ADVERTISEMENT

Paralympics: ಬೆಳ್ಳಿ ಗೆದ್ದ ಭಾವಿನಾಗೆ ಗುಜರಾತ್ ಸರ್ಕಾರದಿಂದ ₹3 ಕೋಟಿ

ಪಿಟಿಐ
Published 29 ಆಗಸ್ಟ್ 2021, 8:45 IST
Last Updated 29 ಆಗಸ್ಟ್ 2021, 8:45 IST
ಭಾವಿನಾ ಪಟೇಲ್‌
ಭಾವಿನಾ ಪಟೇಲ್‌   

ಅಹಮದಾಬಾದ್: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್‌ಗೆ ಗುಜರಾತ್ ಸರ್ಕಾರ ₹3 ಕೋಟಿ ಬಹುಮಾನ ಘೋಷಿಸಿದೆ.

ಪಟೇಲ್ ಅವರು ಗುಜರಾತ್‌ನ ಮೆಹ್‌ಸಾನಾ ಜಿಲ್ಲೆಯ ಸುಂಧಿಯಾ ಗ್ರಾಮದವರು. 34 ವರ್ಷದ ಭಾವಿನಾ ಬೆನ್‌, ಭಾನುವಾರ ನಡೆದ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್ 4 ಫೈನಲ್ ಹಣಾಹಣಿಯಲ್ಲಿ ಚೀನಾದ ವಿಶ್ವ ನಂ.1 ಯಿಂಗ್ ಜೌ ವಿರುದ್ಧ ಪರಾಭವಗೊಂಡಿದ್ದರು. 19 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಚೀನಾದ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕ ಗಳಿಸಿದ್ದಾರೆ.

‘ಮೆಹ್‌ಸಾನಾ ಜಿಲ್ಲೆಯ ಪುತ್ರಿ ಭಾವಿನಾ ಬೆನ್‌ ಟೇಬಲ್ ಟೆನಿಸ್‌ನಲ್ಲಿ ತಮ್ಮ ಅಸಾಧಾರಣ ಸಾಧನೆ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರನ್ನು ಮುಖ್ಯಮಂತ್ರಿ ವಿಜಯ್ ರೂಪಾಣಿ ಅಭಿನಂದಿಸಿದ್ದಾರೆ’ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ತಮ್ಮ ಕ್ರೀಡಾ ಕೌಶಲದ ಮೂಲಕ ಗುಜರಾತ್ ಮತ್ತು ದೇಶವು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರದ ‘ದಿವ್ಯಾಂಗ ಖೇಲ್ ಪ್ರತಿಭಾ ಪ್ರೋತ್ಸಾಹನ್ ಪುರಸ್ಕಾರ್ ಯೋಜನಾ’ ಅಡಿ ₹3 ಕೋಟಿ ಬಹುಮಾನ ಘೋಷಿಸಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.