜೀ ನಮ್ಮನ್ನಗಲಿದ್ದಾರೆ. ಆದರೆ, ಮಿಲ್ಖಾ ಎಂಬ ಹೆಸರು ಧೈರ್ಯ ಮತ್ತು ಇಚ್ಛಾಶಕ್ತಿಯ ಪರ್ಯಾಯವಾಗಿ ನಮ್ಮಲ್ಲುಳಿಯಲಿದೆ. ಎಂಥಾ ಅದ್ಭುತ ಮನುಷ್ಯ. ಓಂ ಶಾಂತಿ’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ. ಜತೆಗೆ, ಮಿಲ್ಖಾ ಸಿಂಗ್ ಅವರ ವಿಡಿಯೊ ತುಣುಕೊಂದನ್ನೂ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.